Site icon Vistara News

WFI Chief Sanjay Singh: ಪ್ರತಿಭಟನೆಯಿಂದಲೇ ಕುಸ್ತಿಯಲ್ಲಿ ಹೆಚ್ಚಿನ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ; ಸಂಜಯ್​ ಸಿಂಗ್​ ಆರೋಪ

WFI chief Sanjay Singh

WFI chief Sanjay Singh: Sanjay Singh says wrestlers' protest compromised India's medal chances at Paris 2024

ನವದೆಹಲಿ: ಟೋಕಿಯೋದಲ್ಲಿ ನಡೆದಿದ್ದ ಕಳೆದ ಒಲಿಂಪಿಕ್ಸ್​ನಲ್ಲಿ ಭಾರತ 7 ಪದಕ ಜಯಿಸಿತ್ತು. ಹೀಗಾಗಿ ಈ ಬಾರಿಯ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ(paris olympics) ಹಲವು ಪದಕ ನಿರೀಕ್ಷೆ ಮಾಡಲಾಗಿತ್ತು. ಆದರೆ, ಭಾರತಕ್ಕೆ ಗೆಲ್ಲಲು ಸಾಧ್ಯವಾದದ್ದು ಕೇವಲ 6 ಪದಕ ಮಾತ್ರ. ಕುಸ್ತಿ ವಿಭಾಗದಲ್ಲಿ ಅಮನ್ ಸೆಹ್ರಾವತ್ ಮಾತ್ರ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ವಿನೇಶ್ ಫೋಗಟ್ 100 ಗ್ರಾಂ ಅಧಿಕ ತೂಕದ ಕಾರಣದಿಂದ ಫೈನಲ್​ನಿಂದ ಅನರ್ಹಗೊಂಡ ಕಾರಣ ಐತಿಹಾಸಿಕ ಪದಕವೊಂದು ಕೈ ಜಾರಿತ್ತು. ಇದೀಗ ಕುಸ್ತಿ ತಂಡದ ಪ್ರದರ್ಶನದ ಕುರಿತು ಫೆಡರೇಷನ್​ ಅಧ್ಯಕ್ಷ ಸಂಜಯ್​ ಸಿಂಗ್(WFI Chief Sanjay Singh)​ ಗಂಭೀರ ಆರೋಪ ಮಾಡಿದ್ದಾರೆ. ಕಳೆದ ವರ್ಷ ದೆಹಲಿಯಲ್ಲಿ ಕುಸ್ತಿಪಟುಗಳು ನಡೆಸಿದ ಪ್ರತಿಭಟನೆಯೇ ಭಾರತ ಕುಸ್ತಿಯಲ್ಲಿ ಹೆಚ್ಚಿನ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ದೂರಿದ್ದಾರೆ.

ಖಾಸಗಿ ಸುದ್ದಿ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸಂಜಯ್​ ಸಿಂಗ್​, ಭಾರತ ಕುಸ್ತಿ ಒಂದರಲ್ಲೇ 6 ಪದಕಗಳನ್ನು ಗೆಲ್ಲಬಹುದಿತ್ತು. ಆದರೆ, ಕಳೆದ 15-16 ತಿಂಗಳಿನಿಂದ ಕುಸ್ತಿ ವಿಚಾರದಲ್ಲಿ ಆದ ಹಲವು ಘಟನೆಗಳೇ ನಾವು ಪದಕ ಗೆಲ್ಲಲು ಸಾಧ್ಯವಾಗಿಲ್ಲ. ಕಳೆದ ಬಾರಿ ನಾವು ಎರಡು ಪದಕಗಳನ್ನು ಗೆದ್ದಿದ್ದೆವು. ಆದರೆ, ಈ ಬಾರಿ ಬರಿ ಒಂದನ್ನು ಮಾತ್ರ ಗೆದ್ದಿದ್ದೇವೆ. ಇದಕ್ಕೆ ಕಾರಣ ಕುಸ್ತಿಪಟುಗಳು ಅಭ್ಯಾಸದ ಕಡೆಗೆ ಗಮನ ಹರಿಸದೇ ಕೇವಲ ಪ್ರತಿಭಟನೆಗೆ ಮುಂದಾದದ್ದು. ರವಿ ದಹಿಯಾ, ಬಜರಂಗ್​ ಪೂನಿಯ ಕಳೆದ ಬಾರಿ ಪದಕ ಗೆದ್ದಿದ್ದರು. ಆದರೆ ಈ ಬಾರಿ ಅವರು ಒಲಿಂಪಿಕ್ಸ್​ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು. ಒಟ್ಟಾರೆ ಪ್ರತಿಭಟನೆಯೇ ಭಾರತ ಕುಸ್ತಿ ಪ್ರದರ್ಶನಕ್ಕೆ ಹಿನ್ನಡೆ ಉಂಟುಮಾಡಿದ್ದು ಎಂದು ಸಂಜಯ್​ ಸಿಂಗ್ ಹೇಳಿದ್ದಾರೆ.

“14-15 ತಿಂಗಳ ಕಾಲ ಕುಸ್ತಿಪಟುಗಳು ಪ್ರತಿಭಟನೆ ನಡೆಸಿ ಯಾವುದೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪಂದ್ಯಾವಳಿ ಆಡಲಿಲ್ಲ. ಜತೆಗೆ ಅಭ್ಯಾಸ ಕೂಡ ನಡೆಸದೆ ಫಿಟ್​ನೆಸ್​ ಕಳೆದುಕೊಂಡರು. ಹೀಗಾಗಿ ಕುಸ್ತಿಪಟುಗಳಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ” ಸಂಜಯ್​ ಸಿಂಗ್​ ಹೇಳಿದ್ದಾರೆ.

ಇದನ್ನೂ ಓದಿ Sakshi Malik: ಸಂಜಯ್ ಸಿಂಗ್ ನೇತೃತ್ವದ ಕುಸ್ತಿ ಟೂರ್ನಿಯಲ್ಲಿ ಸ್ಪರ್ಧಿಸಬೇಡಿ: ಸಾಕ್ಷಿ ಮಲಿಕ್

ಸಂಜಯ್​ ಸಿಂಗ್​ ಅವರು ವಿನೇಶ್‌ ಫೋಗಟ್​ ಅನರ್ಹತೆಯ ವಿರುದ್ಧ ಸಹಾಯಕ ಸಿಬ್ಬಂದಿ ವಿರುದ್ಧ ತನಿಖೆ ನಡೆಸಬೇಕು ಎಂದು ಈಗಾಗಲೇ ಆಗ್ರಹಿಸಿದ್ದಾರೆ. ಇದು ವಿನೇಶ್‌ ಅವರ ತಪ್ಪಾಗಿರಲು ಸಾಧ್ಯವಿಲ್ಲ. ಅವರು ಉತ್ತಮವಾಗಿ ಭಾಗಿಯಾಗಿದ್ದರು. ಅವರ ಕೋಚ್‌, ನ್ಯೂಟ್ರಿಶಿಯನ್‌ ಮತ್ತು ಬೆಂಬಲ ಸಿಬ್ಬಂದಿ ಇದರ ಜವಾಬ್ದಾರಿ ಹೊರಬೇಕು ಎಂದು ಅವರು ಹೇಳಿದ್ದರು. ವಿನೇಶ್‌ ತೂಕ ಹೆಚ್ಚಳವಾಗದಂತೆ ಅವರು ನೋಡಿಕೊಳ್ಳಬೇಕಿತ್ತು. ಇದಕ್ಕೆ ಕಾರಣರಾದವರ ವಿರುದ್ಧ ಭಾರತ ಸರಕಾರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು. ಈ ಮೂಲಕ ವಿನೇಶ್​ ಬೆಂಬಲಕ್ಕೆ ನಿಂತಿದ್ದರು.

ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ಅವರ ಆಪ್ತ ಎನ್ನುವ ಕಾರಣಕ್ಕೆ ಸಂಜಯ್ ಸಿಂಗ್​ ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷರಾದ ವೇಳೆ ಇದನ್ನು ಖಂಡಿಸಿ ಸಾಕ್ಷಿ ಮಲಿಕ್​, ವಿನೇಶ್​ ಫೋಗಟ್​, ಬಜರಂಗ್​ ಪೂನಿಯಾ ಸೇರಿ ಹಲವು ಕುಸ್ತಿಪಟುಗಳು ವಿರೋಧ ವ್ಯಕ್ತಪಡಿಸಿದ್ದರು. ಅವರನ್ನು ಕುಸ್ತಿ ಒಕ್ಕೂಟದಿಂದ ದೂರ ಇಟ್ಟರೆ ನಮಗೆ ಯಾವುದೇ ಸಮಸ್ಯೆ ಇರದು ಎಂದು ಹೇಳಿದ್ದರು.

Exit mobile version