ಮ್ಯಾಂಚೆಸ್ಟರ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಮೂರನೇ ಪಂದ್ಯ (IND vs ENG ODI) ಎರಡು ಗಂಟೆ ಬೇಗ ಅರಂಭವಾಗಲಿದೆ. ಭಾರತೀಯ ಕ್ರೀಡಾ ಪ್ರೇಮಿಗಳ ವಾರಾಂತ್ಯದ ಸಮಯವನ್ನು ಗಮನಿಸಿಕೊಂಡು ಈ ಬದಲಾವಣೆ ಮಾಡಲಾಗಿದೆ. ಹೀಗಾಗಿ ಭಾರತೀಯ ಕಾಲಮಾನ ಮಧ್ಯಾಹ್ನ ೩.೩೦ಕ್ಕೆ ಪಂದ್ಯ ಆರಂಭವಾಗಲಿದೆ.
ಸರಣಿಯ ಮೊದಲೆರಡು ಪಂದ್ಯಗಳು ಮುಕ್ತಾಯಗೊಂಡಿದ್ದು, ಮೊದಲ ಪಂದ್ಯದಲ್ಲಿ ಭಾರತ ಗೆದ್ದಿದ್ದರೆ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಜಯ ಗಳಿಸಿದೆ. ಸರಣಿ ೧-೧ ಸಮಬಲದ ಸಾಧನೆಯಲ್ಲಿದ್ದು, ಮೂರನೇ ಪಂದ್ಯದ ರೋಚಕತೆ ಹೆಚ್ಚಿದೆ. ಕೊನೇ ಪಂದ್ಯವನ್ನು ಗೆದ್ದವರು ಸರಣಿಗೆ ಒಡೆಯರಾಗಲಿರುವ ಕಾರಣ ಇತ್ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಿರೀಕ್ಷೆ ಮಾಡಲಾಗಿದೆ.
ಈ ಪಂದ್ಯ ಭಾರತೀಯ ಮೂಲದವರು ಹೆಚ್ಚಿರುವ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆಯಲಿದೆ. ಆದರೆ, ಎಂದಿಗಿಂತ ಎರಡು ಗಂಟೆ ಮೊದಲು ಆರಂಭವಾಗಲಿದೆ. ಸ್ಥಳೀಯ ಸಮಯದ ಪ್ರಕಾರ ಬೆಳಗ್ಗೆ ೮.೩೦ ಕ್ಕೆ ಪಂದ್ಯ ಆರಂಭವಾಗಲಿದೆ. ಹೀಗಾಗಿ ಭಾರತದಲ್ಲಿ ಮಧ್ಯಾಹ್ನ ೩.೩೦ರಿಂದ ಪಂದ್ಯವನ್ನು ನೇರ ಪ್ರಸಾರದಲ್ಲಿ ವೀಕ್ಷಿಸಲು ಸಾಧ್ಯವಿದೆ.
ಪಿಚ್ ಹೇಗಿದೆ? ಮ್ಯಾಂಚೆಸ್ಟರ್ ಪಿಚ್ ಬ್ಯಾಟಿಂಗ್‌ಗೆ ಪೂರಕವಾಗಿದೆ. ಹೀಗಾಗಿ ಟಾಸ್ ಗೆದ್ದ ತಂಡ ಬ್ಯಾಟಿಂಗ್ ಆಯ್ಕೆ ಮಾಡುವುದು ಖಾತರಿ. ಇಂಗ್ಲೆಂಡ್ ತಂಡ ಇಲ್ಲಿ ಗರಿಷ್ಠ ೩೯೬ ರನ್ ಬಾರಿಸಿದೆ. ಅಂತೆಯೇ ಭಾರತ ತಂಡ ಇಲ್ಲಿ ಗರಿಷ್ಠ ೩೩೬ ರನ್ ಬಾರಿಸಿದೆ. ಮೊದಲು ಬ್ಯಾಟ್ ಮಾಡಿದ ತಂಡ ಪಂದ್ಯ ಗೆಲ್ಲುವ ಸಾಧ್ಯತೆಗಳು ಹೆಚ್ಚಿವೆ.
ಪಂದ್ಯದ ವಿವರ
ತಾಣ: ಓಲ್ಡ್ ಟ್ರಾಫರ್ಡ್ ಸ್ಟೇಡಿಯಮ್, ಮ್ಯಾಂಚೆಸ್ಟರ್
ಸಮಯ: ಮಧ್ಯಾಹ್ನ ೩.೩೦ಕ್ಕೆ ಆರಂಭ (ಭಾರತೀಯ ಕಾಲಮಾನ)
ನೇರ ಪ್ರಸಾರ: ಸೋನಿ ನೆಟ್ವರ್ಕ್ ಚಾನೆಲ್‌ಗಳಲ್ಲಿ ನೋಡಬಹುದ. ಲೈವ್ ಸ್ಟ್ರೀಮಿಂಗ್‌ಗೆ ಸೋನಿ ಲೈವ್‌ಗೆ ಭೇಟಿ ಕೊಡಬೇಕು.