ಮುಂಬಯಿ : ಭೀಕರ ಕಾರು ಅವಘಡದಲ್ಲಿ ಪವಾಡ ಸದೃಶವಾಗಿ ಬದುಕುಳಿದು ಆಸ್ಪತ್ರೆ ಸೇರಿಸುವ ಟೀಮ್ ಇಂಡಿಯಾದ ವಿಕೆಟ್ಕೀಪರ್ ಬ್ಯಾಟರ್ ರಿಷಭ್ ಪಂತ್ಗೆ (Rishabh Pant) ಪರ್ಯಾಯವಾಗಿ ಆಸ್ಟ್ರೇಲಿಯಾ ವಿರುದ್ಧದ ತವರಿನ ಸರಣಿಗೆ ಯಾರನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬ ಚರ್ಚೆ ನಡೆಯುತ್ತಿದೆ. ಆಂಧ್ರಪ್ರದೇಶ ಕೆ. ಎಸ್ ಭರತ್ ಉತ್ತಮ ಆಯ್ಕೆ ಎಂದು ಸಾಕಷ್ಟು ಮಂದಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಏತನ್ಮಧ್ಯೆ, ಬಿಸಿಸಿಐನ ಆಯ್ಕೆ ಸಮಿತಿಯ ಮಾಜಿ ಸದಸ್ಯ ಸಾಬಾ ಕರಿಮ್ ಬೇರೊಂದು ಆಯ್ಕೆಯನ್ನು ಕೊಟ್ಟಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ತವರಿನ ಸರಣಿಗೆ ಕೆ. ಎಸ್ ಭರತ್ ಉತ್ತಮ ಆಯ್ಕೆ ಹೌದು. ಆದರೆ, ಇಶಾನ್ ಕಿಶನ್ ಅವರು ಅದಕ್ಕಿಂತಲೂ ಉತ್ತಮ ಆಯ್ಕೆ. ರಿಷಭ್ ಪಂತ್ ಅವರು ಟೆಸ್ಟ್ ತಂಡದಲ್ಲಿ ನಿರ್ವವಹಿಸುತ್ತಿದ್ದ ಜವಾಬ್ದಾರಿಯನ್ನು ನಿರ್ವಹಿಸಲು ಎಡಗೈ ಬ್ಯಾಟರ್ ಇಶಾನ್ ಕಿಶನ್ ಅವರಿಗೆ ಸಾಧ್ಯವಿದೆ. ಹೀಗಾಗಿ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಬೇಕು ಎಂಬುದಾಗಿ ಅವರು ಹೇಳಿದ್ದಾರೆ.
ಇಶಾನ್ ಕಿಶನ್ ಅವರು ಟೀಮ್ ಇಂಡಿಯಾದ ಪರ ಟೆಸ್ಟ್ ಪಂದ್ಯಗಳನ್ನು ಆಡಿಲ್ಲ. ಆದರೆ ದೇಶೀಯ ಕ್ರಿಕೆಟ್ನಲ್ಲಿ ಪಾಲ್ಗೊಂಡಿದ್ದಾರೆ. ಹೀಗಾಗಿ ಅವರು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲೂ ಚೆನ್ನಾಗಿ ಆಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಜನವರಿ 3ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಸೀಮಿತ ಓವರ್ಗಳ ಸರಣಿಯಲ್ಲಿ ರಿಷಭ್ ಪಂತ್ ಅವಕಾಶ ಪಡೆದುಕೊಂಡಿರಲಿಲ್ಲ. ಟಿ20 ತಂಡದಲ್ಲಿ ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ಅವಕಾಶ ಪಡೆದುಕೊಂಡಿದ್ದಾರೆ. ಏಕ ದಿನ ತಂಡದಲ್ಲಿ ಕಿಶನ್ಗಷ್ಟೇ ಅವಕಾಶ ನೀಡಲಾಗಿತ್ತು.
ಇದನ್ನೂ ಓದಿ | Rishabh Pant | ಐಪಿಎಲ್ಗೆ ರಿಷಭ್ ಪಂತ್ ಅಲಭ್ಯ; ಡೆಲ್ಲಿ ತಂಡಕ್ಕೆ ಡೇವಿಡ್ ವಾರ್ನರ್ ನಾಯಕ?