Site icon Vistara News

the 6ixty: ಹೊಸ ಮಾದರಿಯ ಕ್ರಿಕೆಟ್‌ ಲೀಗ್‌ ಜಾರಿಗೆ ತಂದ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ

the 6ixty

ಬೆಂಗಳೂರು: ಜಾಗತಿಕ ಕ್ರಿಕೆಟ್‌ ಕ್ಷೇತ್ರದಲ್ಲೀಗ ಬದಲಾವಣೆ ಪರ್ವ. ಇನ್ನಷ್ಟು ದೇಶಗಳನ್ನು ಕ್ರಿಕೆಟ್‌ ಕಡೆಗೆ ಸೆಳೆಯುವ ಹಾಗೂ ಆಟವನ್ನು ಕ್ಷಿಪ್ರವಾಗಿ ಮುಗಿಸಿ ಫಲಿತಾಂಶ ಪ್ರಕಟಿಸಬಲ್ಲ ಹಲವಾರು ಮಾದರಿಗಳನ್ನು ಜಾರಿಗೆ ತರಲಾಗುತ್ತಿದೆ. ಅಂತೆಯೇ ಕೆರಿಬಿಯನ್‌ ಕ್ರಿಕೆಟ್‌ ಲೀಗ್‌ನ ಆಯೋಜಕರು the 6ixty ಎಂಬ ಹೊಸ ಮಾದರಿಯ ಕ್ರಿಕೆಟ್‌ ಆಟವನ್ನು ಪರಿಚಯಿಸಲು ಮುಂದಾಗಿದೆ. ಬುಧವಾರ ಈ ಟೂರ್ನಿಯನ್ನು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಸಂಸ್ಥೆ ಬುಧವಾರ ಜಾರಿಗೆ ತಂದಿದೆ.

ದಶಕಗಳ ಹಿಂದೆ ಟೆಸ್ಟ್‌ ಕ್ರಿಕೆಟ್‌ಗೆ ಹೆಚ್ಚು ಮಾನ್ಯತೆ ಇತ್ತು. ಐದು ದಿನಗಳ ಕಾಲ ನಡೆಯುವ ಈ ಪಂದ್ಯ ವರ್ಷಗಳು ಕಳೆದಂತೆ ಜನಪ್ರಿಯತೆ ಕಳೆದುಕೊಂಡಿತು. ಬಳಿಕ ಸೀಮಿತ ಓವರ್‌ಗಳ ಏಕದಿನ ಕ್ರಿಕೆಟ್‌ ಜಾರಿಗೆ ಬಂತು. ದಿನವೀಡಿ ನಡೆಯುವ ಈ ಮಾದರಿಯ ಬಗ್ಗೆಯೂ ಜನರು ಆಸಕ್ತಿ ಕಳೆದುಕೊಳ್ಳಲು ಆರಂಭಿಸಿದರು. ಜತೆಗೆ ಜಾಗತಿಕ ಮಟ್ಟದ ಕ್ರೀಡಾ ಸ್ಪರ್ಧೆಗಳಿಗೆ ಪ್ರವೇಶ ಪಡೆಯಲು ಈ ಮಾದರಿ ವಿಫಲಗೊಂಡಿತು. ಈ ಹಿನ್ನೆಲೆಯಲ್ಲಿ ಕ್ರಿಕೆಟ್‌ ಮಂಡಳಿಗಳು ಟಿ೨೦ ಕ್ರಿಕೆಟ್‌ ಮಾದರಿಯನ್ನು ಪರಿಚಯಿಸಿದವು. ಅದು ಹೆಚ್ಚು ಪ್ರಖ್ಯಾತಿ ಪಡೆಯುವ ಜತೆಗೆ ಒಂದೊಂದೆ ಕ್ರಿಕೆಟ್‌ ಲೀಗ್‌ಗಳು ಪರಿಚಯಗೊಂಡವು. ೩ರಿಂದ ೪ ಗಂಟೆಗಳ ಕಾಲ ನಡೆಯುವ ಈ ಮಾದರಿಯೂ ಬೋರ್‌ ಆಗಲು ತೊಡಗುತ್ತಿದ್ದಂತೆ ಅನ್ವೇಷಣೆಗೆ ತೊಡಗಿದ ಕ್ರಿಕೆಟ್‌ ಪಂಡಿತರು ಇನ್ನೂ ಕ್ಷಿಪ್ರವಾಗಿ ಮುಗಿಯುವ ಕ್ರಿಕೆಟ್‌ ಮಾದರಿಗಳನ್ನು ಪರಿಚಯಿಸಿದರು. ಈ ಹಿನ್ನೆಲೆಯಲ್ಲಿ ಆರಂಭಗೊಂಡಿದ್ದು, ೧೦೦ ಎಸೆತಗಳನ್ನು ಹೊಂದಿರುವ “ದಿ ಹಂಡ್ರಡ್‌’ ಕ್ರಿಕೆಟ್‌ ಮಾದರಿಯ ಶುರುವಾಯಿತು. ಆ ಬಳಿಕ ಜಾರಿಗೆ ಬಂದಿದ್ದು ಟಿ೧೦. ಅದರ ಮುಂದುವರಿದ ಭಾಗವೇ ೬ixty ಕ್ರಿಕೆಟ್‌ ಲೀಗ್‌. ಆದರೆ, ಕೆಲವೊಂದು ನಿಯಮಗಳ ಬದಲಾವಣೆ ಹೊಂದಿದೆ.

೬೦ ಎಸೆಗಳ ಪಂದ್ಯ

೬ixty ಕ್ರಿಕೆಟ್‌ ಲೀಗ್‌ ಕೇವಲ ೧೦ ಓವರ್‌ಗಳ ಪಂದ್ಯ. ಇದು ಸ್ವಲ್ಪ ಮಟ್ಟಿಗೆ ದಿ ಹಂಡ್ರಡ್‌ ರೀತಿಯಲ್ಲೇ ಇದ್ದರೂ ನಿಯಮಗಳಲ್ಲಿ ಕೆಲವೊಂದು ಬದಲಾವಣೆಗಳಿವೆ. ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ (ಸಿಪಿಎಲ್‌)ನ ತಂಡಗಳೇ ಈ ಟೂರ್ನಿಯಲ್ಲೂ ಕಣಕ್ಕೆ ಇಳಿಯಲಿದೆ. ಪ್ರತಿ ತಂಡದಲ್ಲಿ ೧೦ ಆಟಗಾರರು ಇದ್ದರೂ, ಆರು ವಿಕೆಟ್‌ಗಳು ಉರುಳಿದ ತಕ್ಷಣ ಆ ತಂಡ ಆಲ್‌ಔಟ್‌ ಎಂದು ಪರಿಗಣಿಸಲಾಗುತ್ತದೆ.

ಈ ಟೂರ್ನಿಯ ಪವರ್‌ ಪ್ಲೇ ನಿಯಮವೂ ಭಿನ್ನವಾಗಿದೆ. ಅರಂಭಿಕ ಎರಡು ಓವರ್‌ಗಳ ಪವರ್‌ಪ್ಲೇ ಅವಧಿಯಲ್ಲಿ ಬ್ಯಾಟಿಂಗ್‌ ಮಾಡುವ ತಂಡ ಸತತ ಎರಡು ಸಿಕ್ಸರ್‌ಗಳು ಬಾರಿಸಿದರೆ ಮೂರನೇ ಪವರ್‌ಪ್ಲೇ ಅನ್‌ಲಾಕ್‌ ಆಗುತ್ತದೆ. ಈ ಪವರ್‌ ಪ್ಲೇ ಅವಕಾಶವನ್ನು ೩ರಿಂದ ೯ನೇ ಓವರ್‌ನ ನಡುವೆ ಯಾವಾಗ ಬೇಕಾದರೂ ಬಳಸಿಕೊಳ್ಳಬಹುದು.

ಸದ್ಯ ಚಾಲ್ತಿಯಲ್ಲಿರುವ ಕ್ರಿಕೆಟ್‌ ನಿಯಮದಂತೆ ಪ್ರತಿ ಓವರ್‌ ಮುಕ್ತಾಯದ ಬಳಿಕ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ತುದಿ ಬದಲಾಗುವುದಿಲ್ಲ. ಬೌಲಿಂಗ್‌ ಮಾಡುವ ತಂಡಗಳು ಸತತವಾಗಿ ಐದು ಓವರ್‌ಗಳನ್ನು ಒಂದೇ ತುದಿಯಿಂದ ಮಾಡಬೇಕು. ಉಳಿದ ಐದು ಓವರ್‌ಗಳನ್ನು ಮತ್ತೊಂದು ಬದಿಯಿಂದ ಮಾಡಬೇಕಾಗಿದೆ. ಅದೇ ರೀತಿ ಒಬ್ಬ ಬೌಲರ್‌ ಗರಿಷ್ಠ ಎರಡು ಓವರ್‌ಗಳನ್ನು ಮಾತ್ರ ಮಾಡಬಹುದಾಗಿದೆ.

ಒಬ್ಬ ಫೀಲ್ಡರ್‌ ಕಟ್‌

ಒಂದು ಇನಿಂಗ್ಸ್‌ ಗರಿಷ್ಠ ೪೫ ನಿಮಿಷಗಳ ಒಳಗೆ ಮುಕ್ತಾಯಗೊಳ್ಳಬೇಕು. ಅಷ್ಟು ಸಮಯದೊಳಗೆ ಬೌಲಿಂಗ್‌ ಮಾಡಿ ಮುಗಿಸದಿದ್ದರೆ ಒಬ್ಬ ಫೀಲ್ಡರ್‌ನ ಸೇವೆಯನ್ನು ಕಡಿತಗೊಳಿಸಲಾಗುತ್ತದೆ. ಉಳಿದಿರುವ ಎಸೆತಗಳಿಗೆ ೧೦ ಆಟಗಾರರಿಗೆ ಮಾತ್ರ ಕಣದಲ್ಲಿ ಉಳಿಯಲು ಅವಕಾಶವಿದೆ.

ಎಂದು ಆರಂಭ?: ಸದ್ಯದ ಮಾಹಿತಿ ಪ್ರಕಾರ ಉದ್ಘಾಟನಾ ಆವೃತ್ತಿಯ the 6ixty ಟೂರ್ನಿಯು ಆಗಸ್ಟ್‌ ೨೪ರಿಂದ ೨೮ರವರೆಗೆ ನಡೆಯಲಿದೆ. ಆರು ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ನ ತಂಡಗಳು ಹಾಗೂ ೩ ಮಹಿಳೆಯರ ಕೆರಿಬಿಯನ್‌ ಲೀಗ್‌ನ ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ.

ಇದನ್ನೂ ಓದಿ| ಕ್ರಿಕೆಟ್‌ ಕ್ಷೇತ್ರದಲ್ಲಿ BCCI ಮೀರಿಸುವುದು ಯಾರಿಂದಲೂ ಸಾಧ್ಯವಿಲ್ಲ ಎಂದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ

Exit mobile version