Site icon Vistara News

Team India | ವಿದೇಶಿ ಲೀಗ್‌ಗಳಿಗೆ ಆಟಗಾರರನ್ನು ಕಳುಹಿಸಿದರೆ ದೇಶೀಯ ಕ್ರಿಕೆಟ್‌ ಆಡುವವರು ಯಾರು?

ಚೆನ್ನೈ : ಭಾರತದ ಕ್ರಿಕೆಟಿಗರಿಗೆ ವಿದೇಶಿ ಲೀಗ್‌ಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕೇ ಅಥವಾ ಬೇಡವೇ ಎಂಬುದು ಸದ್ಯ ಜೋರಾಗಿ ನಡೆಯುತ್ತಿರುವ ಚರ್ಚೆ. ಭಾರತ ತಂಡ ಟಿ೨೦ ವಿಶ್ವ ಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಸೋಲುಂಡ ಬಳಿಕ ಈ ಚರ್ಚೆಗೆ ಇಂಬು ದೊರಕಿದೆ. ಇತರ ತಂಡಗಳ ಆಟಗಾರರು ಐಪಿಎಲ್‌ ಸೇರಿದಂತೆ ನಾನಾ ಕ್ರಿಕೆಟ್‌ ಲೀಗ್‌ಗಳಲ್ಲಿ ಪಾಲ್ಗೊಂಡು ಆಡುವ ಮೂಲಕ ಭಿನ್ನ ಪರಿಸ್ಥಿತಿಯಲ್ಲಿ ಬ್ಯಾಟ್‌ ಬೀಸುವ ಕಲೆಯನ್ನು ಸಂಪಾದಿಸುತ್ತಾರೆ. ಇದರಿಂದ ಅವರಿಗೆ ಅನುಕೂಲಗಳಾಗುತ್ತಿವೆ. ದೊಡ್ಡ ದೊಡ್ಡ ಟೂರ್ನಿಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಭಾರತ ತಂಡದ ಆಟಗಾರರಿಗೂ ವಿದೇಶಿ ಲೀಗ್‌ಗಳಲ್ಲಿ ಆಡಲು ಅವಕಾಶ ಕಲ್ಪಿಸುವ ಮೂಲಕ ಐಸಿಸಿ ಟೂರ್ನಿಗಳಲ್ಲಿ ಪದಕ ಗೆಲ್ಲಲು ನೆರವಾಗಬೇಕು ಎಂಬುದಾಗಿ ಹೇಳಲಾಗುತ್ತಿದೆ.

ಭಾರತ ತಂಡ ಇಂಗ್ಲೆಂಡ್‌ ವಿರುದ್ಧ ಸೋತ ತಕ್ಷಣ ನಡೆದ ಪತ್ರಿಕಾಗೋಷ್ಠಿಯಲ್ಲಿ ಇದೇ ಪ್ರಶ್ನೆಯನ್ನು ಕೋಚ್‌ ರಾಹುಲ್‌ ದ್ರಾವಿಡ್‌ ಅವರಿಗೆ ಕೇಳಲಾಗಿತ್ತು. ಅದಕ್ಕವರು, ಅವಕಾಶ ಕೊಟ್ಟರೆ ದೇಶಿಯ ಕ್ರಿಕೆಟ್ ಸೊರಗಿ ಹೋಗುತ್ತದೆ ಎಂದು ಹೇಳಿದ್ದರು. ದ್ರಾವಿಡ್‌ ಅವರ ಮಾತಿಗೆ ಸಿಕ್ಕಾಪಟ್ಟೆ ಟೀಕೆಗಳು ಎದುರಾಗಿದ್ದು ಇದೇ ರೀತಿ ಮುಂದುವರಿದರೆ ಭಾರತ ತಂಡ ವಿಶ್ವ ಕಪ್‌ ಗೆಲ್ಲುವುದಿಲ್ಲ ಎಂದೆಲ್ಲ ಹೇಳಲಾಗಿತ್ತು.

ಇದೀಗ ಕೋಚ್‌ ದ್ರಾವಿಡ್‌ ಅವರ ಅಭಿಪ್ರಾಯಕ್ಕೆ ಹಿರಿಯ ಸ್ಪಿನ್ನರ್ ಆರ್‌. ಅಶ್ವಿನ್‌ ಅವರು ಬೆಂಬಲವಾಗಿ ನಿಂತಿದ್ದಾರೆ. ದ್ರಾವಿಡ್‌ ಅವರು ಹೇಳಿರುವ ಮಾತಿನಲ್ಲಿ ಯಾವುದೇ ತಪ್ಪು ಇಲ್ಲ ಎಂಬುದಾಗಿ ಅವರು ಹೇಳಿದ್ದಾರೆ.

ನಮ್ಮ ಆಟ ಮುಗಿದ ತಕ್ಷಣ ರಾಹುಲ್ ಅವರಿಗೆ ಪತ್ರಿಕಾಗೋಷ್ಠಿಯಲ್ಲಿ ಇಂಥದ್ದೊಂದು ಪ್ರಶ್ನೆ ಕೇಳಲಾಗಿದೆ. ಆಟದಲ್ಲಿ ಸೋತಿದ್ದಕ್ಕೆ ಪ್ರತಿಯಾಗಿ ಈ ರೀತಿಯ ಪ್ರಶ್ನೆಗಳನ್ನು ಕೇಳಿದ್ದು ಸರಿಯಲ್ಲ. ಇದು ಕ್ರಿಕೆಟ್ ತಂಡದ ಕೋಚ್‌ಗೆ ಬಹಳ ಅನ್ಯಾಯದ ಪ್ರಶ್ನೆ. ಹಾಗಾದರೆ ಅವರು ಆ ಪ್ರಶ್ನೆಗೆ ಏನು ಉತ್ತರಿಸಬೇಕೆಂದು ನೀವು ನಿರೀಕ್ಷಿಸುತ್ತೀರಿ? ವಾಸ್ತವವಾಗಿ, ಅವರು ಆ ಪ್ರಶ್ನೆಗೆ ಉತ್ತಮ ಉತ್ತರವನ್ನು ನೀಡಿದ್ದಾರೆ ಎಂಬುದಾಗಿ ಅಶ್ವಿನ್ ಹೇಳಿದ್ದಾರೆ.

ವಿದೇಶಿ ಲೀಗ್‌ಗಳಲ್ಲಿ ಭಾರತೀಯ ಆಟಗಾರರು ಹೋಗಿ ಆಡಬೇಕು ಎಂದು ನೀವು ಬಯಸಿದರೆ, ನಮ್ಮ ಪ್ರಥಮ ದರ್ಜೆ ಕ್ರಿಕೆಟ್‌ನ ವ್ಯವಸ್ಥೆಗೆ ಏನಾಗುತ್ತದೆ?” ಭಾರತದ ಪ್ರಥಮ ದರ್ಜೆ ಟೂರ್ನಿಗಳು ಆಗಸ್ಟ್ ಅಂತ್ಯದಿಂದ ಅಥವಾ ಸೆಪ್ಟೆಂಬರ್ ಅಂತ್ಯದ ವೇಳೆಗೆ ನಡೆಯುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ರಣಜಿ ಟ್ರೋಫಿ ಮಾರ್ಚ್‌ನಲ್ಲಿ ಮುಗಿಯುತ್ತದೆ ಹಾಗೂ ಆ ಬಳಿಕ ಐಪಿಎಲ್‌ ನಡೆಯುತ್ತದೆ. ಹೀಗಿರುವಾಗ ಭಾರತದ ಆಟಗಾರರ ಅಲ್ಲಿಗೆ ಹೋಗಿ ಆಡುವುದಕ್ಕೆ ಹೇಗೆ ಸಾಧ್ಯ,” ಎಂದು ಅಶ್ವಿನ್‌ ಪ್ರಶ್ನಿಸಿದ್ದಾರೆ.

ಪ್ರಸ್ತುತ ಬಿಸಿಸಿಐ ತನ್ನ ಯಾವುದೇ ಕೇಂದ್ರೀಯ ಗುತ್ತಿಗೆ ಅಥವಾ ದೇಶೀಯ ಆಟಗಾರರಿಗೆ ಯಾವುದೇ ವಿದೇಶಿ ಲೀಗ್‌ಗಳೊಂದಿಗೆ ಸಹಿ ಹಾಕಲು ಅವಕಾಶ ನೀಡುವುದಿಲ್ಲ. ಭಾರತೀಯ ಕ್ರಿಕೆಟ್ ಮತ್ತು ಐಪಿಎಲ್‌ನಿಂದ ನಿವೃತ್ತರಾದ ಆಟಗಾರರಿಗೆ ಮಾತ್ರ ಸಾಗರೋತ್ತರ ಲೀಗ್‌ಗಳಿಗೆ ಹೋಗಿ ಆಡಲು ಅವಕಾಶವಿದೆ.

ಇದನ್ನೂ ಓದಿ | Team India | ಮಾಜಿ ಕೋಚ್ ರವಿ ಶಾಸ್ತ್ರಿಗೆ ಪ್ರತ್ಯುತ್ತರ ಕೊಟ್ಟ ಸ್ಪಿನ್ನರ್‌ ಆರ್ ಅಶ್ವಿನ್‌

Exit mobile version