Site icon Vistara News

Ind vs Lanka | ಭಾರತ- ಶ್ರೀಲಂಕಾ ಏಷ್ಯಾ ಕಪ್ ಸೂಪರ್‌- 4 ಹಣಾಹಣಿ ಎಲ್ಲಿ? ತಂಡಗಳ ಬಲಾಬಲವೇನು?

ind vs lanka

ದುಬೈ : ಭಾರತ ಹಾಗೂ ಶ್ರೀಲಂಕಾ ನಡುವಿನ ಏಷ್ಯಾ ಕಪ್‌ ಸೂಪರ್‌-೪ ಪಂದ್ಯ ಸೆಪ್ಟೆಂಬರ್‌ ೬ರಂದು ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಮ್‌ನಲ್ಲಿ ನಡೆಯಲಿದೆ. ಪಾಕಿಸ್ತಾನ ತಂಡದ ವಿರುದ್ಧದ ಮೊದಲ ಸೂಪರ್‌-೪ ಹಣಾಹಣಿಯಲ್ಲಿ ಸೋತಿರುವ ಭಾರತ ತಂಡಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಹೀಗಾಗಿ ಇಲ್ಲಿ ಗೆದ್ದರೆ ಮಾತ್ರ ಫೈನಲ್‌ಗೆ ತಲುಪಲು ಸಾಧ್ಯವಿದೆ. ಜತೆಗೆ ಉತ್ತಮ ರನ್‌ರೇಟ್‌ ಕೂಡ ಹೊಂದಿರಬೇಕು. ಸೋತರೆ ಅಫಘಾನಿಸ್ತಾನ ವಿರುದ್ಧ ಮುಂದಿನ ಅನೌಪಚಾರಿಕ ಪಂದ್ಯವನ್ನು ಮುಗಿಸಿ ತವರಿನ ಫ್ಲೈಟ್‌ ಹತ್ತಬೇಕಾಗಬಹುದು.

ಅತ್ತ ಶ್ರೀಲಂಕಾ ತಂಡ ಸೂಪರ್ ೪ ಹಂತದ ಮೊದಲ ಪಂದ್ಯದಲ್ಲಿ ಅಫಘಾನಿಸ್ತಾನ ತಂಡವನ್ನು ಮಣಿಸಿರುವ ಕಾರಣ ನಿರಾಳವಾಗಿದೆ ಹಾಗೂ ಹೆಚ್ಚು ವಿಶ್ವಾಸದಲ್ಲಿದೆ. ಹೀಗಾಗಿ ರೋಹಿತ್‌ ಶರ್ಮ ಬಳಗ ಗೆಲುವಿಗಾಗಿ ಹೆಚ್ಚು ಶ್ರಮ ವಹಿಸಬೇಕಾಗುತ್ತದೆ.

ಪಿಚ್‌ ಹೇಗಿದೆ?

ಭಾರತ ತಂಡದ ಹಾಲಿ ಏಷ್ಯಾ ಕಪ್‌ನಲ್ಲಿ ಇದುವರೆಗೆ ಮೂರು ಪಂದ್ಯಗಳಲ್ಲಿ ಆಡಿದೆ. ಮೂರು ಪಂದ್ಯಗಳು ದುಬೈನಲ್ಲೇ ನಡೆದಿವೆ. ಇಲ್ಲಿನ ಪಿಚ್ ಸ್ಪರ್ಧಾತ್ಮಕವಾಗಿರುವುದು ಖಾತರಿಯಾಗಿದೆ. ಹೊಸ ಚೆಂಡು ವೇಗದ ಬೌಲರ್‌ಗಳಿಗೆ ನೆರವಾದರೆ ಬಳಿಕ ನಿಧಾನಗೊಳುತ್ತದೆ. ಹೀಗಾಗಿ ಮೊದಲು ಬ್ಯಾಟ್‌ ಮಾಡಿದ ತಂಡಕ್ಕೆ ಗೆಲುವು ಸರಳ. ಇದರಿಂದಾಗಿ ಟಾಸ್‌ ಗೆಲುವು ಕೂಡ ಪಂದ್ಯದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಟಾಸ್‌ ಗೆದ್ದ ತಂಡ ಮೊದಲು ಫೀಲ್ಡಿಂಗ್‌ ಆಯ್ಕೆ ಮಾಡಿಕೊಳ್ಳುತ್ತದೆ.

ಭಾರತ ತಂಡ ಈ ಪಿಚ್‌ನಲ್ಲಿ ಶ್ರೀಲಂಕಾ ವಿರುದ್ಧ ಆಡಿಲ್ಲ. ನಮೀಬಿಯಾ, ನ್ಯೂಜಿಲೆಂಡ್‌, ಸ್ಕಾಟ್ಲೆಂಡ್‌ ಮತ್ತು ಪಾಕಿಸ್ತಾನ ವಿರುದ್ಧ ಭಾರತ ಆಡಿದೆ. ಎಲ್ಲ ತಂಡಗಳ ವಿರುದ್ಧವೂ ಜಯ ಸಾಧಿಸಿದೆ. ಹೀಗಾಗಿ ಶ್ರೀಲಂಕಾ ಮತ್ತು ಭಾರತ ನಡುವಿನ ಹಣಾಹಣಿ ಈ ಪಿಚ್‌ ಗೆ ಹೊಸದು.ಭಾರತ ತಂಡ ಬೌಲಿಂಗ್ ಹಾಗೂ ಬ್ಯಾಟಿಂಗ್‌ ಸಮತೋಲನದೊಂದಿಗೆ ಕಣಕ್ಕೆ ಇಳಿಯಬೇಕಾಗಿದೆ.

ಹವಾಗುಣ ಹೇಗಿರಲಿದೆ?:

ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯ ನಡೆಯುವ ದುಬೈನಲ್ಲಿ ಶುಭ್ರ ವಾತಾವರಣ ಇರಲಿದೆ. ಗರಿಷ್ಠ ೪೦ ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಲಿದೆ. ಹೀಗಾಗಿ ರಾತ್ರಿಯಾಗುತ್ತಿದ್ದಂತೆ ಸ್ವಲ್ಪ ಇಬ್ಬನಿ ಪರಿಣಾಮ ಉಂಟಾಗಲಿದ್ದು, ಆ ವೇಳೆ ಬೌಲರ್‌ಗಳಿಗೆ ನಿಖರ ದಾಳಿ ಮಾಡಲು ತೊಂದರೆಯಾಗಲಿದೆ.

ಬಲಾಬಲ?

ಭಾರತ ಮತ್ತು ಶ್ರೀಲಂಕಾ ತಂಡ ಇದುವರೆಗೆ ಒಂದು ಬಾರಿಯೂ ದುಬೈ ಪಿಚ್‌ನಲ್ಲಿ ಮುಖಾಮುಖಿಯಾಗಿಲ್ಲ. ಆದರೆ ಏಷ್ಯಾ ಕಪ್‌ನಲ್ಲಿ ಒಟ್ಟಾರೆ ೨೦ ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ೧೦ ಬಾರಿ ಭಾರತ ತಂಡ ಗೆದ್ದಿದ್ದರೆ ಅಷ್ಟೇ ಬಾರಿ ಶ್ರೀಲಂಕಾ ತಂಡವೂ ಜಯ ಸಾಧಿಸಿದೆ. ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಈ ಹಿಂದಿನ ಐದು ಟಿ೨೦ ಪಂದ್ಯಗಳಲ್ಲಿ ಭಾರತವೇ ಜಯ ಸಾಧಿಸಿದೆ.

ತಂಡಗಳು:

ಭಾರತ: ರೋಹಿತ್ ಶರ್ಮ (ನಾಯಕ), ಕೆ. ಎಲ್‌ ರಾಹುಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್ ಯಾದವ್‌, ರಿಷಭ್‌ ಪಂತ್‌, ಹಾರ್ದಿಕ್ ಪಾಂಡ್ಯ, ದೀಪಕ್‌ ಹೂಡ, ದಿನೇಶ್ ಕಾರ್ತಿಕ್‌, ಯಜ್ವೇಂದ್ರ ಚಹಲ್‌, ಭುವನೇಶ್ವರ್‌ ಕುಮಾರ್‌, ರವಿ ಬಿಷ್ಣೋಯಿ, ಅರ್ಶ್‌ದೀಪ್‌ ಸಿಂಗ್‌, ಆವೇಶ್‌ ಖಾನ್‌, ಅಕ್ಷರ್‌ ಪಟೇಲ್‌, ಆರ್. ಅಶ್ವಿನ್‌.

ಶ್ರೀಲಂಕಾ : ದಸುನ್ ಶನಕ (ನಾಯಕ), ದನುಷ್ಕಾ ಗುಣತಿಲಕ, ಪಾಥುಮ್ ನಿಸ್ಸಂಕಾ, ಕುಸಾಲ್‌ ಮೆಂಡಿಸ್‌, ಚರಿತಾ ಅಸಲಂಕಾ, ಭಾನುಕಾ ರಾಜಪಕ್ಸ, ಆಶೆನ್‌ ಭಂಡಾರ, ಧನಂಜಯ ಡಿ ಸಿಲ್ವಾ, ವಾನಿಂದು ಹಸರಂಗ, ಮಹೀಶ್‌ ತೀಕ್ಷಣ, ಜೆಫ್ರಿ ವಂಡರ್ಸೆ, ಪ್ರವೀಣ್‌ ಜಯವಿಕ್ರಮ, ಚಾಮಿಕಾ ಕರುಣಾರತ್ನೆ, ದಿಲ್ಶನ್‌ ಮಧುಶನಕ, ಮತೀಶ್‌ ಪತಿರಾಣಾ, ದಿನೇಶ್ ಚಂಡಿಮಲ್‌.

ಪಂದ್ಯದ ವಿವರ

ಆರಂಭ: ರಾತ್ರಿ ೭.೩೦ರಿಂದ

ತಾಣ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಮ್‌

ನೇರ ಪ್ರಸಾರ : ಸ್ಟಾರ್‌ ಸ್ಪೋರ್ಟ್ಸ್‌ ನೆಟ್ವರ್ಕ್‌

ಇದನ್ನೂ ಓದಿ | IND vs LANKA | ಗೆಲ್ಲಲೇಬೇಕಾದ ಪಂದ್ಯದಲ್ಲಿ ಬೌಲಿಂಗ್‌ ಸುಧಾರಣೆಯೇ ಭಾರತದ ಆದ್ಯತೆಯಾಗಬೇಕು

Exit mobile version