Site icon Vistara News

T20 World Cup | ವಿಶ್ವ ಕಪ್​ನಲ್ಲಿ ಆಡುತ್ತಿರುವ ಪ್ರಮುಖ ಕಿರಿಯ ಆಟಗಾರರು ಯಾರು, ಅವರ ಸಾಧನೆ ಏನು?

icc

ಮೆಲ್ಬೋರ್ನ್​: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ 20 ವಿಶ್ವ ಕಪ್(T20 World Cup)​ನಲ್ಲಿ ಆಡುತ್ತಿರುವ ಕಿರಿಯ ಆಟಗಾರರ ಪಟ್ಟಿಯೊಂದನ್ನು ರಚಿಸಲಾಗಿದ್ದು ಅವರು ಕ್ರಿಕೆಟ್​ನಲ್ಲಿ ಮಾಡಿದ ಸಾಧನೆಯನ್ನು ಈ ಕೆಳಗೆ ವಿವರಿಸಲಾಗಿದೆ.

ನಸೀಮ್ ಷಾ (15 ಫೆಬ್ರವರಿ 2003)

19 ವರ್ಷದ ಪಾಕಿಸ್ತಾನದ ಮಾರಕ ವೇಗಿ ನಸೀಮ್ ಶಾ 16 ನೇ ವಯಸ್ಸಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಮರಿ ಶೋಯೆಬ್​ ಅಖ್ತರ್​ ಎಂದೇ ಪ್ರಸಿದ್ಧಿ ಪಡೆದ ಅವರು ಬೌನ್ಸರ್​ ಎಸೆಯುವುದರಲ್ಲಿ ಎತ್ತಿದ ಕೈ. ಇತ್ತೀಚೆಗೆ ಏಷ್ಯಾ ಕಪ್ 2022 ರಲ್ಲಿ T20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದರ್ಪಣೆ ಮಾಡಿದ್ದರು. ಗಾಯಗೊಂಡ ಶಾಹಿನ್ ಅಫ್ರಿದಿ ಬದಲಿಗೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಇದೀಗ ವಿಶ್ವ ಕಪ್ ತಂಡದಲ್ಲಿರುವ ಅವರು ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಮಾರಕ ಬೌಲಿಂಗ್​ ನಡೆಸಿ ಮಿಂಚಿದ್ದರು. ಈ ಪಂದ್ಯದಲ್ಲಿ ಫಿಲ್​ ಸಾಲ್ಟ್​ ಅವರ ವಿಕೆಟ್​ ಹಾರಿಸಿದ ವಿಡಿಯೊ ಎಲ್ಲಡೆ ವೈರಲ್​ ಆಗಿತ್ತು. ಒಟ್ಟು 9 ಟಿ20 ಪಂದ್ಯವನ್ನಾಡಿರುವ ಅವರು 11 ವಿಕೆಟ್​ ಕಬಳಿಸಿದ್ದಾರೆ.

ಮೊಹಮ್ಮದ್ ಸಲೀಂ: (9 ಸೆಪ್ಟೆಂಬರ್ 2002)

ಅಫಘಾನಿಸ್ತಾನ 20 ವರ್ಷದ ಕ್ರಿಕೆಟಿಗ ಮೊಹಮ್ಮದ್ ಸಲೀಂ 9 ಸೆಪ್ಟೆಂಬರ್ 2002ರಂದು ಜನಿಸಿದ್ದಾರೆ. ಅಫಘಾನಿಸ್ತಾನದ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 4 ಪಂದ್ಯಗಳಲ್ಲಿ 15 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದೀಗ ಟಿ 20 ವಿಶ್ವ ಕಪ್​ ತಂಡದಲ್ಲಿರುವ ಅವರು ತಮ್ಮ ಕರಾಕುವಾಕ್ ಬೌಲಿಂಗ್​ ಪ್ರದರ್ಶನ ತೋರಲು ಎದುರು ನೋಡುತ್ತಿದ್ದಾರೆ.

ಟ್ರಿಸ್ಟಾನ್ ಸ್ಟಬ್ಸ್: (22 ಆಗಸ್ಟ್ 14 2000 )

22 ವರ್ಷದ ದಕ್ಷಿಣ ಆಫ್ರಿಕಾದ ಯುವ ಬ್ಯಾಟರ್​ ಟ್ರಿಸ್ಟಾನ್ ಸ್ಟಬ್ಸ್, 22, ಆಗಸ್ಟ್ 14, 2000 ರಂದು ಜನಿಸಿದರು. ದಕ್ಷಿಣ ಆಫ್ರಿಕಾದ CSA t20 challenge ನಲ್ಲಿ 31 ಎಸೆತದಲ್ಲಿ 80 ರನ್​ ಸಿಡಿಸುವ ಮೂಲಕ ಗುರುತಿಸಿಕೊಂಡ ಈ ಸ್ಫೋಟಕ ಬ್ಯಾಟರ್​ ಇದೀಗ ಟಿ20 ವಿಶ್ವ ಕಪ್​ನಲ್ಲಿಯೂ ಅಬ್ಬರಿಸಲು ಸಜ್ಜಾಗಿದ್ದಾರೆ. 360 ಡಿಗ್ರಿಯಲ್ಲಿ ಬ್ಯಾಟ್​ ಬೀಸುವ ಈ “ಸೂಪರ್​ ಸ್ಟಾರ್​” ಆಟಗಾರ 8 ಟಿ20 ಪಂದ್ಯಗಳಲ್ಲಿ 142 ರನ್​ ಪೇರಿಸಿದ್ದಾರೆ. ಕಳೆದ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ಪರ ಕಣಕ್ಕಿಳಿದಿದ್ದರು. ಆದರೆ ಇಲ್ಲಿ 2 ಪಂದ್ಯಗಳಲ್ಲಿ ಕೇವಲ 2 ರನ್​ ಗಳಿಸಿ ವಿಫಲರಾಗಿದ್ದರು.

ಅರ್ಶ್‌ದೀಪ್ ಸಿಂಗ್: (5 ಫೆಬ್ರವರಿ 1999 )

23 ವರ್ಷದ ಪಂಜಾಬ್​ನ ಏಡಗೈ ವೇಗಿ ಅರ್ಶ್‌ದೀಪ್ ಸಿಂಗ್ 5 ಫೆಬ್ರವರಿ 1999 ರಂದು ಜನಿಸಿದರು. ಭಾರತೀಯ T20 ವಿಶ್ವ ಕಪ್ ತಂಡದ ಭಾಗವಾಗಿರುವ ಅವರು ಇದುವರೆಗೆ 13 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 8.14ರ ಸರಾಸರಿಯಲ್ಲಿ 19 ವಿಕೆಟ್ ಪಡೆದಿದ್ದಾರೆ. ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ಅದ್ಭುತ ಪ್ರದರ್ಶನ ನೀಡುತ್ತಿರುವ ಅವರು ಈವರೆಗೆ 37 ಪಂದ್ಯದಲ್ಲಿ 40 ವಿಕೆಟ್​ ಕಬಳಿಸಿ ಮಿಂಚಿದ್ದಾರೆ. ಯಾರ್ಕರ್​ ಬೌಲಿಂಗ್​ನಲ್ಲಿ ಪ್ರಸಿದ್ಧಿ ಹೊಂದಿರುವ ಅರ್ಶ್‌ದೀಪ್ ಆಸ್ಟ್ರೇಲಿಯಾದಲ್ಲಿಯೂ ತಮ್ಮ ಬೌಲಿಂಗ್​ ಚಾಪು ಪ್ರದರ್ಶಿಸುವ ನಿರೀಕ್ಷೆಯಲ್ಲಿದ್ದಾರೆ.

ಫಿನ್ ಅಲೆನ್: (ಏಪ್ರಿಲ್ 22, 1999)

23 ವರ್ಷದ ನ್ಯೂಜಿಲೆಂಡ್​ ತಂಡದ ಫಿನ್ ಅಲೆನ್ ಏಪ್ರಿಲ್ 22, 1999 ರಂದು ಜನಿಸಿದರು. 2021 ರಲ್ಲಿ ನ್ಯೂಜಿಲೆಂಡ್‌ ತಂಡದ ಪರ ಪದಾರ್ಪಣೆ ಮಾಡಿದ ಅವರು ಇದುವರೆಗೆ 18 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು 469 ರನ್​ ಬಾರಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 2 ಅರ್ಧ ಶತಕ ಸಿಡಿಸಿದ್ದಾರೆ. ಇದೀಗ ಟಿ 20 ವಿಶ್ವ ಕಪ್​ ತಂಡದಲ್ಲಿ ಅವಕಾಶ ಪಡೆದಿರುವ ಅಲೆನ್ ಸ್ಫೋಟಕ ಬ್ಯಾಟಿಂಗ್​ ನಡೆಸುವ ಇರಾದೆ ಹೊಂದಿದ್ದಾರೆ.

ಹ್ಯಾರಿ ಬ್ರೂಕ್​​: 22 ಫೆಬ್ರವರಿ 1999

ಇಂಗ್ಲೆಂಡ್‌ ಕ್ರಿಕೆಟ್​ ತಂಡದ ಯುವ ಸ್ಫೋಟಕ ಬ್ಯಾಟರ್​ ಹ್ಯಾರಿ ಬ್ರೂಕ್ 22 ಫೆಬ್ರವರಿ 1999 ರಂದು ಜನಿಸಿದ್ದಾರೆ. 23ರ ಹರೆಯದ ಅವರು ವಿಶ್ವದಾದ್ಯಂತ ಟಿ20 ಸ್ಪರ್ಧೆಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿಕೊಟ್ಟಿದ್ದಾರೆ. ಟಿ20 ವಿಶ್ವ ಕಪ್​ನಲ್ಲಿ ಸ್ಥಾನ ಪಡೆದಿರುವ ಅವರು ಕಳೆದ ಪಾಕಿಸ್ತಾನ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ 24 ಎಸೆತಗಳಲ್ಲಿ ಅಜೇಯ 45 ರನ್​ ಪೇರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಪ್ರದರ್ಶನದಿಂದ ಅವರು ಪ್ಲೇಯಿಂಗ್​ ಇಲೆವೆನ್​ನಲ್ಲಿ ಕಾಣಿಸುವುದು ಖಚಿತ. ಈ ವರ್ಷದ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ, ಅವರು 171.43ರ ಸ್ಟ್ರೈಕ್ ರೇಟ್‌ನಲ್ಲಿ 10 ಇನಿಂಗ್ಸ್‌ಗಳಲ್ಲಿ 264 ರನ್ ಗಳಿಸಿದರು. T20 ಬ್ಲಾಸ್ಟ್ 2022 ರಲ್ಲಿ ಯಾರ್ಕ್‌ಶೈರ್ ಪರ ಬ್ರೂಕ್ 13 ಪಂದ್ಯಗಳಲ್ಲಿ 163.91 ಸ್ಟ್ರೈಕ್ ರೇಟ್‌ನಲ್ಲಿ 436 ರನ್ ಗಳಿಸಿದ್ದರು.

ಇದನ್ನೂ ಓದಿ | T20 World Cup | ಯುಎಇ ಪರ ಹ್ಯಾಟ್ರಿಕ್​ ವಿಕೆಟ್​ ಕಿತ್ತು ಮಿಂಚಿದ ಆರ್​ಸಿಬಿ ನೆಟ್ ಬೌಲರ್​ ಕಾರ್ತಿಕ್

Exit mobile version