ಮೊಹಾಲಿ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಟಿ೨೦ ಸರಣಿಗಾಗಿ ಭಾರತ ತಂಡ ಸಜ್ಜಾಗಿದ್ದು, ಮೊಹಾಲಿಯಲ್ಲಿ ಸತತ ಅಭ್ಯಾಸ ನಡೆಸುತ್ತಿದೆ. ಅಂತೆಯೇ ಟೀಮ್ ಇಂಡಿಯಾದ ಉಪನಾಯಕ ಹಾಗೂ ಕನ್ನಡಿಗ ಕೆ. ಎಲ್ ರಾಹುಲ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಫಾರ್ಮ್ ವಿಚಾರದಲ್ಲಿ ತಾವೆದುರಿಸುತ್ತಿರುವ ಟೀಕೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನೀವು ನಮ್ಮನ್ನು ಬೈಯುವುದಕ್ಕಿಂತ ಹೆಚ್ಚು ನಮ್ಮನ್ನೇ ನಾವು ಬೈಯುತ್ತೇವೆ ಎಂಬುದಾಗಿಯೂ ನುಡಿದಿದ್ದಾರೆ.
ಕೆ. ಎಲ್ ರಾಹುಲ್ ಅವರು ಟಿ೨೦ ಮಾದರಿಯ ೬೧ ಪಂದ್ಯಗಳಲ್ಲಿ 1963 ರನ್ ಬಾರಿಸಿದ್ದು, 140.91 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಆದರೂ ಇತ್ತೀಚಿನ ದಿನಗಳಲ್ಲಿ ಅವರ ರನ್ ಗಳಿಕೆ ವೇಗ ಇಳಿದಿದ್ದು, ಆ ಬಗ್ಗೆ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಈ ವಿಷಯ ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪಗೊಂಡ ಹಿನ್ನೆಲೆಯಲ್ಲಿ ಮಾತನಾಡಿದ ಅವರು “ಪ್ರತಿ ಬಾರಿಯೂ ಟೀಕೆಗಳು ಎದುರಾಗುತ್ತಿರುತ್ತವೆ. ಅದಕ್ಕಿಂತ ಮಿಗಿಲಾಗಿ ನಮ್ಮ ಪ್ರದರ್ಶನ ಉತ್ತಮವಾಗಿಲ್ಲ ಎಂದರೆ, ನಮ್ಮನ್ನು ನಾವೇ ಬೈದುಕೊಳ್ಳುತ್ತೇವೆ. ಇಲ್ಲಿ ನಾವು ದೇಶವನ್ನು ಪ್ರತಿನಿಧಿಸುತ್ತೇವೆ. ಹೀಗಾಗಿ ಗೆದ್ದೇ ಗೆಲ್ಲುವ ಹಠದೊಂದಿಗೆ ಆಡುತ್ತೇವೆ,” ಎಂದು ಅವರು ಹೇಳಿದ್ದಾರೆ.
“ಕ್ರಿಕೆಟ್ ಮೈದಾನದಲ್ಲಿ ಆಗಲಿ, ಡ್ರೆಸಿಂಗ್ ರೂಮ್‌ನಲ್ಲೇ ಆಗಲಿ, ಯಾರು ಕೂಡ ಪರಿಪೂರ್ಣರಲ್ಲ. ಎಲ್ಲರಿಗೂ ಅವರದ್ದೇ ಆದ ನ್ಯೂನತೆಗಳು ಇರುತ್ತವೆ. ಅದನ್ನೂ ಮೀರಿ ಉತ್ತಮ ಪ್ರದರ್ಶನ ನೀಡುವುದು ನಮ್ಮ ಗುರಿಯಾಗಿರುತ್ತದೆ. ಯಾವುದೇ ಬ್ಯಾಟರ್ ಒಂದೇ ಮಾದರಿಯ ಸ್ಟ್ರೈಕ್ ರೇಟ್ ಕಾಪಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಕೆಲವೊಂದು ಬಾರಿ ತಂಡದ ಅಗತ್ಯಕ್ಕೆ ತಕ್ಕ ಹಾಗೆ ಬ್ಯಾಟ್ ಬೀಸಬೇಕಾಗುತ್ತದೆ. ೨೦೦ರಷ್ಟು ಸ್ಟ್ರೈಕ್ ರೇಟ್ ಬೇಕು ಎಂದಾದಾಗ ೧೦೦-೧೨೦ ಸ್ಟ್ರೈಕ್ ರೇಟ್‌ನಲ್ಲಿ ಆಡುವುದಿಲ್ಲ. ಇಂಥ ವಿಚಾರಗಳನ್ನು ಲೆಕ್ಕಾಚಾರ ಹಾಕಿ ಹೇಳುವುದಕ್ಕೆ ಎಲ್ಲರಿಗೂ ಸಾಧ್ಯವಿಲ್ಲ. ನೋಡುವಾಗ ಅದು ಕಡಿಮೆ ಇದೆ ಎಂದು ಎನಿಸುತ್ತದೆ,” ಎಂದು ಹೇಳಿದರು.
“ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದ ದಿನ ನಮಗೂ ಬೇಸರ ಉಂಟಾಗುತ್ತದೆ. ಇದರಿಂದ ನಮ್ಮ ತಂಡಕ್ಕೆ ನಷ್ಟವಾಗುತ್ತದೆ ಎಂಬುದನ್ನು ತಿಳಿದು ಬೇಸರವಾಗುತ್ತದೆ. ನಾವು ಉತ್ತಮ ಪ್ರದರ್ಶನ ನೀಡಿದಾಗ ನಮ್ಮ ಬೆನ್ನು ತಟ್ಟುವ ನಾಯಕ, ಕೋಚ್ ಹಾಗೂ ಸಹಾಯ ಸಿಬ್ಬಂದಿ, ನಾವು ನಿರಾಸೆ ಮೂಡಿಸಿದಾಗಲೂ ಜತೆಗಿರುತ್ತಾರೆ,” ಎಂದು ರಾಹುಲ್ ನುಡಿದಿದ್ದಾರೆ.
ಇದನ್ನೂ ಓದಿ | Team India | ಕೆ. ಎಲ್ ರಾಹುಲ್ ಸ್ಥಾನ ಕಸಿಯಲಿದ್ದಾರೆ ಹಾರ್ದಿಕ್ ಪಾಂಡ್ಯ