ಲಖನೌ: ಭಾರತ ಹಾಗೂ ಪ್ರವಾಸಿ ನ್ಯೂಜಿಲ್ಯಾಂಡ್ ನಡುವಿನ ಎರಡನೇ ಟಿ20 ಪಂದ್ಯ (INDvsNZ T20) ಕ್ರಿಕೆಟ್ ಅಭಿಮಾನಿಗಳಲ್ಲಿ ಕೌತುಕ ಸೃಷ್ಟಿಸಿದೆ. ಭಾರತ ತಂಡ ಮೊದಲ ಪಂದ್ಯದಲ್ಲಿ ಸೋಲು ಕಂಡಿರುವುದೇ ಅದಕ್ಕೆ ಕಾರಣ. ಎರಡನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಮ್ ಇಂಡಿಯಾ ಗೆಲುವು ಸಾಧಿಸಿದರೆ ಮಾತ್ರ ಸರಣಿ ಜೀವಂತವಾಗಿರಲಿದೆ. ಹೀಗಾಗಿ ಭಾರತ ತಂಡದ ಪಾಲಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ಈ ಪಂದ್ಯವನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ನಾನಾ ಯೋಜನೆ ರೂಪಿಸಿಕೊಂಡಿರುತ್ತಾರೆ. ಮೊದಲ ಪಂದ್ಯದ ತಪ್ಪುಗಳನ್ನು ಸರಿಪಡಿಸಿಕೊಂಡು ಕಣಕ್ಕೆ ಇಳಿಯವುದೇ ತಂಡದ ಗುರಿಯಾಗಲಿದೆ.
ಈ ಪಂದ್ಯ ಉತ್ತರದ ಪ್ರದೇಶದ ಲಖನೌನಲ್ಲಿ ನಡೆಯಲಿದೆ. ಇಲ್ಲಿನ ಭಾರತ ರತ್ನ ಅಟಲ್ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಪಂದ್ಯ ಆಯೋಜನೆಗೊಂಡಿದೆ. ಇದು ಸಮತೋಲಿತ ಪಿಚ್ ಆಗಿದ್ದು ಬ್ಯಾಟಿಂಗ್ ಹಾಗೂ ಬೌಲಿಂಗ್ಗೆ ಸಮಾನ ರೀತಿಯಲ್ಲಿ ಸಹಕಾರಿಯಾಗಿದೆ.
ಇತ್ತಂಡಗಳ ನಡುವಿನ ಹಣಾಹಣಿ ಜನವರಿ 29ರ ರಾತ್ರಿ 7 ಗಂಟೆಗೆ ಆರಂಭವಾಗಲಿದೆ. ಟಾಸ್ ಸಂಜೆ 6.30 ನಿಮಿಷಕ್ಕೆ ನಡೆಯಲಿದೆ. ನ್ಯೂಜಿಲ್ಯಾಂಡ್ ತಂಡಕ್ಕೆ ಈ ಪಂದ್ಯವನ್ನು ಗೆದ್ದರೆ ಸರಣಿ ಗೆದ್ದ ಗೌರವ ಲಭಿಸಲಿದೆ. ಹಿಂದಿನ ಪಂದ್ಯದಂತೆ ನಿಗದಿತ ಯೋಜನೆಯ ಪ್ರಕಾರ ಕಣಕ್ಕೆ ಇಳಿಯಲಿದೆ.
ಪಿಚ್ ಹೇಗಿದೆ?
ಲಖನೌನ ಏಕನಾ ಕ್ರಿಕೆಟ್ ಸ್ಟೇಡಿಯಮ್ನ ಪಿಚ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡಕ್ಕೂ ಪೂರಕವಾಗಿದೆ. ಆದರೆ, ಇಲ್ಲಿ ನಡೆದ ಐದು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡವೇ ಜಯ ಗಳಿಸಿದೆ. ಇಲ್ಲಿ ಚೇಸಿಂಗ್ ಮಾಡುವುದು ಸುಲಭವಲ್ಲ. ಹೀಗಾಗಿ ಟಾಸ್ ಗೆದ್ದ ತಂಡದ ನಾಯಕ ಬ್ಯಾಟಿಂಗ್ ಮೊರೆ ಹೋಗುವುದರಲ್ಲಿ ಸಂಶಯವಿಲ್ಲ. ಪಂದ್ಯಕ್ಕೆ ಮಳೆಯ ಅಡಚಣೆ ಇಲ್ಲ ಎಂಬುದಾಗಿ ಹವಾಮಾನ ವರದ ಹೇಳಿದೆ.
ನೇರಪ್ರಸಾರ ಎಲ್ಲಿ
ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವಿನ ಟಿ20ನ ಸರಣಿಯ ಎರಡನೇ ಪಂದ್ಯ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ನಲ್ಲಿ ನೇರ ಪ್ರಸಾರವಾಗಲಿದೆ. ಅದೇ ರೀತಿ ಡಿಸ್ನಿ ಹಾಟ್ ಸ್ಟಾರ್ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದೆ.
ಇದನ್ನೂ ಓದಿ : Washington Sundar : ನಿಮ್ಮಿಷ್ಟದ ಬಿರಿಯಾನಿ ಸಿಗಲ್ಲ ಎಂದಾದರೆ ಹೋಟೆಲ್ ಬದಲಿಸುತ್ತೀರಾ? ಸುಂದರ್ ಕೇಳಿದ್ದು ಯಾರಿಗೆ?
ತಂಡಗಳು
ಭಾರತ: ಹಾರ್ದಿಕ್ ಪಾಂಡ್ಯ (ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಶುಭ್ಮನ್ ಗಿಲ್, ಪೃಥ್ವಿ ಶಾ, ದೀಪಕ್ ಹೂಡ, ರಾಹುಲ್ ತ್ರಿಪಾಠಿ, ಜಿತೇಶ್ ಶರ್ಮ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಯಜ್ವೇಂದ್ರ ಚಹಲ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್, ಶಿವಂ ಮಾವಿ, ಮುಕೇಶ್ ಕುಮಾರ್.
ನ್ಯೂಜಿಲ್ಯಾಂಡ್ : ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಡೆವೋನ್ ಕಾನ್ವೆ, ಗ್ಲೆನ್ ಫಿಲಿಪ್ಸ್, ಡೇನ್ ಕ್ಲೆವರ್, ಮಾರ್ಕ್ ಚಾಪ್ಮನ್, ಮೈಕೆಲ್ ಬ್ರೇಸ್ವೆಲ್, ಡ್ಯಾರಿಲ್ ಮಿಚೆಲ್, ಮೈಕೆಲ್ ರಿಪ್ಪಾನ್, ಲಾಕಿ ಫರ್ಗ್ಯೂಸನ್, ಇಶ್ ಸೋಧಿ, ಬ್ಲೇರ್ ಟಿಕ್ನರ್, ಜಾಕೊಬ್ ಡಫಿ, ಹೆನ್ರಿ ಶಿಪ್ಲೆ, ಬೆನ್ ಲಿಸ್ಟರ್.