ಬಾರ್ಬಡೋಸ್: ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿಯಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ಮಂಗಳವಾರ ನಡೆಯಲಿದೆ. ವೆಸ್ಟ್ ಇಂಡೀಸ್ ಎರಡನೇ ಏಕದಿನ ಪಂದ್ಯವನ್ನು ಗೆದ್ದು ಸರಣಿಯನ್ನು 1-1ರಿಂದ ಸಮಬಲಗೊಳಿಸಿದ ನಂತರ ಎರಡೂ ತಂಡಗಳು ಸರಣಿ ನಿರ್ಣಾಯಕ ಪಂದ್ಯದಲ್ಲಿ ಗೆಲುವು ಸಾಧಿಸಲು ಪ್ರಯತ್ನಿಸುತ್ತಿವೆ.
ಎರಡನೇ ಏಕದಿನ ಪಂದ್ಯದಂತೆಯೇ, ಮೂರನೇ ಪಂದ್ಯದಲ್ಲಿ ಭಾರತ ತಂಡವು ನಾಯಕ ರೋಹಿತ್ ಶರ್ಮಾ ಮತ್ತು ಅನುಭವಿ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುವ ಸಾಧ್ಯತೆಗಳಿವೆ. ಎರಡನೇ ಪಂದ್ಯದಲ್ಲಿ ರೊಮಾರಿಯೊ ಶೆಫರ್ಡ್ ಮತ್ತು ಗುಡಕೇಶ್ ಮೋತಿ ಅವರ ಅತ್ಯುತ್ತಮ ಬೌಲಿಂಗ್ ಪ್ರಯತ್ನಗಳಿಂದಾಗಿ ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡವು 181 ರನ್ಗಳಿಗೆ ಆಲೌಟ್ ಆಗಿತ್ತು. ಅದರ ಲಾಭ ಪಡೆದ ಆತಿಥೇಯರು ಪಂದ್ಯದಲ್ಲಿ ಗೆಲುವು ಸಾಧಿಸಿದ್ದರು.
ಚೇಸಿಂಗ್ ವೇಳೆ ಶಾರ್ದೂಲ್ ಠಾಕೂರ್ (42ಕ್ಕೆ 3) ಉತ್ತಮ ಬೌಲಿಂಗ್ ಪ್ರದರ್ಶಿಸಿದರು. ನಾಯಕ ಶಾಯ್ ಹೋಪ್ (80 ಎಸೆತಗಳಲ್ಲಿ 63* ರನ್) ಮತ್ತು ಯುವ ಆಟಗಾರ ಕೀಸಿ ಕಾರ್ಟಿ (65 ಎಸೆತಗಳಲ್ಲಿ 48* ರನ್) ಅವರ ಅರ್ಧ ಶತಕದ ನೆರವಿನಿಂದ ವೆಸ್ಟ್ ಇಂಡೀಸ್ 36.4 ಓವರ್ಗಳಲ್ಲಿ ಗುರಿ ತಲುಪಿತ್ತು. ವೆಸ್ಟ್ ಇಂಡೀಸ್ ಭಾರತವನ್ನು ಆರು ವಿಕೆಟ್ಳಿಂದ ಸೋಲಿಸಿತು. ಡಿಸೆಂಬರ್ 2019ರಿಂದ ಮೆನ್ ಇನ್ ಬ್ಲೂ ವಿರುದ್ಧ ಸತತ ಒಂಬತ್ತು ದ್ವಿಪಕ್ಷೀಯ ಸೋಲುಗಳನ್ನು ಅನುಭವಿಸಿದ ವಿಂಡೀಸ್ ತಂಡಕ್ಕೆ ಇದು ಉತ್ತಮ ಗೆಲವು.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಸರಣಿ ನಿರ್ಣಾಯಕ ಪಂದ್ಯಕ್ಕೆ ಆತಿಥ್ಯ ವಹಿಸಲಿರುವ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ ತನ್ನ ಮೊದಲ ಪುರುಷರ ಏಕದಿನ ಪಂದ್ಯವನ್ನು ನಡೆಸಲಿದೆ. ಈ ಮೈದಾನದಲ್ಲಿ ಹಿಂದಿನ ಮಹಿಳಾ ಏಕದಿನ ದಾಖಲೆಗಳನ್ನು ಪರಿಗಣಿಸಿದರೆ, ಮೂರು ಪಂದ್ಯಗಳಲ್ಲಿ ಒಂದೇ ಒಂದು ಪಂದ್ಯವು 200 ರನ್ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ.
ಹವಾಮಾನ ಪರಿಸ್ಥಿತಿ
ಮಧ್ಯಾಹ್ನದ ನಂತರ ಮಳೆಯಾಗುವ ಸಾಧ್ಯತೆ ಶೇ.41ರಷ್ಟಿದೆ. ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಶೇ.25ರಷ್ಟಿದ್ದು, ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದೆ. ಸ್ಥಳೀಯ ಕಾಲಮಾನ ಬೆಳಗ್ಗೆ 9.30ಕ್ಕೆ ಪಂದ್ಯ ಆರಂಭವಾಗಲಿದ್ದು, ಭಾಗಶಃ ಮೋಡ ಕವಿದ ವಾತಾವರಣವಿರಲಿದೆ.
ಇದನ್ನೂ ಓದಿ : Ind vs wi : ಮೂರನೇ ಪಂದ್ಯದ ಗೆಲುವಿಗೆ ಭಾರತ ತಂಡದ ರಣ ತಂತ್ರ ಏನು? ಇಲ್ಲಿದೆ ಮಾಹಿತಿ
ಪಿಚ್ ವರದಿ
ಇದು ತರೂಬಾದ ಬ್ರಿಯಾನ್ ಲಾರಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಡುವ ಮೊದಲ ಪುರುಷರ ಅಂತರರಾಷ್ಟ್ರೀಯ ಏಕದಿನ ಪಂದ್ಯವಾಗಿದೆ. ಒಟ್ಟಾರೆಯಾಗಿ ಎರಡನೇ ಅಂತರರಾಷ್ಟ್ರೀಯ ಪಂದ್ಯವಾಗಿದೆ. 2022ರಲ್ಲಿ ಇಲ್ಲಿ ನಡೆದ ಟಿ 20 ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಆಡಿದ್ದವು. ಭಾರತ ಮೊದಲು ಬ್ಯಾಟ್ ಮಾಡಿ 190 ರನ್ ಗಳಿಸಿ 68 ರನ್ನಿಂದ ಗೆದ್ದಿತ್ತು. ನಿಧಾನಗತಿಯ ಈ ಪಿಚ್ ಈ ಸ್ಥಳದಲ್ಲಿ ಬ್ಯಾಟರ್ಗಳಿಗೆ ಅನುಕೂಲಕರವಾಗಿಲ್ಲ. ಆದ್ದರಿಂದ, ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ ರನ್ ಗಳಿಕೆ ಕಷ್ಟಕರವಾಗಿರುವ ಕಾರಣ ಭಾರತೀಯ ಬ್ಯಾಟರ್ಗಳು ಮತ್ತೊಮ್ಮೆ ಅಗ್ನಿ ಪರೀಕ್ಷೆಗೆ ಒಳಪಡಲಿದ್ದಾರೆ.
ಸಂಭಾವ್ಯ ತಂಡಗಳು
ವೆಸ್ಟ್ ಇಂಡೀಸ್ : ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್, ಅಲಿಕ್ ಅಥಾನಾಜೆ, ಶಾಯ್ ಹೋಪ್ (ನಾಯಕ), ಶಿಮ್ರಾನ್ ಹೆಟ್ಮೇರ್, ಕೀಸಿ ಕಾರ್ಟಿ, ರೊಮಾರಿಯೊ ಶೆಫರ್ಡ್, ಯಾನಿಕ್ ಕ್ಯಾರಿಯಾ, ಅಲ್ಜಾರಿ ಜೋಸೆಫ್, ಗುಡಕೇಶ್ ಮೋಟಿ, ಜೇಡನ್ ಸೀಲ್ಸ್.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.