ಇಂದೋರ್ : ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ (INDvsAUS) ಮೂರನೇ ಪಂದ್ಯದಲ್ಲಿ ಭಾರತ ತಂಡ 9 ವಿಕೆಟ್ಗಳ ಹೀನಾಯ ಸೋಲಿಗೆ ಒಳಗಾಗಿದೆ. ಇದರೊಂದಿಗೆ ಸರಣಿಯು 2-1 ಸಮಬಲ ಸಾಧಿಸಿದೆ. ಈ ಫಲಿತಾಂಶದ ಬಳಿಕ ಮಿತಿ ಮೀರಿ ಟರ್ನ್ ಆಗುವು ಪಿಚ್ನ ಕುರಿತು ಚರ್ಚೆಗಳು ಆರಂಭಗೊಂಡಿವೆ. ನಾಯಕ ರೋಹಿತ್ ಶರ್ಮಾ (Rohit Sharma) ಅವರಿಗೂ ಈ ಕುರಿತು ಪಂದ್ಯದ ಬಳಿಕ ಪ್ರಶ್ನೆ ಕೇಳಿದಾಗ ಅವರು ತೀಕ್ಷ್ಣವಾದ ಉತ್ತರ ಕೊಟ್ಟಿದ್ದಾರೆ. ಪಿಚ್ ಟರ್ನ್ ಆಗುವುದು ಒಂದು ಸಂಗತಿಯೇ ಅಲ್ಲ. ನಮಗೆ ಫಲಿತಾಂಶ ದೊರಕಬೇಕು ಎಂದು ಅವರು ಹೇಳಿದ್ದಾರೆ.
ಹೋಳ್ಕರ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯ ಎರಡೂವರೆ ದಿನದಲ್ಲಿ ಮುಕ್ತಾಯ ಕಂಡಿತ್ತು. ಮೊದಲೆರಡು ಪಂದ್ಯಗಳಲ್ಲಿ ಭಾರತದ ಸ್ಪಿನ್ನರ್ಗಳು ಪ್ರವಾಸಿ ಬಳಗವನ್ನು ಕಟ್ಟಿ ಹಾಕಿದ್ದರೆ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಸ್ಪಿನ್ನರ್ಗಳು ಭಾರತದ ಬ್ಯಾಟರ್ಗಳಿಗೆ ಕಡಿವಾಣ ಹಾಕಿದ್ದರು. ಒಟ್ಟಿನಲ್ಲಿ ಮೂರು ಪಂದ್ಯಗಳೂ ಮೂರು ದಿನಗಳ ಒಳಗೆ ಮುಕ್ತಾಯಗೊಂಡಿವೆ. ಹೀಗಾಗಿ ಭಾರತದಲ್ಲಿ ಪಿಚ್ ಮಿತಿ ಮೀರಿ ಟರ್ನ್ ತೆಗೆದುಕೊಳ್ಳುತ್ತಿರುವುದು ಸರಿಯಲ್ಲ ಎಂಬ ವಾದ ಶುರುವಾಗಿದೆ. ಇದನ್ನು ರೋಹಿತ್ ಒಪ್ಪಿಲ್ಲ.
ಪ್ರತಿಯೊಂದು ಸೀರಿಸ್ಗೆ ಮೊದಲು ಯಾವ ರೀತಿಯ ಪಿಚ್ನಲ್ಲಿ ಆಡಲು ಬಯಸುತ್ತೇವೆ ಎಂಬುದನ್ನು ಚರ್ಚಿಸುತ್ತೇವೆ. ಅಂತೆಯೇ ಈ ಬಾರಿ ಸ್ಪಿನ್ ಪಿಚ್ ಆಯ್ಕೆ ಮಾಡಿಕೊಂಡಿದ್ದೆವು. ಹಾಗೆಂದು ನಾವು ಬ್ಯಾಟರ್ಗಳ ಮೇಳೆ ಒತ್ತಡ ಹೇರುತ್ತಿದ್ದೇವೆ ಎಂದರ್ಥವಲ್ಲ. ನಾವು ಗೆದ್ದರೆ ಎಲ್ಲವೂ ಸರಿ ಇದೆ ಎಂದು ಅಂದುಕೊಳ್ಳುತ್ತೇವೆ. ಇಲ್ಲದಿದ್ದರೆ ನಮ್ಮ ಬ್ಯಾಟಿಂಗ್ ಬಗ್ಗೆ ಪ್ರಶ್ನಿಸುತ್ತೇವೆ ಎಂದು ರೋಹಿತ್ ಶರ್ಮ ಪಂದ್ಯದ ಬಳಿಕದ ಪತ್ರಿಕಾಗೋಷ್ಠಿಯಲ್ಲಿ ತೀಕ್ಷ್ಣ ಉತ್ತರ ಕೊಟ್ಟಿದ್ದಾರೆ.
ಇದನ್ನೂ ಓದಿ : IND VS AUS: ಮೂರನೇ ಟೆಸ್ಟ್ನಲ್ಲಿ ರೋಹಿತ್ ಶರ್ಮಾ ಜತೆಗಾರ ಯಾರು?; ಇಕ್ಕಟ್ಟಿನ ಸ್ಥಿತಿಯಲ್ಲಿ ಆಯ್ಕೆ ಸಮಿತಿ
ಪಿಚ್ ಕುರಿತು ಚರ್ಚೆ ನಡೆಸುವ ಪ್ರವೃತ್ತಿ ಹೆಚ್ಚಾಗಿದೆ. ನಾವು ಯಾವತ್ತೂ ಪಿಚ್ ಕುರಿತು ಗಮನ ಕೇಂದ್ರೀಕರಿಸುವುದಿಲ್ಲ. ಬದಲಾಗಿ ಆಟಕ್ಕೆ ಗಮನ ನೀಡುತ್ತೇವೆ. ಪಿಚ್ ಕುರಿತು ಟೀಕೆ ಮಾಡುತ್ತಿರುವ ಮಾಜಿ ಕ್ರಿಕೆಟಿಗರು ಇಂಥ ಪಿಚ್ಗಳಲ್ಲಿ ಆಡಿದ್ದಾರೋ ಎಂಬುದು ಗೊತ್ತಿಲ್ಲ. ಆದರೆ, ನಮಗೆ ಇಂಥ ಸವಾಲಿನ ಪಿಚ್ನಲ್ಲಿ ಆಡುವುದೇ ಇಷ್ಟ. ಸ್ಪಿನ್ಗೆ ಆಡುವುದೇ ನಮ್ಮ ಸಾಮರ್ಥ್ಯ. ತವರಿನ ಸರಣಿಯಲ್ಲಿ ನಾವು ಸ್ಪಿನ್ಗೆ ಆಡುವುದನ್ನೇ ಬಯಸುತ್ತೇವೆ. ಹೊರಗಿನ ವ್ಯಕ್ತಿಗಳ ಏನು ಹೇಳುತ್ತಾರೆ ಎಂಬುದನ್ನು ಗಮನ ಹರಿಸುವುದಿಲ್ಲ ಎಂದು ರೋಹಿತ್ ಹೇಳಿದ್ದಾರೆ.