ಮುಂಬಯಿ : ಟೀಮ್ ಇಂಡಿಯಾದಲ್ಲಿ ಯುವ ಆಟಗಾರರಿಗೆ ಹೆಚ್ಚು ಆದ್ಯತೆ ನೀಡಬೇಕು ಎಂಬ ಮಾತುಗಳು ಕೇಳಿ ಬರುತ್ತಿರುವ ನಡುವೆಯೇ, ಭಾರತ ತಂಡದ ಇಬ್ಬರು ಟೆಸ್ಟ್ ಸ್ಪೆಷಲಿಸ್ಟ್ಗಳಿಗೆ ಕೇಂದ್ರೀಯ ಗುತ್ತಿಗೆ (BCCI Contracts) ನಷ್ಟವಾಗುವ ಸಾಧ್ಯತೆಗಳಿವೆ. ಡಿಸೆಂಬರ್ 21ರಂದು ನಡೆಯಲಿರುವ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ಈ ನಿರ್ಧಾರ ಪ್ರಕಟವಾಗಲಿದೆ.
ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಹಾಗೂ ವೇಗದ ಬೌಲರ್ ಇಶಾಂತ್ ಶರ್ಮ ಕೇಂದ್ರೀಯ ಗುತ್ತಿಗೆಯ ಅವಕಾಶ ನಷ್ಟ ಮಾಡಿಕೊಳ್ಳಲಿರುವ ಪ್ರಮುಖ ಆಟಗಾರರು. ಇದರ ಜತೆಗೆ ಮಾಜಿ ವಿಕೆಟ್ಕೀಪರ್ ಬ್ಯಾಟರ್ ವೃದ್ಧಿಮಾನ್ ಸಾಹ ಅವರೂ ಪಟ್ಟಿಯಿಂದ ಹೊರಕ್ಕೆ ಬೀಳಲಿದ್ದಾರೆ. ಯಾಕೆಂದರೆ ಅವರನ್ನು ಮತ್ತೆ ತಂಡಕ್ಕೆ ತೆಗೆದುಕೊಳ್ಳುವುದಿಲ್ಲ ಎಂಬುದಾಗಿ ಈ ಹಿಂದೆಯೇ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಸಂದೇಶ ರವಾನೆ ಮಾಡಿತ್ತು. ಹೀಗಾಗಿ ಅವರನ್ನು ಮತ್ತೆ ಪಟ್ಟಿಗೆ ಸೇರಿಸುವುದಿಲ್ಲ. ಅದರೆ, ಇಶಾಂತ್ ಹಾಗೂ ಅಜಿಂಕ್ಯ ರಹಾನೆ ಇನ್ನೂ ವಿದಾಯ ಘೋಷಣೆ ಮಾಡಿಲ್ಲ. ಆದರೆ, ಅವರಿಗೆ ಅವಕಾಶವನ್ನೂ ನೀಡಲಾಗುತ್ತಿಲ್ಲ.
ಬಿಸಿಸಿಐನಲ್ಲಿ ಎ+, ಎ, ಬಿ ಮತ್ತು ಸಿ ಎಂಬ ಮೂರು ಗ್ರೇಡ್ಗಳ ಗುತ್ತಿಗೆಯಿದೆ. ಗ್ರೇಡ್ಗೆ ತಕ್ಕಂತೆ ಆಟಗಾರರು ಅನುಕ್ರಮವಾಗಿ ವಾರ್ಷಿಕವಾಗಿ 7 ಕೋಟಿ, 5 ಕೋಟಿ, 3 ಕೋಟಿ ಹಾಗೂ 1 ಕೋಟಿ ರೂಪಾಯಿ ಪಡೆಯುತ್ತಾರೆ. ಎ+ ಮತ್ತು ಎ ಗ್ರೇಡ್ನ ಆಟಗಾರರು ಮೂರು ಮಾದರಿಯ ಕ್ರಿಕೆಟ್ ತಂಡದಲ್ಲಿ ಕಾಯಂ ಸದಸ್ಯರಾಗಿರಬೇಕು. ಅಂತೆಯೇ ಬಿ ಗ್ರೇಡ್ನವರು ಎರಡು ಮಾದರಿ ಹಾಗೂ ಸಿ ಗ್ರೇಡ್ನ ಆಟಗಾರರು ಒಂದು ಮಾದರಿಯಲ್ಲಿ ಆಡುತ್ತಿರಬೇಕು.
ಯಾರಿಗೆಲ್ಲ ಪ್ರಮೋಶನ್?
ಪ್ರಸ್ತುತ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆಯುವವರ ಪಟ್ಟಿಯನ್ನು ನೋಡಿದಾಗ ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯಗೆ ಪ್ರಮೋಶನ್ ಸಿಗಬಹುದು. ಶುಬ್ಮನ್ ಏಕ ದಿನ ಹಾಗೂ ಟೆಸ್ಟ್ ಮಾದರಿಯಲ್ಲಿ ಆಡುತ್ತಿದ್ದರೆ, ಸೂರ್ಯಕುಮಾರ್ಗೆ ಏಕ ದಿನ ಹಾಗೂ ಟಿ20 ಮಾದರಿಯಲ್ಲಿ ಅವಕಾಶ ನೀಡಲಾಗುತ್ತಿದೆ. ಹಾರ್ದಿಕ್ ಅವರನ್ನು ಟಿ20 ತಂಡದ ನಾಯಕ ಎಂದೇ ಬಿಂಬಿಸಲಾಗುತ್ತಿದೆ. ಇವರೆಲ್ಲರೂ ಈ ಸಿ ಗುಂಪಿನಲ್ಲಿದ್ದಾರೆ. ಈ ಸ್ಥಾನದಿಂದ ಬಿ ಅಥವಾ ಎ ಗುಂಪಿಗೆ ಬಡ್ತಿ ಪಡೆಯಲಿದ್ದಾರೆ ಈ ಆಟಗಾರರು.
ಡಿಸೆಂಬರ್ 12ರಂದು ಸಭೆ ನಡೆಯಲಿದ್ದು, 12 ಕಾರ್ಯಸೂಚಿಯ ಬಗ್ಗೆ ಚರ್ಚೆ ನಡೆಯಲಿದೆ. ಸಭೆ ವಿಡಿಯೊ ಕಾನ್ಫರೆನ್ಸ್ ಮಾದರಿಯಲ್ಲಿ ನಡೆಯಲಿದೆ ಎಂಬುದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದಿ | Suryakumar Yadav | ರಣಜಿ ಪಂದ್ಯದಲ್ಲಿ ಆಡಲಿದ್ದಾರೆ ಸೂರ್ಯಕುಮಾರ್ ಯಾದವ್; ಯಾಕೆ ಗೊತ್ತೇ?