ನವದೆಹಲಿ: ಹಲವು ಕಾರಣಗಳಿಂದ ಮುಂದೂಡಿಕೆಯಾಗಿದ್ದ ಭಾರತೀಯ ಕುಸ್ತಿ ಒಕ್ಕೂಟದ ಚುನಾವಣೆ(WFI Elections) ಆಗಸ್ಟ್ 12ರಂದು ನಡೆಯಲಿದೆ. ಆಗಸ್ಟ್ 7ಕ್ಕೆ ಅಭ್ಯರ್ಥಿಗಳ ಅಂತಿಮಪಟ್ಟಿ ಹೊರಬೀಳಲಿದೆ. ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಬ್ರಿಜ್‌ಭೂಷಣ್ ಶರಣ್ ಸಿಂಗ್(Brijbhushan Sharan Singh) ಮತ್ತು ಅವರ ಪುತ್ರ ಕರಣ್(Karan) ಅವರನ್ನು ಚುನಾವಣೆಯಿಂದ ದೂರ ಇರಿಸಲಾಗಿದೆ. ಆದರೆ ಬ್ರಿಜ್‌ಭೂಷಣ್ ಅವರ ಅಳಿಯನಿಗೆ ಮತ ಚಲಾವಣೆಗೆ ಅವಕಾಶ ನೀಡಿರುವುದು ಕುಸ್ತಿ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಅಪ್ರಾಪ್ತ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಬ್ರಿಜ್‌ಭೂಷಣ್ ಕುಟುಂಬಸ್ಥರು ಈ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಮತ್ತು ಯಾವುದೇ ಕಾರಣಕ್ಕೂ ಅವರ ಕುಟುಂಬ ಸದಸ್ಯರಿಗೆ ಮತದಾನದ ಅವಕಾಶ ನೀಡಬಾರದೆಂದು ಕುಸ್ತಿಪಟುಗಳು ಕೇಂದ್ರಕ್ಕೆ ಷರತ್ತು ವಿಧಿಸಿ ಪ್ರತಿಭಟನೆಯಿಂದ ಹಿಂದೆ ಸರಿದ್ದಿದ್ದರು. ಕುಸ್ತಿಪಟುಗಳ ಷರತ್ತಿಗೂ ಕೇಂದ್ರ ಒಪ್ಪಿಗೆ ಸೂಚಿಸಿತ್ತು. ಆದರೆ ಇದೀಗ ಬ್ರಿಜ್‌ಭೂಷಣ್ ಅವರ ಅಳಿಯ ವಿಶಾಲ್ ಸಿಂಗ್(Vishal Singh) ಬಿಹಾರ ಸಂಸ್ಥೆ ಪರವಾಗಿ ಮತಚಲಾವಣೆಗೆ ಆಗಮಿಸಲಿದ್ದಾರೆ.
ವಿಶಾಲ್ ಸಿಂಗ್ ಅವರಿಗೆ ಮತದಾನದ ಹಕ್ಕು ನೀಡಿದ ಕಾರಣ ಅವರು ಇತರ ಸದಸ್ಯರ ಮೇಲೆ ಪ್ರಭಾವ ಬೀರಿ ಬ್ರಿಜ್‌ಭೂಷಣ್ ಆಪ್ತರನ್ನು ಗೆಲ್ಲುವಂತೆ ಮಾಡಬಹುದು ಎಂಬ ಚರ್ಚೆ ಕುಸ್ತಿ ವಲಯದಲ್ಲಿ ಶುರುವಾಗಿದೆ. ಆದರೆ ಪ್ರತಿಭಟನೆ ನಡೆಸಿದ್ದ ಕುಸ್ತಿಪಟುಗಳು ಇದುವರೆಗೆ ವಿಶಾಲ್ ಸಿಂಗ್ಗೆ ಅವಕಾಶ ನೀಡಿದ ಕುರಿತು ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ Brij Bhushan: ಜಾಮೀನು ಪಡೆದ ಬ್ರಿಜ್‌ಭೂಷಣ್; ದೇಶ ತೊರೆಯದಂತೆ ಸೂಚನೆ
ಆಗಸ್ಟ್ 12ರಂದು ಈ ಚುನಾವಣೆ(Wrestling Federation of India Election) ನಡೆಯಲಿದ್ದು ಬಣಗಳಾಗಿ ಇಬ್ಭಾಗವಾಗಿರುವ ಮಹಾರಾಷ್ಟ್ರ ಸಂಸ್ಥೆಗೆ ಚುನಾವಣೆಯಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧ ವಿಧಿಸಲಾಗಿದೆ. ಆರಂಭದಲ್ಲಿ ಮಧ್ಯಾಂತರ ಸಮಿತಿ ಜುಲೈ 6ಕ್ಕೆ ಚುನಾವಣೆ ನಿಗದಿ ಮಾಡಿತ್ತು. ಆದರೆ ಅಮಾನ್ಯಗೊಂಡ ಮಹಾರಾಷ್ಟ್ರ, ಹರಿಯಾಣ, ತೆಲಂಗಾಣ, ರಾಜಸ್ಥಾನ, ಹಿಮಾಚಲ ಪ್ರದೇಶಗಳು ತಮಗೂ ಅವಕಾಶ ಕೊಡಬೇಕೆಂದು ಆಗ್ರಹಿಸಿದ್ದ ಕಾರಣ ಈ ದಿನಾಂಕವನ್ನು ಜುಲೈ 11ಕ್ಕೆ ಮುಂದೂಡಲಾಗಿತ್ತು. ಇನ್ನೇನು ಚುನಾವಣೆ ನಡೆಯಬೇಕು ಎನ್ನುವಾಗ ಅಸ್ಸಾಂ ಸಂಸ್ಥೆ ತನಗೆ ಮತದಾನಕ್ಕೆ ಅವಕಾಶ ನೀಡಬೇಕೆಂದು ಆಗ್ರಹಿಸಿತ್ತು. ಹೀಗಾಗಿ ಗುವಾಹಾಟಿ ಉಚ್ಚ ನ್ಯಾಯಾಲಯ ಚುನಾವಣೆಗೆ ತಡೆ ನೀಡಿತು. ಹೀಗೆ ಹಲವು ಬಾರಿ ದಿನಾಂಕ ನಿಗದಿಯಾಗಿ ಮುಂದೂಡಲ್ಪಟ್ಟಿತ್ತು.
ಪ್ರತಿ ಬಾರಿ ಒಂದಲ್ಲ ಒಂದು ಸಮಸ್ಯೆಯಿಂದ ಮುಂದೂಡಿಕೆಯಾಗುತ್ತಿದ್ದ ಈ ಚುನಾವಣೆಯ ವಿಚಾರದಲ್ಲಿ ಅಂತಿಮವಾಗಿ ಸ್ವತಃ ಸರ್ವೋಚ್ಚ ನ್ಯಾಯಾಲಯ ಮಧ್ಯಪ್ರವೇಶ ಮಾಡಿ ಎಲ್ಲ ತಡೆಗಳನ್ನು ನಿವಾರಿಸಿ, ಚುನಾವಣೆ ನಡೆಸಬೇಕೆಂದು ಆದೇಶಿಸಿದೆ. ಚುನಾವಣೆಯಲ್ಲಿ 24 ರಾಜ್ಯಸಂಸ್ಥೆಗಳ 48 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಆಗಸ್ಟ್ 1ರಂದು ನಾಮಪತ್ರಗಳನ್ನು ಸಲ್ಲಿಸಲಾಗುತ್ತದೆ. ಒಂದು ವೇಳೆ ಅವಿರೋಧವಾಗಿ ಆಯ್ಕೆಯಾಗುವ ಪರಿಸ್ಥಿತಿ ಇಲ್ಲವಾದರೆ ಆಗಸ್ಟ್ 12ಕ್ಕೆ ಮತದಾನ ನಡೆಸಿ ಫಲಿತಾಂಶ ಪ್ರಕಟಿಸಲಾಗುತ್ತದೆ.