ಕರಾಚಿ: ಮುಂಬರುವ ಏಷ್ಯಾ ಕಪ್ನಲ್ಲಿ (Asia Cup 2023 ) ಪಾಕಿಸ್ತಾನದಲ್ಲಿ ನಡೆಯುವುದು ಬಹುತೇಕ ಡೌಟ್. ಏಷ್ಯಾ ಕ್ರಿಕೆಟ್ ಕೌನ್ಸಿಲ್ ತಟಸ್ಥ ಜಾಗದಲ್ಲಿ ಟೂರ್ನಿ ನಡೆಸಲು ಯೋಜನೆ ರೂಪಿಸಿಕೊಂಡಿರುವ ಕಾರಣ ಯುಎಇ ಅಥವಾ ಶ್ರೀಲಂಕಾದಲ್ಲಿ ಟೂರ್ನಿ ಆಯೋಜನೆಗೊಳ್ಳಬಹುದು. ಆದರೆ, ನಮ್ಮ ಆತಿಥ್ಯದಲ್ಲಿ ನಮ್ಮ ದೇಶದಲ್ಲೇ ಟೂರ್ನಿ ನಡೆಯಬೇಕು ಎಂಬುದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಒತ್ತಾಯ. ಆದರೆ, ಅವರ ಮಾತಿಗೆ ಯಾರೂ ಕಿಮ್ಮತ್ತು ನೀಡುತ್ತಿಲ್ಲ. ಹೀಗಾಗಿ ಪಾಕಿಸ್ತಾನದ ಮಾಜಿ ಆಟಗಾರರು ಹೇಳಿಕೆಗಳನ್ನು ನೀಡುವುದು ಮುಂದುವರಿದಿದೆ. ಇದೀಗ ಕಮ್ರಾನ್ ಅಕ್ಮಲ್ ಕೂಡ ನಮಗೂ ಮರ್ಯಾದೆ ಉಂಟು ಎಂಬ ಹೇಳಿಕೆ ಕೊಟ್ಟಿದ್ದಾರೆ.
ನಾದಿರ್ ಅಲಿಯ ಯೂ ಟ್ಯೂಬ್ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ಕಮ್ರಾನ್ ಅಕ್ಮಲ್, ಏಷ್ಯಾ ಕಪ್ ಪಾಕಿಸ್ತಾನದಲ್ಲೇ ನಡೆಯಬೇಕು ಹಾಗೂ ಅದನ್ನು ವಿರೋಧಿಸುವ ಹಕ್ಕು ಭಾರತಕ್ಕೆ ಇಲ್ಲ ಎಂಬುದಾಗಿ ಹೇಳಿಕೆ ಕೊಟ್ಟಿದ್ದಾರೆ.
ಇದನ್ನೂ ಓದಿ : Asia Cup 2023 : ಏಷ್ಯಾ ಕಪ್ ಕ್ರಿಕೆಟ್ ಪಾಕಿಸ್ತಾನದಲ್ಲಿ ನಡೆಯದಂತೆ ನೋಡಿಕೊಂಡ ಜಯ್ ಶಾ!
ನಮ್ಮ ಆತಿಥ್ಯದಲ್ಲಿ ಇಲ್ಲೇ ಪಂದ್ಯ ನಡೆಯಬೇಕು. ಒಂದು ವೇಳೆ ಟೂರ್ನಿಯನ್ನು ಯುಎಇನಲ್ಲಿ ಆಯೋಜನೆ ಮಾಡಿದರೆ ನಾವು ಕೂಡ ಅದಕ್ಕೆ ಪ್ರತಿಕ್ರಿಯೆ ಕೊಡಬೇಕಾಗುತ್ತದೆ. ಭಾರತಕ್ಕೆ ಹೋಗಿ ಅಲ್ಲಿನ ತಂಡದ ವಿರುದ್ಧ ಆಡುವುದಿಲ್ಲ. ಐಸಿಸಿಗೆ ಇದನ್ನೆಲ್ಲ ನಿರ್ವಹಣೆ ಮಾಡುವ ಅಧಿಕಾರ ಇದ್ದರೂ ಪಿಸಿಬಿ ಭಾರತಕ್ಕೆ ಹೋಗುವುದನ್ನು ವಿರೋಧಿಸಲಿದೆ ಎಂಬುದಾಗಿ ಅವರು ಹೇಳಿದರು.
ಮುಂದಿನ ಮಾರ್ಚ್ನಲ್ಲಿ ಏಷ್ಯಾ ಕ್ರಿಕೆಟ್ ಕೌನ್ಸಿಲ್ ಸಭೆ ಸೇರಲಿದೆ. ಆ ಸಭೆಯಲ್ಲಿ ಟೂರ್ನಿ ಎಲ್ಲಿ ನಡೆಯುವುದು ಎಂಬ ತೀರ್ಮಾನ ಪ್ರಕಟಗೊಳ್ಳಲಿದೆ.