ರಾಜ್ಕೋಟ್ : ಭಾರತ ಮತ್ತು ಪ್ರವಾಸಿ ಶ್ರೀಲಂಕಾ (INDvsSL) ನಡುವಿನ ಮೂರನೇ ಹಾಗೂ ಅಂತಿಮ ಟಿ20 ಪಂದ್ಯ ಗುಜರಾತ್ನ ರಾಜ್ಕೋಟ್ನಲ್ಲಿ ಶನಿವಾರ (ಜನವರಿ 6) ನಡೆಯಲಿದೆ. ಮುಂಬಯಿ ಹಾಗೂ ಪುಣೆಯಲ್ಲಿ ನಡೆದ ಪಂದ್ಯಗಳಲ್ಲಿ ಆತಿಥೇಯ ಹಾಗೂ ಪ್ರವಾಸಿ ತಂಡ ವಿಜಯವನ್ನು ಹಂಚಿಕೊಂಡಿರುವ ಕಾರಣ ಮೂರನೇ ಪಂದ್ಯಕ್ಕೆ ಹೆಚ್ಚಿನ ಮಹತ್ವ ಸಿಕ್ಕಿದೆ. ಈ ಹಣಾಹಣಿಯನ್ನು ಗೆದ್ದವರಿಗೆ ಸರಣಿ ಜಯದ ಗೌರವ ಲಭಿಸಲಿದೆ.
ಭಾರತ ತಂಡದ 2019ರಲ್ಲಿ ಕೊನೇ ಬಾರಿಗೆ ತವರು ನೆಲದಲ್ಲಿ ಟಿ20 ಸರಣಿಯನ್ನು ಸೋತಿತ್ತು. ಅಲ್ಲಿಂದ ಇಲ್ಲಿಯವರೆಗೆ 11 ಸರಣಿಗಳಲ್ಲಿ ಭಾರತದ್ದೇ ಪಾರುಪತ್ಯ. ಅದನ್ನು ಬದಲಿಸುವ ಅವಕಾಶ ಲಂಕಾ ತಂಡಕ್ಕೆ ಇದ್ದರೂ, ಪಾಂಡ್ಯ ನೇತೃತ್ವದ ಭಾರತ ತಂಡ ಅವಕಾಶ ನೀಡಬಾರದು ಎಂಬುದು ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆ.
ಭಾರತ ತಂಡಕ್ಕೆ ಈ ಪಂದ್ಯದ ವಿಜಯ ಒಲಿಯಬೇಕಾದರೆ ತಿದ್ದಿಕೊಳ್ಳಬೇಕಾದ ತಪ್ಪುಗಳು ಸಾಕಷ್ಟಿವೆ. ಮೊದಲಿಗೆ ಬೌಲಿಂಗ್ನಲ್ಲಿ ಕೆಚಚು ಪ್ರದರ್ಶಿಸಬೇಕು. ಲಂಕಾದ ಬ್ಯಾಟರ್ಗಳು ಅನುಭವಿಗಳು ಅಲ್ಲದಿದ್ದರೂ, ಟಿ20 ಮಾದರಿಯ ಗೆಲುವಿನ ಸೂತ್ರ ಅವರಿಗೆ ಚೆನ್ನಾಗಿ ಗೊತ್ತಿದೆ. ಕೊಟ್ಟ ಕೊನೇ ಹಂತದ ತನಕವೂ ಬ್ಯಾಟ್ ಬೀಸುವುದೇ ಅವರ ಉದ್ದೇಶ. ಆ ಯತ್ನಕ್ಕೆ ಭಾರತೀಯ ಬೌಲರ್ಗಳು ತಡೆಯೊಡ್ಡಬೇಕು. ಅದೇ ರೀತಿ ನೋಬಾಲ್, ವೈಡ್ ಸೇರಿದಂತೆ ಅನಗತ್ಯ ರನ್ಗಳನ್ನು ಬಿಟ್ಟುಕೊಡಬಾರದು. ಜತೆಗೆ ಫೀಲ್ಡಿಂಗ್ನಲ್ಲಿಯೂ ಸುಧಾರಣೆ ಮಾಡಿಕೊಳ್ಳಬೇಕು.
ಭಾರತ ತಂಡದ ಬ್ಯಾಟಿಂಗ್ ಬಲ ಚೆನ್ನಾಗಿದ್ದರೂ ಅದು ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ. ಓವರ್ ಒಂದರಲ್ಲಿ ಸರಾಸರಿ 10 ರನ್ಗಳನ್ನು ಆರಂಭದಿಂದಲೇ ಕ್ರೋಡೀಕರಿಸುವ ಯೋಜನೆಗಳು ವಿಫಲವಾಗುತ್ತಿವೆ. ಇದರಿಂದ ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ಮೇಲೆ ಒತ್ತಡ ಬೀಳುತ್ತಿದೆ. ಶುಬ್ಮನ್ ಗಿಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರಾಹುಲ್ ತ್ರಿಪಾಠಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಾಗುತ್ತದೆ.
ಮೊದಲ ಪಂದ್ಯದಲ್ಲಿ ದೀಪಕ್ ಹೂಡ ಮತ್ತು ಅಕ್ಷರ್ ಪಟೇಲ್ ತಂಡದ ಮರ್ಯಾದೆ ಕಾಪಾಡಿದ್ದರೆ, ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಮತ್ತು ಅಕ್ಷರ್ ಪಟೇಲ್ ಹೋರಾಟ ನಡೆಸಿದರೂ ಭಾರತಕ್ಕೆ ಪ್ರಯೋಜನ ಸಿಗಲಿಲ್ಲ. ಅದರಲ್ಲೂ ಲಂಕಾದ ವೇಗದ ಬೌಲರ್ಗಳನ್ನು ಎದುರಿಸುವಲ್ಲಿ ಭಾರತ ತಂಡ ವಿಫಲಗೊಂಡಿದೆ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಂಡರೆ ಜಯ ಭಾರತಕ್ಕೆ ನಿಶ್ಚಿತ.
ಅಪಾಯಕಾರಿ ಲಂಕಾ ಬ್ಯಾಟರ್ಗಳು
ಪ್ರವಾಸಿ ತಂಡದ ಬ್ಯಾಟರ್ಗಳು ಎರಡನೇ ಪಂದ್ಯದಲ್ಲಿ ಹೆಚ್ಚು ಅಪಾಯಕಾರಿಯಾಗಿದ್ದರು. ಟಿ20 ಮಾದರಿಗೆ ಬೇಕಾದ ರೀತಿಯಲ್ಲೇ ಆಡಿದ್ದರು. ಭಾರತ ತಂಡದ ದೌರ್ಬಲ್ಯಗಳನ್ನು ಸರಿಯಾಗಿ ಬಳಸಿಕೊಂಡಿದ್ದರು. ಹೀಗಾಗಿ ದೊಡ್ಡ ಮೊತ್ತದ ಸವಾಲು ನೀಡಿ ಗೆಲುವು ಸಾಧಿಸಿತ್ತು. ಅದರಲ್ಲೂ ನಾಯಕ ದಸುನ್ ಶನಕ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಬೌಲಿಂಗ್, ಬ್ಯಾಟಿಂಗ್ನಲ್ಲಿ ಲಂಕಾ ತಂಡ ಪ್ರಬಲವಾಗಿದ್ದು ಭಾರತಕ್ಕೆ ಸಡ್ಡು ಹೊಡೆಯುವ ಎಲ್ಲ ಸಾಮರ್ಥ್ಯಗಳನ್ನು ಹೊಂದಿದೆ.
ಎರಡನೇ ಪಂದ್ಯದ ಬಳಿಕ ಕೋಚ್ ರಾಹುಲ್ ದ್ರಾವಿಡ್, ಪದೇ ಪದೆ ತಂಡದಲ್ಲಿ ಬದಲಾವಣೆ ಮಾಡುವುದಿಲ್ಲ ಎಂದು ಹೇಳಿದ್ದರು. ಹೀಗಾಗಿ ಅದೇ ತಂಡವನ್ನು ಮುಂದುವರಿಸುವ ಸಾಧ್ಯತೆಗಳಿವೆ. ಆದರೆ, ಬೌಲರ್ ಅರ್ಶ್ದೀಪ್ ಸಿಂಗ್ಗೆ ನೋ ಬಾಲ್ ಹಾಕದಂತೆ ಎಚ್ಚರಿಕೆ ನೀಡುವುದು ಖಚಿತ.
ಸಂಭಾವ್ಯ ತಂಡಗಳು
ಭಾರತ: ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್ (ವಿಕೆಟ್ಕೀಪರ್), ಶುಬ್ಮನ್ ಗಿಲ್, ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಅಕ್ಷರ್ ಪಟೇಲ್, ಶಿವಂ ಮಾವಿ, ಉಮ್ರಾನ್ ಮಲಿಕ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಹಲ್.
ಶ್ರೀಲಂಕಾ:
ದಸುನ್ ಶನಕ (ನಾಯಕ), ಪಾಥು ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್) ಧನಂಜಯ ಡಿ ಸಿಲ್ವ, ಚರಿತ್ ಅಸಲಂಕಾ, ಭಾನುಕಾ ರಾಜಪಕ್ಷೆ, ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ್ ತೀಕ್ಷಣ, ಕಸುನ್ ರಜಿತ, ದಿಲ್ಶನ್ ಮದುಶಂಕ.
ಇದನ್ನೂ ಓದಿ | INDvsSL | ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡಕ್ಕೆ 16 ರನ್ ಸೋಲು, 1-1 ಅಂತರದಲ್ಲಿ ಸರಣಿ ಸಮಬಲ