ಅಹಮದಾಬಾದ್: ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ರಾತ್ರಿ ನಡೆದ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ(India vs Australia, Final) ಅಮೋಘ ಪ್ರದರ್ಶನ ತೋರಿದ ಆಸ್ಟ್ರೇಲಿಯಾ ತಂಡ ಭಾರತ ವಿರುದ್ಧ 6 ವಿಕಟ್ಗಳ ಅಂತರದಿಂದ ಗೆದ್ದು 6ನೇ ಬಾರಿ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಸೋಲಿನ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ(Rohit Sharma) ತಂಡದ ಸೋಲಿಗೆ ಪ್ರಮುಖ ಕಾರಣವನ್ನು ತಿಳಿಸಿದ್ದಾರೆ.
ಪಂದ್ಯ ಮುಕ್ತಾಯಕ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ರೋಹಿತ್ ಶರ್ಮಾ, “ಫಲಿತಾಂಶವು ನಾವು ಅಂದುಕೊಂಡಂತೆ ಬರಲಿಲ್ಲ. ನಮ್ಮ ಕಡೆಯಿಂದ ಇನ್ನಷ್ಟು ಉತ್ತಮವಾದ ಪ್ರದರ್ಶನ ಬೇಕಿತ್ತು” ಎಂದು ಹೇಳಿದರು.
20-30 ರನ್ ಕೊರತೆ
“ನಾವು ಎಲ್ಲವನ್ನೂ ಪ್ರಯತ್ನಿಸಿದ್ದೇವೆ, ಆದರೆ ಗೆಲುವು ಮಾತ್ರ ಇಲಿಯಲಿಲ್ಲ. 20 ರಿಂದ 30 ರನ್‌ಗಳು ಹೆಚ್ಚು ಕಲೆಹಾಕುತ್ತಿದ್ದರೆ ಪಂದ್ಯ ಗೆಲ್ಲಬಹುದಿತ್ತು. ಕೆ.ಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಉತ್ತಮ ಜತೆಯಾಟವನ್ನು ನಡೆಸಿದ್ದಾರೆ. ಬೌಲಿಂಗ್ನಲ್ಲಿಯೂ ಬುಮ್ರಾ, ಶಮಿ ಉತ್ತಮ ನಿರ್ವಹಣೆ ನೀಡಿದ್ದಾರೆ. ರನ್ ಕಡಿಮೆಯಾದದ್ದೇ ಸೋಲಿಗೆ ಪ್ರಮುಖ ಕಾರಣ. ಬೌಲರ್ಗಳು ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ. ಬ್ಯಾಟಿಂಗ್ ವಿಭಾಗದ ವೈಫಲ್ಯವೇ ಹಿನ್ನಡೆಯಾಯಿತು. 270 ರಿಂದ 280 ರನ್ಗಳನ್ನು ಬಾರಿಸುತ್ತಿದ್ದರೆ ಪಂದ್ಯ ಗೆಲ್ಲಬಹುದಿತ್ತು” ಎಂದು ಹೇಳಿದರು.
“ಆರಂಭಿಕ ಹಂತದಲ್ಲಿ ಮೂರು ವಿಕೆಟ್ ಪಡೆದರೂ ಟ್ರಾವಿಸ್ ಹೆಡ್ ಮತ್ತು ಲಬುಶೇನ್ ಅವರು ದೊಡ್ಡ ಜತೆಯಾಟ ನಡೆಸಿ ನಮ್ಮ ಎಲ್ಲ ಯೋಜನೆಗಳನ್ನು ವಿಫಲಗೊಳಿಸಿದರು.ನಮ್ಮಿಂದ ಆಗುವಷ್ಟು ಪ್ರಯತ್ನ ನಾವು ಮಾಡಿದ್ದೇವೆ. ಆದರೆ ಅದೃಷ್ಟ ಕೈ ಹಿಡಿಯಲಿಲ್ಲ” ಎಂದು ಹೇಳಿ ಭಾವುಕರಾದರು.
ಇದನ್ನೂ ಓದಿ ‘ಕಪ್ ಗೆಲ್ಲದಿದ್ದರೂ ಹೃದಯ ಗೆದ್ದಿದ್ದೀರಿ’; ಭಾರತ ತಂಡವನ್ನು ಸಂತೈಸಿದ ಮೋದಿ
6 ವಿಕೆಟ್ ಸೋಲು
ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಆದರೆ, ಬ್ಯಾಟಿಂಗ್ ವೈಫಲ್ಯ ಎದುರಿಸಿದ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 240 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 43 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿ ನಿರಾಯಾಸ ವಿಜಯ ಕಂಡಿತು. ಆಸ್ಟ್ರೇಲಿಯಾ ತಂಡದ ಪರ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ 137 ರನ್ ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡರು.
ತವರು ನೆಲದಲ್ಲಿ ನಡೆದ ವಿಶ್ವ ಕಪ್ ಆವೃತ್ತಿಯಲ್ಲಿ ಟ್ರೋಫಿ ಗೆದ್ದೇ ಗೆಲ್ಲುತ್ತೇವೆ ಎಂಬ ಟೀಮ್ ಇಂಡಿಯಾದ ಹುಮ್ಮಸ್ಸು ಬತ್ತಿ ಹೋಯಿತು. ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ನಡೆದ ಏಕ ದಿನ ವಿಶ್ವ ಕಪ್ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ತಲೆ ಬಾಗಿದ ಟೀಮ್ ಇಂಡಿಯಾದ ಪ್ರಯತ್ನಗಳು ಭಗ್ನವಾಗಿದೆ. 2003ರ ವಿಶ್ವ ಕಪ್ನ ಫೈನಲ್ ಫಲಿತಾಂಶವು ಮತ್ತೊಂದು ಬಾರಿ ಪುನರಾವರ್ತನೆಯಾಗಿದೆ. ಅಂದು ಭಾರತ ತಂಡ ಆಸ್ಟ್ರೇಲಿಯಾ ತಂಡದ ವಿರುದ್ಧವೇ 125 ರನ್ಗಳಿಂದ ಸೋಲು ಕಂಡಿತ್ತು.
ಆಸ್ಟ್ರೇಲಿಯಾ ತಂಡದ ಪಾಲಿಗೆ 6ನೇ ವಿಶ್ವ ಕಪ್. ಆ ತಂಡ ಈ ಹಿಂದೆ 1987, 1999, 2003, 2007, 2015ರಲ್ಲಿ ಏಕ ದಿನ ವಿಶ್ವ ಕಪ್ ಗೆದ್ದಿತ್ತು. ಇದೀಗ ಮತ್ತೊಂದು ಟ್ರೋಫಿ ಆ ತಂಡಕ್ಕೆ ಸೇರ್ಪಡೆಯಾಗಿದ್ದು ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿತು.