ರಾಂಚಿ : ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಯ(INDvsNZ T20) ಮೊದಲ ಹಣಾಹಣಿಯಲ್ಲಿ ಭಾರತ ತಂಡಕ್ಕೆ ಪರಾಜಯ ಎದುರಾಗಿದೆ. ಬ್ಯಾಟಿಂಗ್ ವಿಭಾಗ ಸ್ಥಿರತೆ ಕಾಪಾಡಿಕೊಳ್ಳದ ಕಾರಣ 21 ರನ್ಗಳ ಸೋಲಿಗೆ ಕಾರಣವಾಯಿತು. ಇದರಿಂದ ಮೂರು ಪಂದ್ಯಗಳ ಸರಣಿಯಲ್ಲಿ ಭಾರತದ ಸವಾಲು ಹೆಚ್ಚಾಗಿದೆ. ಲಖನೌ ಹಾಗೂ ಅಹಮದಾಬಾದ್ನಲ್ಲಿ ನಡೆಯಲಿರುವ ಮುಂದಿನೆರಡು ಪಂದ್ಯಗಳನ್ನು ಗೆದ್ದರೆ ಮಾತ್ರ ಸರಣಿ ಗೆಲುವಿನ ಅವಕಾಶ ಇರುತ್ತದೆ. ಏತನ್ಮಧ್ಯೆ, ಮೊದಲ ಪಂದ್ಯದಲ್ಲಿ ಭಾರತ ತಂಡದ ಸೋಲಿಗೆ ಕಾರಣಗಳು ಏನೆಂಬ ಚರ್ಚೆಗಳು ಹುಟ್ಟಿಕೊಂಡಿವೆ.
ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ (Hardik pandya) ಕೂಡ ತಂಡದ ಸೋಲಿಗೆ ಏನು ಕಾರಣ ಎಂಬುದನ್ನು ತಿಳಿಸಿದ್ದಾರೆ. ಪಂದ್ಯದ ಬಳಿಕ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಅವರು ಭಾರತ ತಂಡದ ತಪ್ಪು ಹೆಜ್ಜೆಗಳ ಬಗ್ಗೆ ವಿವರಿಸಿದ್ದಾರೆ.
ಮೊದಲಾಗಿ ನಾವು ರಾಂಚಿಯ (ranchi cricket stadium) ಪಿಚ್ನ ಗುಣವನ್ನು ಅರಿಯಲು ವಿಫಲಗೊಂಡಿದ್ದೇವೆ ಎಂದು ಪಾಂಡ್ಯ ಹೇಳಿದ್ದಾರೆ. ಪಿಚ್ ಈ ರೀತಿಯಾಗಿ ಟರ್ನ್ ತೆಗೆದುಕೊಳ್ಳುತ್ತದೆ ಎಂದು ನಾವು ಅಂದುಕೊಂಡೇ ಇರಲಿಲ್ಲ. ಹೊಸ ಚೆಂಡು ಮಿತಿಗಿಂತ ಹೆಚ್ಚು ತಿರುವು ಪಡೆದುಕೊಳ್ಳುತ್ತಿತ್ತು. ಹೀಗಾಗಿ ರನ್ ಚೇಸ್ ಮಾಡುವುದಕ್ಕೆ ಕಷ್ಟವಾಯಿತು. ಕೊನೇ ಹಂತದಲ್ಲಿ ನಾವು ಯೋಜನೆಗಿಂತ 20ರಿಂದ25 ರನ್ ಹೆಚ್ಚುವರಿಯಾಗಿ ಬಿಟ್ಟುಕೊಟ್ಟೆವು ಎಂದು ಅರ್ಶ್ದೀಪ್ ಸಿಂಗ್ ಕೊನೇ ಓವರ್ನಲ್ಲಿ ನೀಡಿದ 27 ರನ್ಗಳೂ ಸೋಲಿಗೆ ಕಾರಣ ಎಂಬುದನ್ನು ಬೊಟ್ಟು ಮಾಡಿದರು.
ಇದನ್ನೂ ಓದಿ : INDvsNZ T20 | ವಾಷಿಂಗ್ಟನ್ ಸುಂದರ್ ಹಿಡಿದ ಅದ್ಭುತ ಕ್ಯಾಚ್ಗೆ ಶಹಬ್ಬಾಸ್ ಎಂದ ಕ್ರಿಕೆಟ್ ಅಭಿಮಾನಿಗಳು
ಇದೇ ವೇಳೆ ಅವರು ಆಲ್ರೌಂಡರ್ ವಾಷಿಂಗ್ಟನ್ ಸುಂದರ್ (washington sundar) ಅವರ ಸಾಧನೆಯನ್ನೂ ಹೊಗಳಿಸಿದರು. ವಾಷಿಂಗ್ಟನ್ ಸುಂದರ್ 28 ಎಸೆತಗಳಲ್ಲಿ 50 ರನ್ ಬಾರಿಸುವ ಜತೆಗೆ ಪ್ರಮುಖ ಎರಡು ವಿಕೆಟ್ಗಳನ್ನು ಕೂಡ ಪಡೆದಿದ್ದರು. ಈ ಬಗ್ಗೆ ಮಾತನಾಡಿದ ಪಾಂಡ್ಯ, ಈ ಪಂದ್ಯ ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಪಂದ್ಯ ಎಂಬುದಕ್ಕಿಂತ, ವಾಷಿಂಗ್ಟನ್ ಸುಂದರ್ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಹಣಾಹಣಿ ಎಂದು ಹೇಳುವುದೇ ಸರಿ. ಇತ್ತೀಚಿನ ದಿನಗಳಲ್ಲಿ ಸುಂದರ್ ಪ್ರದರ್ಶನದಲ್ಲಿ ಸುಧಾರಣೆ ಕಂಡುಕೊಳ್ಳುತ್ತಿದ್ದಾರೆ. ಇದು ಮುಂದುವರಿದರೆ ಭಾರತ ತಂಡಕ್ಕೆ ಅವರಿಂದ ನೆರವಾಗಲಿದೆ ಎಂದು ಹೇಳಿದರು.