ನವದೆಹಲಿ: ಇಂದು(ಶನಿವಾರ) ನಡೆಯಬೇಕಿದ್ದ ಭಾರತ ಕುಸ್ತಿ ಒಕ್ಕೂಟದ ಚುನಾವಣೆ(WFI elections)ಗೆ ಮತ್ತೊಂದು ಕಂಟಕ ಎದುರಾಗಿದೆ. ಹರಿಯಾಣ ಕುಸ್ತಿ ಅಸೋಸಿಯೇಶನ್ (ಎಚ್‌ಡಬ್ಲ್ಯುಎ) ಸಲ್ಲಿಸಿದ ದೂರಿನ ಆಧಾರದಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್(Punjab and Haryana High Court) ಚುನಾವಣೆಗೆ ತಡೆಯಾಜ್ಞೆ ನೀಡಿದೆ. ಮುಂದಿನ ಆದೇಶ ನೀಡುವವರೆಗೆ ಚುನಾವಣೆ ನಡೆಸಬಾರದು ಎಂದು ತಿಳಿಸಿದೆ.
ಪೂರ್ವ ನಿಗದಿಯಂತೆ ಈ ಚುನಾವಣೆ ಇಂದು ನಡೆಯಬೇಕಿತ್ತು. ಆದರೆ ಕುಸ್ತಿ ಫೆಡರೇಶನ್ ಚುನಾವಣೆಯಲ್ಲಿ ಹರಿಯಾಣ ಅಮೆಚೂರ್ ಕುಸ್ತಿ ಅಸೋಸಿಯೇಶನ್‌ಗೆ ಮತದಾನಕ್ಕೆ ಅವಕಾಶ ಕಲ್ಪಿಸಿದನ್ನು ಪ್ರಶ್ನಿಸಿ ಹರಿಯಾಣ ಕುಸ್ತಿ ಸಂಸ್ಥೆ ಸಲ್ಲಿಸಿದ ದೂರಿನ ಆಧಾರದಲ್ಲಿ ಶುಕ್ರವಾರ ಹೈಕೋರ್ಟ್ ಈ ಆದೇಶ ನೀಡಿದೆ. ಇದರಿಂದ ಮತ್ತೆ ಕೆಲ ದಿನಗಳು ಈ ಚುನಾವಣೆಗಾಗಿ ಕಾಯಬೇಕಿದೆ.
ನಿಯಮದಂತೆ ನೋಂದಾಯಿತ ಸಂಸ್ಥೆ
ಎಚ್‌ಡಬ್ಲ್ಯುಎ ಪ್ರತಿನಿಧಿಸಿದ ವಕೀಲ ರವೀಂದರ್ ಮಲಿಕ್ ನ್ಯಾಯಾಲಯದಲ್ಲಿ ವಾದ ಮಂಡಿಸಿ, ಎಚ್‌ಡಬ್ಲ್ಯುಎ ರಾಜ್ಯದಲ್ಲಿ ನೋಂದಣಿ ಮಾಡಿದ ಸಂಸ್ಥೆಯಾಗಿದ್ದು ಭಾರತೀಯ ಕುಸ್ತಿ ಫೆಡರೇಶನ್ ಜತೆ ನೋಂದಾಯಿಸಿಕೊಂಡಿದೆ ಎಂದು ತಿಳಿಸಿದರು. ಕುಸ್ತಿ ಫೆಡರೇಶನ್‌ನ ಸಂವಿಧಾನ ಮತ್ತು ನಿಯಮದಂತೆ ನೋಂದಾಯಿತ ಸಂಸ್ಥೆಗೆ ಚುನಾವಣೆ ವೇಳೆ ಮತದಾನ ಮಾಡಲು ಇಬ್ಬರು ಪ್ರತಿನಿಧಿಗಳನ್ನು ಕಳುಹಿಸಲು ಅವಕಾಶವಿದೆ ಎಂದು ಹೇಳಿದರು. ಈ ಆಧಾರದಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಚುನಾವಣೆಗೆ ತಡೆ ನೀಡಿದೆ.
ಮೂರನೇ ಬಾರಿ ಮುಂದೂಡಿಕೆ
ಈ ಹಿಂದೆ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿದ್ದ ಬಿಜೆಪಿ ಸಂದಸರೂ ಆಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್(Brij Bhushan Sharan Singh) ಅವರ ವಿರುದ್ಧ ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್, ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ವಿನೇಶ್ ಫೋಗಟ್ ಸೇರಿದಂತೆ ಆರು ಅಗ್ರ ಕುಸ್ತಿಪಟುಗಳು ಲೈಂಗಿಕ ಕಿರುಕುಳ ಆರೋಪ ಹೊರಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ಸರಿ ಸುಮಾರು 2 ತಿಂಗಳುಕಾಲ ಪ್ರತಿಭಟನೆ ನಡೆಸಿದ್ದರು. ಈ ಕಾರಣದಿಂದ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಇದಾದ ಬಳಿಕ ನೂತನ ಸಮಿತಿಗೆ ಚುನಾವಣೆ ನಡೆಸಲು ನಿರ್ಧರಿಸಲಾಗಿತ್ತು.
ಮೊದಲ ಬಾರಿಗೆ ಜುಲೈ 6ಕ್ಕೆ ಈ ಚುನಾವಣೆಗೆ ದಿನ ನಿಗದಿ ಪಡಿಸಲಾಗಿತ್ತು. ಆದರೆ ಡಬ್ಲ್ಯುಎಫ್ಐಯಿಂದ ಮಾನ್ಯತೆ ಕಳೆದುಕೊಂಡ 5 ರಾಜ್ಯಗಳ ಘಟಕಗಳು ಮತದಾನದ ಹಕ್ಕು ಕೋರಿ ಅಹವಾಲು ಸಲ್ಲಿಸಿದ್ದವು ಇದರಿಂದ ಒಲಿಂಪಿಕ್ ಸಂಸ್ಥೆಯ ಅಡ್ ಹಾಕ್ ಸಮಿತಿ(Indian Olympic Association) ಈ ಚುನಾವಣೆಯನ್ನು ಜುಲೈ 11ಕ್ಕೆ ಮುಂದೂಡಿತ್ತು.
ಇದನ್ನೂ ಓದಿ WFI Elections: ನಾಮಪತ್ರ ಸಲ್ಲಿಕೆಯ ಮುನ್ನ ದಿನ ಸಭೆ ಕರೆದ ಬ್ರಿಜ್‌ಭೂಷಣ್; ಕುಸ್ತಿ ವಲಯದಲ್ಲಿ ಸಂಚಲನ
ಸರ್ವೋಚ್ಚ ನ್ಯಾಯಾಲಯ ಮಧ್ಯಪ್ರವೇಶ
ಪ್ರತಿ ಬಾರಿ ಒಂದಲ್ಲ ಒಂದು ಸಮಸ್ಯೆಯಿಂದ ಮುಂದೂಡಿಕೆಯಾಗುತ್ತಿದ್ದ ಈ ಚುನಾವಣೆಯ ವಿಚಾರದಲ್ಲಿ ಅಂತಿಮವಾಗಿ ಸ್ವತಃ ಸರ್ವೋಚ್ಚ ನ್ಯಾಯಾಲಯ ಮಧ್ಯಪ್ರವೇಶ ಮಾಡಿ ಜುಲೈ 12ರಂದು ಚುನಾವಣೆ ನಡೆಸಬೇಕೆಂದು ಆದೇಶಿಸಿತ್ತು. ಅದರಂತೆ ಚುನಾವಣೆಯಲ್ಲಿ 24 ರಾಜ್ಯಸಂಸ್ಥೆಗಳ 48 ಪ್ರತಿನಿಧಿಗಳು ಭಾಗವಹಿಸಲು ಸಿದ್ಧತೆ ನಡೆಸಿದ್ದರು. ಡಬ್ಲ್ಯುಎಫ್ಐ ಅಧ್ಯಕ್ಷ, ಉಪಾಧ್ಯಕ್ಷ, ನಾಲ್ಕು ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿ, ಇಬ್ಬರು ಜಂಟಿ ಕಾರ್ಯದರ್ಶಿಗಳು ಮತ್ತು ಐದು ಕಾರ್ಯಕಾರಿ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿತ್ತು. ಆದರೆ ಇದೀಗ ಮತ್ತೆ ಕಂಟಕ ಎದುರಾಗಿ ಮತ್ತೊಮ್ಮೆ ಚುನಾವಣೆ ಮುಂದೂಡಿಕೆಯಾಗಿದೆ.