Site icon Vistara News

WFI Elections: ಡಬ್ಲ್ಯುಎಫ್ಐ ಚುನಾವಣೆ ಮುಂದಕ್ಕೆ

WFI Election

ನವದೆಹಲಿ: ಪೂರ್ವ ನಿಗದಿಯಂತೆ ಜುಲೈ 6ಕ್ಕೆ ನಡೆಯಬೇಕಿದ್ದ ಭಾರತ ಕುಸ್ತಿ ಒಕ್ಕೂಟದ ಚುನಾವಣೆ(WFI elections) ಮುಂದೂಡಿಕೆಯಾಗಿದೆ. ಒಲಿಂಪಿಕ್​ ಸಂಸ್ಥೆಯ ಅಡ್​ ಹಾಕ್​ ಸಮಿತಿ(IOA) ಈ ಚುನಾವಣೆಯನ್ನು ಮುಂದೂಡಿದ್ದು ಜುಲೈ 11ಕ್ಕೆ ನಿಗದಿಪಡಿಸಿದೆ.

ಡಬ್ಲ್ಯುಎಫ್ಐಯಿಂದ ಮಾನ್ಯತೆ ಕಳೆದುಕೊಂಡ 5 ರಾಜ್ಯಗಳ ಘಟಕಗಳು ಮತದಾನದ ಹಕ್ಕು ಕೋರಿ ಅಹವಾಲು ಸಲ್ಲಿಸಿದ್ದವು. ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಎಂ.ಎಂ. ಕುಮಾರ್​ ಅವರನ್ನು ಒಳಗೊಂಡ ಮೂವರು ಸದಸ್ಯರ ಸಮಿತಿ ಮುಂದೆ ಮತದಾನದ ಹಕ್ಕು ಕೋರಿದ್ದವು. ಈ ಬಗ್ಗೆ ನಿರ್ಧಾರ ಕೈಗೊಂಡು ಆದೇಶ ನೀಡಲು ಸಮಿತಿಗೆ ಸಮಯಾವಕಾಶ ಬೇಕಿರುವ ಕಾರಣದಿಂದ ಚುನಾವಣ ದಿನಾಂಕವನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ. ಮಹಾರಾಷ್ಟ್ರ, ಹರಿಯಾಣ, ರಾಜಸ್ಥಾನ, ತೆಲಂಗಾಣ ಮತ್ತು ಹಿಮಾಚಲ ಪ್ರದೇಶ ಘಟಕಗಳು ಅಹವಾಲು ಸಲ್ಲಿಸಿದ ರಾಜ್ಯಗಳಾಗಿವೆ.

ಡಬ್ಲ್ಯುಎಫ್ಐ ಅಧ್ಯಕ್ಷ, ಉಪಾಧ್ಯಕ್ಷ, ನಾಲ್ಕು ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿ, ಇಬ್ಬರು ಜಂಟಿ ಕಾರ್ಯದರ್ಶಿಗಳು ಮತ್ತು ಐದು ಕಾರ್ಯಕಾರಿ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಭ್ರಷ್ಟಾಚಾರ ಮತ್ತು ದುರಾಡಳಿತ ಸೇರಿದಂತೆ ನಾನಾ ಕಾರಣಗಳಿಗಾಗಿ 2022ರ ಜೂನ್​ನಲ್ಲಿ ನಡೆದ ಡಬ್ಲ್ಯುಎಫ್ಐ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕರ್ನಾಟಕ, ಹರಿಯಾಣ ಮತ್ತು ಮಹಾರಾಷ್ಟ್ರದ ಸಮಿತಿಯನ್ನು ವಿಸರ್ಜಿಸಿತ್ತು.

ನಿರ್ಗಮಿತ ಡಬ್ಲ್ಯುಎಫ್ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಕುಟುಂಬ ಸದಸ್ಯರು ಅಥವಾ ಸಹವರ್ತಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗುತ್ತದೆಯೇ ಎಂಬುದು ಚುನಾವಣೆಯ ಮತ್ತೊಂದು ಚರ್ಚೆಯ ವಿಷಯವಾಗಿದೆ. ಬ್ರಿಜ್ ಭೂಷಣ್ ಅವರ ಯಾವುದೇ ಸಂಬಂಧಿಯನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಸರ್ಕಾರ ಅನುಮತಿಸುವುದಿಲ್ಲ ಎಂದು ಕ್ರೀಡಾ ಸಚಿವ ಠಾಕೂರ್ ಅವರು ಕುಸ್ತಿಪಟುಗಳಿಗೆ ಭರವಸೆ ನೀಡಿದ್ದರು. ಹೀಗಾಗಿ ಸಿಂಗ್ ಅವರೊಂದಿಗೆ ಸಂಬಂಧ ಹೊಂದಿರುವ ಅರ್ಹ ಅಭ್ಯರ್ಥಿಗಳು ಚುನಾವಣೆಗೆ ನಾಮಪತ್ರ ಸಲ್ಲಿಸಿದರೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಇದನ್ನೂ ಓದಿ Wrestlers Protest: ಕುಸ್ತಿಪಟುಗಳ ಮಧ್ಯೆಯೇ ರಾಜಕೀಯ ಕಿತ್ತಾಟ ಆರಂಭ

ಬ್ರಿಜ್​ಭೂಷಣ್​ ಶರಣ್​ ಸಿಂಗ್​(Brij Bhushan Sharan Singh) ಅವರ ಪುತ್ರ ಕರಣ್ ಹಿಂದಿನ ಡಬ್ಲ್ಯುಎಫ್ಐ ಕಾರ್ಯಕಾರಿಯ ಸಮಿತಿಯಲ್ಲಿ ಉಪಾಧ್ಯಕ್ಷರಾಗಿದ್ದರು ಮತ್ತು ಯುಪಿ ಕುಸ್ತಿ ಸಮಿತಿಯ ಜತೆಯೂ ಸಂಬಂಧ ಹೊಂದಿದ್ದಾರೆ. ಅವರ ಅಳಿಯ ವಿಶಾಲ್ ಸಿಂಗ್ ಬಿಹಾರ ಕುಸ್ತಿ ಸಂಘದ ಅಧ್ಯಕ್ಷರಾಗಿದ್ದಾರೆ.

Exit mobile version