Site icon Vistara News

WFI Elections: ನಾಮಪತ್ರ ಸಲ್ಲಿಕೆಯ ಮುನ್ನ ದಿನ ಸಭೆ ಕರೆದ ಬ್ರಿಜ್‌ಭೂಷಣ್; ಕುಸ್ತಿ ವಲಯದಲ್ಲಿ ಸಂಚಲನ

Brij Bhushan Sharan Singh Member of the Lok Sabha

ನವದೆಹಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಭಾರತ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿರುವ ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಶರಣ್ ಸಿಂಗ್(Brijbhushan Sharan Singh)​ ಅವರು, ಆಗಸ್ಟ್‌ 12ರಂದು ನಡೆಯುವ ಅಧ್ಯಕ್ಷ ಸ್ಥಾನದ ಚುನಾವಣೆಯ(WFI Elections) ನಾಮಪತ್ರ ಸಲ್ಲಿಯ ಅಂತಿಮ ದಿನದ ಮುನ್ನ ದಿನವಾದ ಜುಲೈ 30ಕ್ಕೆ ಸಭೆಯೊಂದನ್ನು ನಡೆಸಲಿದ್ದಾರೆ.

ಆಗಸ್ಟ್‌ 12ರಂದು ಚುನಾವಣೆ(Wrestling Federation of India Election) ನಿಗದಿ ಆಗಿದ್ದು, ನಾಮಪತ್ರ ಸಲ್ಲಿಕೆಗೆ ಜುಲೈ 31 ಕೊನೆಯ ದಿನವಾಗಿದೆ. ಆದರೆ ಇದಕ್ಕೂ ಒಂದು ದಿನ ಮುನ್ನ ಬ್ರಿಜ್‌ಭೂಷಣ್ ಸಭೆಯೊಂದನ್ನು ಕರೆದಿದ್ದಾರೆ. ಈ ವಿಚಾರವನ್ನು ಫೆಡರೇಷನ್‌ನ ನಿರ್ಗಮಿತ ಸಹಾಯಕ ಕಾರ್ಯದರ್ಶಿ ವಿನೋದ್ ತೋಮಾರ್ ಅವರು ಖಚಿತಪಡಿಸಿದ್ದಾರೆ. ಸಭೆಯ ನಡೆಯುವ ಸ್ಥಳದ ಬಗ್ಗೆ ಯಾವುದೇ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ. ಸಭೆಯಲ್ಲಿ ಪದಾಧಿಕಾರಿಗಳಾಗಿ ಸ್ಪರ್ಧಿಸಲಿರುವ ತಮ್ಮ ನಿಷ್ಠ ಗುಂಪಿನ ಅಭ್ಯರ್ಥಿಗಳ ಹೆಸರನ್ನು ಬ್ರಿಜ್​ಭೂಷಣ್​ ಸೂಚಿಸುವ ಸಾಧ್ಯತೆಯಿದೆ.

ಕುಸ್ತಿಪಟುಗಳ ಬೇಡಿಕೆಯಂತೆ ಬ್ರಿಜ್​ಭೂಷಣ್​ ಶರಣ್​ ಸಿಂಗ್(Brijbhushan Sharan Singh)​ ಮತ್ತು ಅವರ ಪುತ್ರ ಕರಣ್‌(Karan) ಅವರನ್ನು ಚುನಾವಣೆಯಿಂದ ದೂರ ಇರಿಸಲಾಗಿದೆ. ಬ್ರಿಜ್​ಭೂಷಣ್ ಈಗಾಗಲೇ 12 ವರ್ಷ ಅಧಿಕಾರ ಪೂರೈಸಿರುವ ಕಾರಣ ನಿಯಮದಂತೆ ಅವರಿಗೆ ಸ್ಪರ್ಧಿಸುವ ಅವಕಾಶವಿಲ್ಲ. ಆದರೆ ಬ್ರಿಜ್​ಭೂಷಣ್ ಅವರ ಅಳಿಯ ವಿಶಾಲ್‌ ಸಿಂಗ್‌ ಅವರು ಬಿಹಾರದ ಪ್ರತಿನಿಧಿಯಾಗಿ ಉನ್ನತ ಹುದ್ದೆಗೆ ಸ್ಪರ್ಧಿಸುವ ಸಾಧ್ಯತೆಯೊಂದು ಕಂಡುಬಂದಿದೆ. ಇದು ಕುಸ್ತಿ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಅಪ್ರಾಪ್ತ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಬ್ರಿಜ್‌ಭೂಷಣ್​ ಕುಟುಂಬಸ್ಥರು ಈ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಮತ್ತು ಯಾವುದೇ ಕಾರಣಕ್ಕೂ ಅವರ ಕುಟುಂಬ ಸದಸ್ಯರಿಗೆ ಮತದಾನದ ಅವಕಾಶ ನೀಡಬಾರದೆಂದು ಕುಸ್ತಿಪಟುಗಳು ಕೇಂದ್ರಕ್ಕೆ ಷರತ್ತು ವಿಧಿಸಿ ಪ್ರತಿಭಟನೆಯಿಂದ ಹಿಂದೆ ಸರಿದ್ದಿದ್ದರು. ಕುಸ್ತಿಪಟುಗಳ ಷರತ್ತಿಗೂ ಕೇಂದ್ರ ಒಪ್ಪಿಗೆ ಸೂಚಿಸಿತ್ತು. ಆದರೆ ಇದೀಗ ಬ್ರಿಜ್‌ಭೂಷಣ್​ ಅವರ ಅಳಿಯ ವಿಶಾಲ್‌ ಸಿಂಗ್‌(Vishal Singh) ಕಣದಲ್ಲಿರುವುದು ಹಲವು ಗೊಂದಲಕ್ಕೆ ಎಡೆಮಾಡಿದೆ.

ಇದನ್ನೂ ಓದಿ WFI Elections: ಕುಸ್ತಿ ಒಕ್ಕೂಟದ ಚುನಾವಣೆ; ಬಿಹಾರ ಪ್ರತಿನಿಧಿಯಾಗಿ ಬ್ರಿಜ್​ಭೂಷಣ್​ ಅಳಿಯ

ಪ್ರತಿ ಬಾರಿ ಒಂದಲ್ಲ ಒಂದು ಸಮಸ್ಯೆಯಿಂದ ಮುಂದೂಡಿಕೆಯಾಗುತ್ತಿದ್ದ ಈ ಚುನಾವಣೆಯ ವಿಚಾರದಲ್ಲಿ ಅಂತಿಮವಾಗಿ ಸ್ವತಃ ಸರ್ವೋಚ್ಚ ನ್ಯಾಯಾಲಯ ಮಧ್ಯಪ್ರವೇಶ ಮಾಡಿ ಎಲ್ಲ ತಡೆಗಳನ್ನು ನಿವಾರಿಸಿ, ಚುನಾವಣೆ ನಡೆಸಬೇಕೆಂದು ಆದೇಶಿಸಿದೆ. ಚುನಾವಣೆಯಲ್ಲಿ 24 ರಾಜ್ಯಸಂಸ್ಥೆಗಳ 48 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಆಗಸ್ಟ್​ 1ರಂದು ನಾಮಪತ್ರಗಳನ್ನು ಸಲ್ಲಿಸಲಾಗುತ್ತದೆ. ಒಂದು ವೇಳೆ ಅವಿರೋಧವಾಗಿ ಆಯ್ಕೆಯಾಗುವ ಪರಿಸ್ಥಿತಿ ಇಲ್ಲವಾದರೆ ಆಗಸ್ಟ್​ 12ಕ್ಕೆ ಮತದಾನ ನಡೆಸಿ ಫ‌ಲಿತಾಂಶ ಪ್ರಕಟಿಸಲಾಗುತ್ತದೆ.

Exit mobile version