ಮುಂಬಯಿ: 19 ವರ್ಷದೊಳಗಿನ ಮಹಿಳೆಯರ ಟಿ20 ವಿಶ್ವ ಕಪ್ನಲ್ಲಿ (Under19 World Cup) ಭಾರತ ತಂಡದ ಪರ ಇನಿಂಗ್ಸ್ ಆರಂಭಿಸುತ್ತಿರುವ ಶ್ವೇತಾ ಸೆಹ್ರಾವತ್ (Shweta Sehrawat) ತಮ್ಮ ಬಿಗ್ ಹಿಟ್ಟಿಂಗ್ ಸಾಮರ್ಥ್ಯದ ಮೂಲಕ ಕ್ರಿಕೆಟ್ ಕ್ಷೇತ್ರದ ಗಮನ ಸೆಳೆದಿದ್ದಾರೆ. ಜನವರಿ 27ರಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅವರು ಅಜೇಯ 61 ರನ್ ಬಾರಿಸುವ ಮೂಲಕ ಮಿಂಚಿದ್ದಾರೆ. ಅವರು ಬಾರಿಸಿದ ರನ್ಗಳ ನೆರವಿನಿಂದ ಭಾರತ ತಂಡ 8 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿ ಫೈನಲ್ಗೆ ಪ್ರವೇಶ ಪಡೆದಿದೆ. ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದ ಶ್ವೇತಾ ಅವರು ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
ಮೊದಲ ಪಂದ್ಯದಲ್ಲಿ ಅಜೇಯ 92 ರನ್ ಬಾರಿಸಿದ್ದ ಶ್ವೇತಾ ಬಳಿಕ ಅಜೇಯ 74, ಅಜೇಯ 31 ರನ್, 21 ರನ್, 13 ರನ್ ಬಾರಿಸಿದ್ದರು. ಭಾರತ ತಂಡದ ಉಪನಾಯಕಿಯಾಗಿರುವ ಅವರು ಎದುರಾಳಿ ತಂಡದ ಬೌಲರ್ಗಳಿಗೆ ದುಸ್ವಪ್ನ ಎನಿಸಿಕೊಂಡಿದ್ದಾರೆ. ಆರಂಭಿಕರಾಗಿ ಬ್ಯಾಟ್ ಮಾಡುವ ಅವರು ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಭಾರತ ತಂಡಕ್ಕೆ ದೊಡ್ಡ ಮೊತ್ತ ಪೇರಿಸಲು ನೆರವಾಗುತ್ತಾರೆ. ಹೀಗಾಗಿ ಅವರನ್ನು ಭವಿಷ್ಯದ ಭಾರತ ತಂಡದ ಪ್ರತಿಭೆ ಎಂದೇ ಹೇಳಲಾಗುತ್ತಿದೆ.
ಯಾರು ಶ್ವೇತಾ ಸೆಹ್ರಾವತ್(Shweta Sehrawat)?
ಶ್ವೇತಾ ಸಂಜಯ್ ಸೆಹ್ರಾವತ್ ನವ ದೆಹಲಿಯ ಮಹಿಪಾಲ್ಪುರದವರು. 2004ರ ಫೆಬ್ರವರಿ 26ರಂದು ಅವರು ಜನಿಸಿದ್ದಾರೆ. ದಿಲ್ಲಿಯಲ್ಲಿಯೇ ಶಿಕ್ಷಣ ಮುಗಿಸಿರುವ ಅವರು 2022ರಲ್ಲಿ 12ನೇ ತರಗತಿ ಮುಗಿಸಿದ್ದಾರೆ. ಅವರು ಸೋನೆಟ್ ಕ್ರಿಕೆಟ್ ಕ್ಲಬ್ ಮೂಲಕ ಕ್ರಿಕೆಟ್ ಅಭ್ಯಾಸ ನಡೆಸಿದ್ದರು. 12ನೇ ವಯಸ್ಸಿನಲ್ಲಿ ಅವರು ದಿಲ್ಲಿ ಹಿರಿಯರ ತಂಡದ ಟ್ರಯಲ್ಸ್ನಲ್ಲಿ ಪಾಲ್ಗೊಂಡು 30 ಆಟಗಾರ್ತಿಯರಲ್ಲೊಬ್ಬರಾಗಿ ಆಯ್ಕೆಯಾದರು. ಅದಾದ ಬಳಿಕ ಅವರು ಡೆಲ್ಲಿ 16ರ ವಯೋಮಿತಿಯ ತಂಡಕ್ಕೆ ಆಯ್ಕೆಯಾದರು. ಅಲ್ಲಿನ ಪ್ರದರ್ಶನವನ್ನು ಆಧರಿಸಿ ಅವರಿಗೆ 19ರ ವಯೋಮಿತಿಯ ತಂಡದಲ್ಲಿ ಅವಕಾಶ ಸಿಕ್ಕಿತು.
ಶ್ವೇತಾ ಸೆಹ್ರಾವತ್ ಅವರ ತಂದೆ ಸಂಜಯ್ ಸೆಹ್ರಾವತ್ ರಿಯಲ್ ಎಸ್ಟೇಟ್ ಏಜೆಂಟ್ ವೃತ್ತಿ ಮಾಡುತ್ತಿದ್ದಾರೆ. ತಾಯಿ ಗೃಹಿಣಿ. ಹಿರಿಯ ಸಹೋದರಿ ಸ್ವಾತಿ ಸೆಹ್ರಾವತ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ತಮ್ಮ ಸ್ಯಾಮ್ ಸೆಹ್ರಾವತ್ ಆನಿಮೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ : U19 WOMEN’S T20 WORLD CUP : ನ್ಯೂಜಿಲ್ಯಾಂಡ್ ಮಣಿಸಿ ಫೈನಲ್ಗೇರಿದ ಭಾರತದ ವನಿತೆಯರು