ಗಯಾನ: ಕಳೆದ ವರ್ಷ ಟಿ20 ವಿಶ್ವ ಕಪ್ನಲ್ಲಿ ವೆಸ್ಟ್ ಇಂಡೀಸ್(West Indies Cricket) ತಂಡವು ಮೊದಲ ಸುತ್ತಿನಿಂದಲೇ ಹೊರಬಿದ್ದ ಬಳಿಕ ಸೀಮಿತ ಓವರ್‌ಗಳ ನಾಯಕನ ಸ್ಥಾನಕ್ಕೆ ನಿಕೋಲಸ್ ಪೂರನ್ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ವೆಸ್ಟ್ ಇಂಡೀಸ್ ತಂಡದ ನಾಯಕತ್ವದ ಸ್ಥಾನಕ್ಕೆ ಯಾರು ಆಯ್ಕೆ ಆಗಿರಲಿಲ್ಲ. ಇದೀಗ ಏಕ ದಿನ ಮತ್ತು ಟಿ20 ತಂಡಗಳಿಗೆ ನೂತನ ನಾಯಕರ ನೇಮಕವಾಗಿದೆ.
ಸ್ಫೋಟಕ ಬ್ಯಾಟರ್ಗಳಾದ ಶಾಯ್ ಹೋಪ್(Shai Hope) ಮತ್ತು ರೋಮನ್ ಪೊವೆಲ್(Rovman Powell) ಅವರನ್ನು ಕ್ರಮವಾಗಿ ಏಕ ದಿನ ಮತ್ತು ಟಿ20 ತಂಡಕ್ಕೆ ನಾಯಕರಾಗಿ ನೇಮಿಸಲಾಗಿದೆ. ಈ ವಿಚಾರವನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಟ್ವಿಟರ್ ಮೂಲಕ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ.
ಮಾರ್ಚ್ 16 ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಲ್ಲಿ ಹೋಪ್ ಮತ್ತು ಪೊವೆಲ್ ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸಲಿದ್ದಾರೆ. ಇದೇ ವರ್ಷ ಭಾರತದ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವ ಕಪ್ ಟೂರ್ನಿಯಲ್ಲಿ ಶಾಯ್ ಹೋಪ್ ಅವರ ನೇತೃತ್ವದಲ್ಲಿ ವಿಂಡೀಸ್ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ ಎಂದು ವಿಂಡೀಸ್ ಕ್ರಿಕೆಟ್ ಮಂಡಳಿ ತಿಳಿಸಿದೆ.
ಹೋಪ್ ಅವರನ್ನು 2019 ರಲ್ಲಿ ವೆಸ್ಟ್ ಇಂಡೀಸ್ ಏಕದಿನ ತಂಡದ ಉಪ ನಾಯಕರಾಗಿ ನೇಮಿಸಲಾಗಿತ್ತು. ಇದೀಗ ನಾಯಕನ ಸ್ಥಾನ ನೀಡಲಾಗಿದೆ. 104 ಏಕದಿನ ಪಂದ್ಯವಾಡಿರುವ ಹೋಪ್ 48.08 ಸರಾಸರಿಯಲ್ಲಿ 4308 ರನ್ ಗಳಿಸಿದ್ದಾರೆ. ಪೊವೆಲ್ ನಾಯಕತ್ವದಲ್ಲಿ ಕಳೆದ ವರ್ಷ ನಡೆದ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಜಮೈಕಾ ತಲ್ಲವಾಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಹಂಗಾಮಿ ನಾಯಕನಾಗಿ ಪೊವೆಲ್ ಮೂರು ಏಕ ದಿನ ಮತ್ತು ಒಂದು ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ.