ಲಂಡನ್: ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ತೊಡೆ ಸಂದು ನೋವಿಗೆ ಒಳಗಾಗಿದ್ದು ಇಂಗ್ಲೆಂಡ್ ವಿರುದ್ಧದ ಮೊದಲ (IND vs ENG ODI) ಏಕದಿನ ಪಂದ್ಯದಿಂದ ಹೊರಗುಳಿದಿದ್ದಾರೆ. ಸಣ್ಣ ಪ್ರಮಾಣದಲ್ಲಿ ತೊಡೆಸಂದು ಗಾಯ (groin injury)ಕ್ಕೆ ಕೊಹ್ಲಿ ತುತ್ತಾಗಿದ್ದು, ಈ ಕಾರಣದಿಂದ ಮೊದಲ ಪಂದ್ಯದಲ್ಲಿ ಆಡುವ ಬಳಗದಲ್ಲಿಲ್ಲ ಎಂದು ಬಿಸಿಸಿಐ ತಿಳಿಸಿದೆ.
ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಅತ್ಯಂತ ಫಿಟ್ ಆಟಗಾರ. ಅವರು ಗಾಯಗೊಳ್ಳುವುದು ಅಪರೂಪ. ಉತ್ತಮ ಬ್ಯಾಟರ್ ಅಷ್ಟೇ ಅಲ್ಲ ಉತ್ತಮ ಫೀಲ್ಡರ್ ಆಗಿರುವ ಅವರು ಗಾಯದ ಕಾರಣಕ್ಕೆ ಪಂದ್ಯಕ್ಕೆ ಅಲಭ್ಯರಾದ ಉದಾಹರಣೆ ಬಹಳ ಕಡಿಮೆ. ಹೀಗಾಗಿ ಕೊಹ್ಲಿಯ ವಿಚಾರದಲ್ಲಿ ಟೀಮ್ ಮ್ಯಾನೇಜ್‌ಮೆಂಟ್ ಸುಳ್ಳು ಹೇಳುತ್ತಿದೆ ಎಂಬುವುದು ಕೆಲವು ಅಭಿಮಾನಿಗಳ ಅಭಿಪ್ರಾಯ. ಈ ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಬಹಳ ಜೋರಾಗಿದ್ದು, ಕೆಲ ಕ್ರಿಕೆಟ್ ಪ್ರೇಮಿಗಳು ವ್ಯಕ್ತಪಡಿಸಿರುವ ಕೆಲವು ಅಭಿಪ್ರಾಯಗಳ ತುಣುಕು ಇಲ್ಲಿದೆ.
೧. ವಿರಾಟ್ ಕೊಹ್ಲಿ ಐಪಿಎಲ್ ೧೫ನೇ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಇಂಗ್ಲೆಂಡ್ ವಿರುದ್ಧದ ಬರ್ಮಿಂಗ್‌ಹ್ಯಾಮ್ ಟೆಸ್ಟ್‌ನ ಎರಡೂ ಇನಿಂಗ್ಸ್‌ನಲ್ಲಿ ಉತ್ತಮವಾಗಿ ಆಡಿರಲಿಲ್ಲ. ಅಂತೆಯೇ ಟಿ೨೦ ಸರಣಿಯ ಕೊನೆಯೆರಡು ಪಂದ್ಯಗಳಲ್ಲಿ ಪಾಲ್ಗೊಂಡು ಬ್ಯಾಟಿಂಗ್ ವೈಫಲ್ಯ ಎದುರಿಸಿದ್ದರು. ಇದಕ್ಕೂ ಮೊದಲು ಕೊಹ್ಲಿ ಕಳಪೆ ಫಾರ್ಮ್ ಅನುಭವಿಸುತ್ತಿದ್ದು ೨ ವರ್ಷಗಳಿಂದ ಯಾವುದೇ ಪ್ರಾಕಾರದ ಕ್ರಿಕೆಟ್‌ನಲ್ಲಿ ಶತಕ ಭಾರಿಸಿಲ್ಲ.
೨. ಕೊಹ್ಲಿ ವೈಫಲ್ಯಕ್ಕೆ ಟೀಂ ಇಂಡಿಯಾದ ಮಾಜಿ ಆಟಗಾರರು ಟೀಕಾಸ್ತ್ರ ಪ್ರಯೋಗಿಸುತ್ತಿದ್ದಾರೆ. ಸುನಿಲ್ ಗವಾಸ್ಕರ್, ವೆಂಕಟೇಶ್ ಪ್ರಸಾದ್ ಸೇರಿ ಹಲವರು ಕೊಹ್ಲಿಯನ್ನು ತಂಡದಿಂದ ಕೈಬಿಡಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಏಕದಿನ ಸರಣಿಯಲ್ಲೂ ವೈಫಲ್ಯ ಕಂಡರೆ ಇನ್ನಷ್ಟು ಟೀಕೆಗಳನ್ನು ಕೇಳಬೇಕಾಗಬಹುದು ಎಂಬ ಕಾರಣಕ್ಕೆ ಈ ಸರಣಿಯಲ್ಲಿ ಆಡದೆ ತಪ್ಪಿಸಿಕೊಂಡು ಒಂದಷ್ಟು ಸಮಯಾವಕಾಶ ಪಡೆದುಕೊಳ್ಳುವ ಉದ್ದೇಶದಿಂದ ಕೊಹ್ಲಿ ಆಡುವ ಬಳಗದಿಂದ ಸ್ವತಃ ಹೊರಗುಳಿದಿದ್ದಾರೆ ಎಂಬುದು ಕೆಲವರ ಅಭಿಪ್ರಾಯ.
೩. ಮಾಜಿ ನಾಯಕನ ವೈಫಲ್ಯ ಹಾಗೂ ಯುವ ಆಟಗಾರರ ಉತ್ತಮ ಪ್ರದರ್ಶನ ಟೀಮ್ ಮ್ಯಾನೇಜ್‌ಮೆಂಟ್ ಚಿಂತೆಯನ್ನು ಹೆಚ್ಚಿಸಿದೆ. ಯುವಕರಿಗೆ ಅವಕಾಶ ನೀಡದೆ ಕೊಹ್ಲಿಯನ್ನೇ ಆಡಿಸುತ್ತಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಬಹುದು ಎಂಬ ಕಾರಣಕ್ಕೆ ಕೊಹ್ಲಿಗೆ ಗಾಯದ ನೆಪ ನೀಡಿ ಅವರನ್ನು ಕಣಕ್ಕಿಳಿಸದಿರುವ ನಿರ್ಧಾರಕ್ಕೆ ಟೀಮ್ ಮ್ಯಾನೇಜ್‌ಮೆಂಟ್ ಬಂದಿರಬಹುದು ಎಂಬ ವಾದವೂ ಇದೆ.
ಪ್ರಾಕ್ಟಿಸ್‌ನಲ್ಲೂ ಪಾಲ್ಗೊಂಡಿಲ್ಲ:
ಈ ಅಭಿಪ್ರಾಯ, ವಾದಗಳೇನೇ ಇದ್ದರೂ ಕೊಹ್ಲಿ ಗಾಯಗೊಂಡಿಲ್ಲ ಎಂಬುದನ್ನು ಖಚಿತಪಡಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಕೊಹ್ಲಿಯ ಕಳಪೆ ಫಾರ್ಮ್‌ನಿಂದ ಬೇಸರಗೊಂಡಿರುವ ಕ್ರಿಕೆಟ್ ಅಭಿಮಾನಿಗಳು ಹೀಗೆ ಕಾರಣಗಳನ್ನು ಹುಡುಕಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಏಕೆಂದರೆ, ಟಿ೨೦ ಸರಣಿಯ ಮೂರನೇ ಪಂದ್ಯದ ವೇಳೆ ಅವರು ಗಾಯಗೊಂಡಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಹೀಗಾಗಿ ಅವರು ಸೋಮವಾರ ಅಭ್ಯಾಸವನ್ನೂ ಮಾಡಲಿಲ್ಲ ಹಾಗೂ ಅಭ್ಯಾಸಕ್ಕೆ ಹೊರಟ ಟೀಮ್ ಇಂಡಿಯಾದ ಬಸ್‌ನಲ್ಲೂ ಕಾಣಿಸಿಕೊಂಡಿಲ್ಲ. ಸಣ್ಣ ಪ್ರಮಾಣದಲ್ಲಿ ಗಾಯಗೊಂಡಿರುವುದಾಗಿ ಬಿಸಿಸಿಐ ತಿಳಿಸಿದ್ದು ಕೊಹ್ಲಿ ಶೀಘ್ರವೇ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ.
ಏನಿದು ಗಾಯ?
ಕ್ರೀಡಾಪಟುಗಳಿಗೆ ತೊಡೆ ಸಂದು ಗಾಯ ಮಾಮೂಲು. ಸಾಕಷ್ಟು ಕ್ರಿಕೆಟಿಗರು ಈ ಸಮಸ್ಯೆ ಎದುರಿಸಿದ್ದಾರೆ. ಟೀಮ್ ಇಂಡಿಯಾದ ಆರಂಭಿಕ ಬ್ಯಾಟರ್ ಕೆ. ಎಲ್. ರಾಹುಲ್ ಸದ್ಯ ವಿಶ್ರಾಂತಿಯಲ್ಲಿ ಇರುವುದು ಕೂಡ ಇದೇ ಗಾಯದ ಸಮಸ್ಯೆಗೆ. ಈ ಗಾಯ ತೀವ್ರಗೊಂಡರೆ ಸರ್ಜರಿ ಕೂಡ ಬೇಕಾಗುತ್ತದೆ.
ಇದನ್ನೂ ಓದಿ: Commonwealth Games ; ಇದೇ ಮೊದಲ ಬಾರಿಗೆ ಮಹಿಳೆಯರ ಕ್ರಿಕೆಟ್, ಭಾರತ ತಂಡ ಪ್ರಕಟ