ಕೊಚ್ಚಿ: ಡಿಸೆಂಬರ್ 23ರಂದು ಕೇರಳದ ಕೊಚ್ಚಿಯಲ್ಲಿ ನಡೆದ ಐಪಿಎಲ್ ಮಿನಿ ಹರಾಜು (IPL Auction) ಪ್ರಕ್ರಿಯೆಯಲ್ಲಿ ಸ್ಯಾಮ್ ಕರ್ರನ್ 18.5 ಕೋಟಿ ರೂಪಾಯಿ ಪಡೆಯುವ ಮೂಲಕ ನೂತನ ದಾಖಲೆ ಬರೆದಿದ್ದಾರೆ. ಕ್ಯಾಮೆರಾನ್ ಗ್ರೀನ್ ಕೂಡ 17.5 ಕೋಟಿ ರೂಪಾಯಿ ಗಳಿಸಿ ದಾಖಲೆ ಮಾಡಿದ್ದಾರೆ. ಬೆನ್ಸ್ಟೋಕ್ಸ್ (16.5 ರೂಪಾಯಿ) ಹಾಗೂ ನಿಕೋಲಸ್ ಪೂರನ್ (16 ಕೋಟಿ ರೂಪಾಯಿ) ಗರಿಷ್ಠ ಮೊತ್ತವನ್ನು ಗಳಿಸಿಕೊಂಡಿದ್ದಾರೆ. ಇವರೆಲ್ಲರ ಸಂಭ್ರಮದ ನಡುವೆ ಕೆಲವೊಂದು ಆಟಗಾರರು ಸಿಕ್ಕಾಪಟ್ಟೆ ನಷ್ಟ ಅನುಭವಿಸಿದ್ದಾರೆ. ಹೇಗೆಂದರೆ ಹಿಂದಿನ ಆವೃತ್ತಿಯಲ್ಲಿ ಅವರು ಕೋಟಿಗಟ್ಟಲೆ ಹಣ ಪಡೆದಿದ್ದು, ಈ ಬಾರಿ ಲಕ್ಷ ಸಂಪಾದಿಸಿದ್ದಾರೆ. ಈ ಮೂಲಕ ಒಂದೇ ವರ್ಷದಲ್ಲಿ ಅವರ ಮೌಲ್ಯ ಸಿಕ್ಕಾಪಟ್ಟೆ ಇಳಿಕೆಯಾಗಿದೆ.
ಈ ಸಾಲಿನಲ್ಲಿ ಮೊದಲ ಸ್ಥಾನ ನ್ಯೂಜಿಲೆಂಡ್ನ ಕೈಲ್ ಜೇಮಿಸನ್ಗೆ. ಕಳೆದ ಆವೃತ್ತಿಯಲ್ಲಿ ಅವರು ಆರ್ಸಿಬಿ ತಂಡದಲ್ಲಿದ್ದರು. ಈ ವೇಳೆ ಅವರು 15 ಕೋಟಿ ರೂಪಾಯಿ ಪಡೆದುಕೊಂಡಿದ್ದರು. ಹಾಲಿ ಆವೃತ್ತಿಯಲ್ಲಿ ಅವರಿಗೆ ಲಭಿಸಿದ್ದು ಕೇವಲ 1 ಕೋಟಿ ರೂಪಾಯಿ. ಸಿಎಸ್ಕೆ ಅಷ್ಟು ಮೊತ್ತ ಕೊಡಲು ಒಪ್ಪಿಕೊಂಡಿತು. ಈ ಮೂಲಕ ಅವರು 14 ಕೋಟಿ ರೂಪಾಯಿ ವೇತನ ಕಡಿತದ ಬೇನೆ ಅನುಭವಿಸಿದ್ದಾರೆ.
ಕಳೆದ ವರ್ಷದ ಜೇ ರಿಚರ್ಡ್ಸನ್ ಅವರಿಗೆ ಪಂಜಾಕ್ ಕಿಂಗ್ಸ್ ತಂಡ 14 ಕೋಟಿ ರೂಪಾಯಿ ಪಾವತಿ ಮಾಡಿತ್ತು. ಈ ಸಲ ಅವರು 1.5 ಕೋಟಿ ರೂಪಾಯಿಗೆ ಮುಂಬಯಿ ಇಂಡಿಯನ್ಸ್ ತಂಡ ಸೇರಿಕೊಂಡಿದ್ದಾರೆ. ಈ ಮೂಲಕ ಅವರು 12.5 ಕೋಟಿ ರೂಪಾಯಿ ವೇತನ ಕಡಿತದ ಬೇಸರಕ್ಕೆ ಒಳಗಾಗಿದ್ದಾರೆ.
ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರಿಗೆ ಕಳೆದ ಬಾರಿ ಎಸ್ಆರ್ಎಚ್ ತಂಡ 14 ಕೋಟಿ ರೂ. ಕೊಟ್ಟಿತ್ತು. ಈ ಸಲ ಅವರಿಗೆ ಗುಜರಾತ್ ಜಯಂಟ್ಸ್ ಬಳಗ 2 ಕೋಟಿ ರೂಪಾಯಿ ಆಫರ್ ಮಾಡಿದೆ. ಅಲ್ಲಿಗೆ ಅವರ ಸಂಭಾವನೆಯಲ್ಲಿ 12 ಕೋಟಿ ರೂಪಾಯಿ ನಷ್ಟ.
ರೊಮಾರಿಯೊ ಶಫರ್ಡ್ ಅವರು ಸನ್ರೈಸರ್ಸ್ ಹೈದರಾಬಾದ್ ತಂಡದಿಂದ 7.75 ಕೋಟಿ ರೂಪಾಯಿ ವೇತನ ಪಡೆದುಕೊಂಡಿದ್ದರು. ವಿಂಡೀಸ್ನ ಈ ಆಟಗಾರನಿಗೆ ಈಗ ಸಿಕ್ಕಿದ್ದು ಕೇವಲ 50 ಲಕ್ಷ. ಅವರಿಗೆ ಆಗಿರುವ ನಷ್ಟದ ಪ್ರಮಾಣ ಶೇಕಡಾ 1550.
ಕನ್ನಡಿಗ ಮಯಾಂಕ್ ಅಗರ್ವಾಲ್ಗೆ ಹಿಂದಿನ ಬಾರಿ ಪಂಜಾಬ್ ಕಿಂಗ್ಸ್ ತಂಡ 14 ಕೋಟಿ ಕೊಟ್ಟು ನಾಯಕನ ಜವಾಬ್ದಾರಿ ನೀಡಿತ್ತು. ಈ ಬಾರಿ ಅವರನ್ನು ಎಸ್ಅರ್ಎಚ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಅವರಿಗೆ ಕೊಟ್ಟಿದ್ದು 8.25 ಕೋಟಿ ರೂಪಾಯಿ. ಅಲ್ಲಿಗೆ ಅವರಿಗೆ 5.75 ಕೋಟಿ ರೂಪಾಯಿ ನಷ್ಟ.
ಪಂಜಾಬ್ ಕಿಂಗ್ಸ್ನಿಂದ ಕಳೆದ ಬಾರಿ 6 ಕೋಟಿ ಪಡೆದಿದ್ದ ಒಡೇನ್ ಸ್ಮಿತ್ ಅವರಿಗೆ ಈ ಸಲ ಸಿಕ್ಕಿದ್ದು 50 ಲಕ್ಷ. ಅವರಿಗೂ 5.5 ಕೋಟಿ ರೂಪಾಯಿ ಕಡಿಮೆ ಸಂಬಳ ಸಿಕ್ಕಂತಾಗಿದೆ.
ಸ್ಪಿನ್ನರ್ ಮುರುಗನ್ ಅಶ್ವಿನ್ ಅವರಿಗೆ ಕಳೆದ ಬಾರಿ ಮುಂಬಯಿ ಇಂಡಿಯನ್ಸ್ ತಂಡ 1.60 ಕೋಟಿ ರೂಪಾಯಿ ಕೊಟ್ಟಿತ್ತು. ಈ ಬಾರಿ ಅವರು ಪಡೆದ್ದು 20 ಲಕ್ಷ ರೂಪಾಯಿ ಮಾತ್ರ.
ಇದನ್ನೂ ಓದಿ | IPL Auction 2023 | ಮೊಮ್ಮಗನಿಗೆ ಸಿಕ್ಕಿದ ದುಡ್ಡಿನ ಕಂತೆ ನೋಡಿ ಖುಷಿಯಲ್ಲಿ ಕಣ್ಣೀರು ಹಾಕಿದ ಹ್ಯಾರಿ ಬ್ರೂಕ್ ಅಜ್ಜಿ!