ಲಖನೌ : ಬ್ಯಾಟಿಂಗ್ ವೈಫಲ್ಯದ ಕಾರಣಕ್ಕೆ ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಯ (INDvsNZ T20) ಮೊದಲ ಪಂದ್ಯದಲ್ಲಿ ಸೋತಿರುವ ಭಾರತ ತಂಡ (Indian Cricket team) ಭಾನುವಾರ (ಜನವರಿ 29ರಂದು) ನಡೆಯಲಿರುವ ಎರಡನೇ ಪಂದ್ಯದಲ್ಲಿ ಆಡಲು ಸಜ್ಜಾಗುತ್ತಿದೆ. ಈ ಹಣಾಹಣಿಯಲ್ಲಿ ಗೆಲುವು ಸಾಧಿಸಿದರೆ ಮಾತ್ರ ಮೂರು ಪಂದ್ಯಗಳ ಸರಣಿಯನ್ನು ಜೀವಂತವಾಗಿರಿಸಲು ಹಾರ್ದಿಕ್ ಪಾಂಡ್ಯ (Hardik panday) ಬಳಗಕ್ಕೆ ಸಾಧ್ಯ. ಅದಕ್ಕಾಗಿ ಹಿಂದಿನ ತಪ್ಪುಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕಾಗಿದೆ.
ಲಖನೌನ ಭಾರತ ರತ್ನ ಅಟಲ್ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಈ ಪಂದ್ಯ ಆಯೋಜನೆಗೊಂಡಿದೆ. ರಾತ್ರಿ 7ಗಂಟೆಗೆ ಪಂದ್ಯ ಅರಂಭವಾಗಲಿದೆ. ಪಿಚ್ನ ವರ್ತನೆಗೆ ಅನುಗುಣವಾಗಿ ಭಾರತ ತಂಡ ಯೋಜನೆ ರೂಪಿಸಿಕೊಳ್ಳಬೇಕಾಗಿದೆ. ಪ್ರಮುಖವಾಗಿ ವೇಗದ ಬೌಲಿಂಗ್ ವಿಭಾಗದ ದೌರ್ಬಲ್ಯಗಳು ಸುಧಾರಣೆಯಾಗಬೇಕಾಗಿದೆ. ಜತೆಗೆ ಅಂತಿಮ ಹಂತದಲ್ಲಿ ಹೆಚ್ಚು ರನ್ ಬಿಟ್ಟುಕೊಡುವ ಅಭ್ಯಾಸವೂ ಕೊನೆಗೊಳ್ಳಬೇಕಾಗಿದೆ.
ಮೊದಲ ಪಂದ್ಯದಲ್ಲಿ ಭಾರತ ತಂಡ ಪ್ರವಾಸಿ ತಂಡದ ಸ್ಪಿನ್ ಬಲೆಗೆ ಬಿದ್ದಿತ್ತು. ಪಿಚ್ನಲ್ಲಿ ಹೆಚ್ಚುವರಿ ತಿರುವು ಇದ್ದ ಕಾರಣ ತಂಡದ ಬ್ಯಾಟಿಂಗ್ಗೆ ಅಡಚಣೆಯಾಯಿತು ಎಂಬುದಾಗಿ ನಾಯಕ ಹಾರ್ದಿಕ್ ಪಾಂಡ್ಯ ಬಳಿಕ ಹೇಳಿದ್ದಾರೆ. ಆದರೂ, ಅಗ್ರ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ ಭಾರತ ತಂಡಕ್ಕೆ ಮುಳುವಾಯಿತು ಎಂದು ಹೇಳುವುದಕ್ಕೆ ಅಡ್ಡಿಯಿಲ್ಲ.
ಬ್ಯಾಟಿಂಗ್ ಸುಧಾರಣೆ ಅಗತ್ಯ
ಮೊದಲ ಪಂದ್ಯದಲ್ಲಿ ಭಾರತ ತಂಡದ ಪರ ಇಶಾನ್ ಕಿಶನ್ ಹಾಗೂ ದೀಪಕ್ ಹೂಡ ಸಂಪೂರ್ಣ ವೈಫಲ್ಯ ಎದುರಿಸಿದರು. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ದ್ವಿ ಶತಕ ಬಾರಿಸಿದ್ದಾರೆ ಎಂಬ ಸಾಧನೆ ಹೊರತುಪಡಿಸಿ ಇಶಾನ್ ಕಿಶನ್ ಬ್ಯಾಟಿಂಗ್ ಸ್ಥಿರವಾಗಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಅವಕಾಶ ಪಡೆಯುತ್ತಿರುವ ದೀಪಕ್ ಹೂಡ ಅದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. 7ನೇ ಕ್ರಮಾಂಕದಲ್ಲಿ ಆಡಲು ಇಳಿಯುವ ಅವರು ಅಗತ್ಯ ರನ್ ಗಳಿಸದೇ ಹೋಗುವ ಕಾರಣ ತಂಡಕ್ಕೆ ಹಿನ್ನಡೆಯಾಗುತ್ತಿದೆ. ರಾಹುಲ್ ತ್ರಿಪಾಠಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಅವಕಾಶ ಪಡೆದರೂ ತಮ್ಮ ಆಯ್ಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಈ ಮೂವರು ಬ್ಯಾಟರ್ಗಳು ಈ ಪಂದ್ಯದಲ್ಲಿ ಸುಧಾರಿತ ಪ್ರದರ್ಶನ ನೀಡಿದರೆ ಗೆಲುವು ಸಾಧ್ಯ.
ಅರ್ಶ್ದೀಪ್, ಮಲಿಕ್ ಮೇಲೆ ಕಣ್ಣು
ಭಾರತ ತಂಡದ ವೇಗದ ಬೌಲಿಂಗ್ ವಿಭಾಗದ ಮೇಲೆ ಕ್ರಿಕೆಟ್ ಅಭಿಮಾನಿಗಳಿಗೆ ಅಸಮಾಧಾನವಿದೆ. ಪ್ರಮುಖವಾಗಿ ಅರ್ಶ್ದೀಪ್ ಸಿಂಗ್ ಹಾಗೂ ಉಮ್ರಾನ್ ಮಲಿಕ್ ಎದುರಾಳಿ ತಂಡಕ್ಕೆ ಅನಗತ್ಯ ರನ್ ಬಿಟ್ಟುಕೊಡುತ್ತಿದ್ದಾರೆ. ಅದರಲ್ಲೂ ಅರ್ಶ್ದೀಪ್ ಸಿಂಗ್ ಮೊದಲ ಪಂದ್ಯದ ಕೊನೇ ಓವರ್ನಲ್ಲಿ 27 ರನ್ ಬಿಟ್ಟುಕೊಟ್ಟಿದ್ದರು. ಅದುವೇ ಭಾರತದ ಸೋಲಿಗೆ ಕಾರಣವಾಯಿತು. ಅಲ್ಲದೆ, ಫ್ರಂಟ್ ಫೂಟ್ ನೋಬಾಲ್ ಎಸೆಯುವ ಚಾಳಿಯನ್ನು ಬಿಟ್ಟಿಲ್ಲ. ಬೌಲಿಂಗ್ ವಿಭಾಗ ಸುಧಾರಿಸಿಕೊಂಡರೆ ಭಾರತ ತಂಡಕ್ಕೆ ಗೆಲುವಿನ ಅವಕಾಶವಿದೆ.
ಇದನ್ನೂ ಓದಿ : INDvsNZ T20 | ವಾಷಿಂಗ್ಟನ್ ಸುಂದರ್ ಹಿಡಿದ ಅದ್ಭುತ ಕ್ಯಾಚ್ಗೆ ಶಹಬ್ಬಾಸ್ ಎಂದ ಕ್ರಿಕೆಟ್ ಅಭಿಮಾನಿಗಳು
ತಂಡಗಳು:
ಭಾರತ: ಹಾರ್ದಿಕ್ ಪಾಂಡ್ಯ (ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಶುಭ್ಮನ್ ಗಿಲ್, ಪೃಥ್ವಿ ಶಾ, ದೀಪಕ್ ಹೂಡ, ರಾಹುಲ್ ತ್ರಿಪಾಠಿ, ಜಿತೇಶ್ ಶರ್ಮ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಯಜ್ವೇಂದ್ರ ಚಹಲ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್, ಶಿವಂ ಮಾವಿ, ಮುಕೇಶ್ ಕುಮಾರ್.
ನ್ಯೂಜಿಲ್ಯಾಂಡ್ : ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಡೆವೋನ್ ಕಾನ್ವೆ, ಗ್ಲೆನ್ ಫಿಲಿಪ್ಸ್, ಡೇನ್ ಕ್ಲೆವರ್, ಮಾರ್ಕ್ ಚಾಪ್ಮನ್, ಮೈಕೆಲ್ ಬ್ರೇಸ್ವೆಲ್, ಡ್ಯಾರಿಲ್ ಮಿಚೆಲ್, ಮೈಕೆಲ್ ರಿಪ್ಪಾನ್, ಲಾಕಿ ಫರ್ಗ್ಯೂಸನ್, ಇಶ್ ಸೋಧಿ, ಬ್ಲೇರ್ ಟಿಕ್ನರ್, ಜಾಕೊಬ್ ಡಫಿ, ಹೆನ್ರಿ ಶಿಪ್ಲೆ, ಬೆನ್ ಲಿಸ್ಟರ್.