ಕೊಲಂಬೊ: ಭಾರತ(IND vs PAK) ವಿರುದ್ಧ ಅತ್ಯಂತ ಕಳಪೆ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ತೋರುವ ಮೂಲಕ ಹೀನಾಯ ಸೋಲು ಕಂಡ ಪಾಕಿಸ್ತಾನ ಆಟಗಾರರ ಬಗ್ಗೆ ತಂಡದ ಕೋಚ್ ಗ್ರಾಂಟ್ ಬ್ರಾಡ್ಬರ್ನ್(Grant Bradburn) ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಹೆಸರಿಗೆ ಮಾತ್ರ ವಿಶ್ವದ ಶ್ರೇಷ್ಠ ತಂಡ ಆದರೆ ಪ್ರದರ್ಶನ ಮಾತ್ರ ತೀರ ಕಳಪೆ ಎಂದು ಆಟಗಾರರನ್ನು ಜಾಡಿಸಿದ್ದಾರೆ.
ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಏಷ್ಯಾ ಕಪ್ ಸೂಪರ್ 4(Asia Cup Super 4 match) ಏಕದಿನ ಪಂದ್ಯದಲ್ಲಿ ಭಾರತ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅತ್ಯಮೋಘ ನಿರ್ವಹಣೆ ತೋರಿ ಪಾಕಿಸ್ತಾನ ವಿರುದ್ಧ ದಾಖಲೆಯ 228 ರನ್ಗಳ ಭಾರಿ ಗೆಲುವು ಸಾಧಿಸಿತು. ಭಾನುವಾರ ನಡೆಯಬೇಕಿದ್ದ ಈ ಪಂದ್ಯ ಮಳೆ ಅಡ್ಡಿಯಿಂದಾಗಿ ಮೀಸಲು ದಿನದಲ್ಲಿ ಭಾರತ ಕೊಹ್ಲಿ ಮತ್ತು ಕೆ.ಎಲ್ ರಾಹುಲ್ ಅವರ ಅಜೇಯ ಶತಕದಾಟದ ನೆರವಿನಿಂದ 357 ರನ್ ಬಾರಿಸಿತು. ಸವಾಲಿನ ಗುರಿ ಪಡೆದ ಪಾಕಿಸ್ತಾನ ಕೇವಲ 32 ಓವರ್ಗಳಲ್ಲಿ 128 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡು ಸೋಲು ಕಂಡಿತು. ಪಾಕ್ ಪರ ನಸೀಮ್ ಮತ್ತು ಹ್ಯಾರಿಸ್ ಫೀಲ್ಡಿಂಗ್ ಮಾಡುವಾಗ ಗಾಯಗೊಂಡ ಕಾರಣ ಬ್ಯಾಟಿಂಗ್ ನಡೆಸಲಿಲ್ಲ. ಹೀಗಾಗಿ 8 ವಿಕೆಟ್ ಕಳೆದುಕೊಂಡಾಗಲೇ ಆಟ ಮುಗಿಯಿತು.
ಪಂದ್ಯದ ಸೋಲಿನ ಬಳಿಕ ಬೇಸರಗೊಂಡು ಮಾಧ್ಯಮದ ಜತೆ ಮಾತನಾಡಿದ ಪಾಕಿಸ್ತಾನ ತಂಡದ ಕೋಚ್ ಗ್ರಾಂಟ್ ಬ್ರಾಡ್ಬರ್ನ್, ‘ಈ ಉಡುಗೊರೆಗಾಗಿ ನಾವು ಭಾರತಕ್ಕೆ ಕೃತಜ್ಞರಾಗಿರುತ್ತೇವೆ. ವಿಶ್ವದ ಕೆಲವು ಅತ್ಯುತ್ತಮ ಆಟಗಾರರನ್ನು ಹೊಂದಿದ್ದರೂ ಈ ಸೋಲು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಳೆದ ಮೂರು ತಿಂಗಳುಗಳ ಬಳಿಕ ನಮ್ಮ ತಂಡ ತೋರಿದ ಅತ್ಯಂತ ಕಳಪೆ ಪ್ರದರ್ಶನ ಇದಾಗಿದೆ” ಎಂದು ಹೇಳಿದರು.
ಇದನ್ನೂ ಓದಿ IND vs SL: ಗಿಲ್-ರೋಹಿತ್ ತಾಳ್ಮೆಯುತ ಬ್ಯಾಟಿಂಗ್; ಉತ್ತಮ ಆರಂಭ ಪಡೆದ ಭಾರತ
ಭಾರತ ತಂಡದ ಪರ ವಿರಾಟ್ ಕೊಹ್ಲಿ ( ಅಜೇಯ 122 ರನ್), ಕೆ. ಎಲ್ ರಾಹುಲ್ (ಅಜೇಯ 111 ರನ್) ಅವರ ಸ್ಫೋಟಕ ಬ್ಯಾಟಿಂಗ್ ನಡೆಸಿ ಮಿಂಚಿದರೆ. ಸ್ಪಿನ್ನರ್ ಕುಲ್ದೀಪ್ ಯಾದವ್ (25 ರನ್ಗಳಿಗೆ 5 ವಿಕೆಟ್) ಅವರ ಮಾರಕ ದಾಳಿ ನಡೆಸಿ ಬೌಲಿಂಗ್ನಲ್ಲಿ ಮಿಂಚಿದರು. ಇದು ಭಾರತ ತಂಡಕ್ಕೆ ಏಕದಿನ ಮಾದರಿಯಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಲಭಿಸಿದ ದಾಖಲೆಯ ಅಂತರದ ವಿಜಯವಾಗಿದೆ. ಪಾಕಿಸ್ತಾನ ತಂಡ ಗುರುವಾರ ಶ್ರೀಲಂಕಾ ವಿರುದ್ಧ ಕೊನೆಯ ಪಂದ್ಯ ಆಡಲಿದೆ. ಒಂದೊಮ್ಮೆ ಈ ಪಂದ್ಯದಲ್ಲಿಯೂ ಸೋಲು ಕಂಡರೆ ಫೈನಲ್ ರೇಸ್ನಿಂದ ಅಧಿಕೃತವಾಗಿ ಹೊರಬೀಳಲಿದೆ.