ಬೆಂಗಳೂರು: ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಹಾಲಿ ಆವೃತ್ತಿಯ ಐಪಿಎಲ್ನ (IPL 2023) ತನ್ನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್ ಸುಲಭ ಜಯ ದಾಖಲಿಸಿದೆ. ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಅನುಕ್ರಮವಾಗಿ 73 ಹಾಗೂ 82 ರನ್ ಬಾರಿಸಿ ಗೆಲುವಿನ ರೂವಾರಿಗಳೆನಿಸಿಕೊಂಡಿದ್ದಾರೆ. ಇವರಿಬ್ಬರೂ ಬೆಂಗಳೂರು ಪಿಚ್ನಲ್ಲಿ ಅಬ್ಬರಿಸುವ ಜತೆಗೆ ಅಭಿಮಾನಿಗಳಿಗೆ ಬೌಂಡರಿ, ಸಿಕ್ಸರ್ಗಳನ್ನು ಬಾರಿಸಿ ಮನರಂಜನೆ ಒದಗಿಸಿದ್ದಾರೆ. ಇವರಿಬ್ಬರ ಪ್ರದರ್ಶನಕ್ಕೆ ಎದುರಾಳಿ ಮುಂಬಯಿ ಇಂಡಿಯನ್ಸ್ ತಂಡ ಸಂಪೂರ್ಣವಾಗಿ ಮಂಕಾಗಿ ಹೋಗಿತ್ತು. ಈ ಬಗ್ಗೆ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ. ನಾವು ಕೆಟ್ಟದಾಗಿ ಬ್ಯಾಟ್ ಮಾಡಿದೆವು ಎಂದು ತಪ್ಪೊಪ್ಪಿಕೊಂಡಿದ್ದಾರೆ.
ಪಂದ್ಯದ ಕುರಿತು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್, ಬೆಂಗಳೂರು ಪಿಚ್ ಅತ್ಯುತ್ತಮವಾಗಿತ್ತು. ಆದರೆ, ನಾವು ಉತ್ತಮ ಆರಂಭ ಪಡೆಯಲಿಲ್ಲ. ನಮ್ಮ ತಂಡದ ಬ್ಯಾಟರ್ಗಳು ಕೆಟ್ಟದಾಗಿ ಬ್ಯಾಟ್ ಮಾಡಿದರು. ಬೌಲರ್ಗಳು ಕೂಡ ಮಾರಕ ದಾಳಿ ಸಂಘಟಿಸಲಿಲ್ಲ. ಹೀಗಾಗಿ ಸೋಲು ಎದುರಾಯಿತು. ಇವರೆಲ್ಲರ ನಡುವೆ ತಿಲಕ್ ವರ್ಮಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಅವರ ಶ್ರಮಕ್ಕೆ ನಮ್ಮೆಲ್ಲರ ಮೆಚ್ಚುಗೆಯಿದೆ ಎಂದು ರೋಹಿತ್ ಶರ್ಮಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : IPL 2023: ಐಪಿಎಲ್ನಲ್ಲಿ ನೂತನ ದಾಖಲೆ ಬರೆದ ವಿರಾಟ್ ಕೊಹ್ಲಿ; ಏನದು?
ಬ್ಯಾಟಿಂಗ್ ಮಾಡುವುದಕ್ಕೆ ಪೂರಕವಾಗಿರುವ ಪಿಚ್ ನೀಡಲಾಗಿತ್ತು. ಆದರೆ, ನಮ್ಮ ತಂಡದ ಬ್ಯಾಟರ್ಗಳು ಅನುಕೂಲಗಳನ್ನು ಬಳಸಿಕೊಂಡಿಲ್ಲ. ನಾವು ಪೇರಿಸಿದ್ದ ಮೊತ್ತಕ್ಕೆ ಇನ್ನೊಂದು 30 ಅಥವಾ 40 ರನ್ ಸೇರ್ಪಡೆಗೊಂಡಿದ್ದರೆ ಗೆಲುವಿನ ಅವಕಾಶ ಹೆಚ್ಚಿತ್ತು. ಆದರೆ, ನಾವು ಬ್ಯಾಟ್ ಮಾಡುವುದಕ್ಕೆ ಒದ್ಡಾಡಿದೆವು. ಇದ್ದದ್ದರಲ್ಲಿ ತಿಲಕ್ ವರ್ಮಾ ಉತ್ತಮ ಪ್ರದರ್ಶನ ನೀಡಿದರು ಎಂದು ಅವರು ಹೊಗಳಿದ್ದಾರೆ.
ವಿಫಲ ಬೌಲಿಂಗ್
ಮುಂಬಯಿ ತಂಡದ ಬ್ಯಾಟರ್ಗಳು ಕೆಚ್ಚೆದೆ ತೋರಿಸದ ಕಾರಣ ಬೌಲರ್ಗಳಿಗೂ ಆರ್ಸಿಬಿ ಮೇಳೆ ಒತ್ತಡ ಹೇರಲು ಸಾಧ್ಯವಾಗಲಿಲ್ಲ. ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಮೊದಲ ವಿಕೆಟ್ಗೆ 148 ರನ್ ಪೇರಿಸಿದ ಕಾರಣ ಉತ್ತಮ ಆರಂಭ ದೊರಕಿತು. ಅವರಿಬ್ಬರೂ ಅರ್ಧ ಶತಕಗಳನ್ನು ಬಾರಿಸಿದ್ದ ಕಾರಣ ಆರ್ಸಿಬಿ ಜಯ ಸುಲಭವಾಯಿತು. ಕೊನೆ ಹಂತದಲ್ಲಿ ಎರಡು ವಿಕೆಟ್ ಉರುಳಿಸಿದ ಹೊರತಾಗಿಯೂ ಮುಂಬೈ ತಂಡಕ್ಕೆ ಜಯ ನಿಲುಕಲಿಲ್ಲ.
ಸೋಲಿಗೆ ಜಸ್ಪ್ರಿತ್ ಬುಮ್ರಾ ಅವರ ಅಲಭ್ಯತೆ ಕಾರಣ ಎಂಬುದನ್ನೂ ರೋಹಿತ್ ಶರ್ಮಾ ಒಪ್ಪಿಕೊಂಡಿಲ್ಲ. ಕಳೆದ ಆರೇಳು ತಿಂಗಳಿಂದ ನಾವು ಜಸ್ಪ್ರಿತ್ ಬುಮ್ರಾ ಅವರ ಅಲಭ್ಯತೆಯಿಂದಲೇ ಆಡುತ್ತಿದ್ದೇವೆ. ನಮ್ಮಲ್ಲಿ ಬೇರೆ ಪ್ರತಿಭಾವಂತ ಬೌಲರ್ಗಳೂ ಇದ್ದಾರೆ. ಅದರಲ್ಲಿ ಕೆಲವರು ಈ ಹಿಂದೆ ಐಪಿಎಲ್ನಲ್ಲಿ ಆಡಿಲ್ಲ. ಅವರಿಗೆ ಎಲ್ಲವೂ ಹೊಸದು. ಹಾಗೆಂದು ಅವರು ಪ್ರದರ್ಶನ ಸೀಮಿತಲ್ಲ. ಮುಂದಿನ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಅವರು ಹೇಳಿದರು.
ಫಾಫ್ ಡು ಪ್ಲೆಸಿಸ್ ಏನಂದರು?
ಗೆಲುವಿನ ಕುರಿತು ಮಾತನಾಡಿದ ಫಾಫ್ ಡು ಪ್ಲೆಸಿಸ್ ಮಾತನಾಡಿ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾನು ಆರ್ಸಿಬಿ ನಾಯಕನಾಗಿ ಆಡಿದ ಬಳಿಕ ಮೊದಲ ಬಾರಿಗೆ ಆಡುತ್ತಿದ್ದೇನೆ. ಆದರೆ, ಚಿನ್ನ ಸ್ವಾಮಿಯಲ್ಲಿ ಆಡುವುದು ಅದ್ಬುತ ಅನುಭವ. ಅಂತೆಯೇ ವಿರಾಟ್ ಕೊಹ್ಲಿ ಜತೆ ಆಡುವುದು ಇನ್ನಷ್ಟು ಖುಷಿಯ ವಿಚಾರ. ನಮ್ಮ ಕ್ಯಾಂಪೇನ್ ಅನ್ನು ಅತ್ಯುತ್ತಮವಾಗಿ ಆರಂಭಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ತಮ್ಮ ತಂಡದ ಗೆಲುವಿನ ಹಿಂದೆ ಬೌಲರ್ಗಳ ಕೊಡುಗೆ ಇರುವುದನ್ನೂ ಸ್ಮರಿಸಲು ಫಾಫ್ ಡು ಪ್ಲೆಸಿಸ್ ಮರೆಯಲಿಲ್ಲ. ಮುಂಬಯಿ ಇಂಡಿಯನ್ಸ್ ತಂಡದ ಆರಂಭಿಕ ಬ್ಯಾಟರ್ಗಳನ್ನು ಔಟ್ ಮಾಡುವ ಮೂಲಕ ಅವರು ಗೆಲುವಿಗೆ ಸಹಕರಿಸಿದ್ದಾರೆ ಎಂದು ಹೇಳಿದರು.