Site icon Vistara News

IND vs ENG: ಕೊಹ್ಲಿ ಸ್ಥಾನಕ್ಕೆ ಬದಲಿ ಆಟಗಾರ ಯಾರು? ರೇಸ್​ನಲ್ಲಿ ಮೂವರು

Virat Kohli

ಮುಂಬಯಿ: ಇಂಗ್ಲೆಂಡ್‌ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ವಿರಾಟ್ ಕೊಹ್ಲಿ(Virat Kohli) ಹಿಂದೆ ಸರಿದ ಬೆನ್ನಲೇ ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಆಯ್ಕೆಯಾಗಲು ಮೂವರು ಆಟಗಾರರ ಹೆಸರು ಮುಂಚೂಣಿಯಲ್ಲಿದೆ. ಅವರೆಂದರೆ ಸರ್ಫರಾಜ್​ ಖಾನ್(Sarfaraz Khan)​, ಚೇತೇಶ್ವರ್​ ಪೂಜಾರ(Cheteshwar Pujara) ಮತ್ತು ರಜತ್ ಪಾಟಿದಾರ್(Rajat Patidar).​ ಕೊಹ್ಲಿ ವೈಯಕ್ತಿಕ ಕಾರಣದಿಂದ 2 ಟೆಸ್ಟ್​ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.

ಸದ್ಯ ಬಿಸಿಸಿಐ ವಿರಾಟ್​ ಕೊಹ್ಲಿಯ ಸ್ಥಾನಕ್ಕೆ ಯಾವುದೇ ಬದಲಿ ಆಟಗಾರನನ್ನು ಆಯ್ಕೆ ಮಾಡಿಲ್ಲ. ಅದಲ್ಲದೆ ಬಿಸಿಸಿಐ ಆರಂಭಿಕ 2 ಟೆಸ್ಟ್​ ಪಂದ್ಯಗಳಿಗೆ ಮಾತ್ರ ತಂಡವನ್ನು ಪ್ರಕಟಿಸಿತ್ತು. ಮೂರನೇ ಪಂದ್ಯದ ವೇಳೆಗೆ ಪ್ರಸಕ್ತ ಸಾಗುತ್ತಿರುವ ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ತೋರುವ ಆಟಗಾರರಿಗೆ ಅವಕಾಶ ನೀಡುವ ಯೋಜನೆಯಲ್ಲಿತ್ತು. ಆದರೆ ಅನುಭವಿ ಆಟಗಾರ ಕೊಹ್ಲಿ ಹೊರಗುಳಿದ ಕಾರಣ ಅವರ ಸ್ಥಾನ ತುಂಬಬಲ್ಲ ಆಟಗಾರನ ಅಗತ್ಯವಿದೆ. ಸದ್ಯ ಮೂವರು ರೇಸ್​ನಲ್ಲಿದ್ದಾರೆ.

ಸರ್ಫರಾಜ್ ಖಾನ್: ಮುಂಬೈ ಪರ ದೇಶೀಯ ಕ್ರಿಕೆಟ್​ ಟೂರ್ನಿ ಆಡುವ ಸರ್ಫರಾಜ್​ ಖಾನ್​ ಹೆಸರು ಕೂಡ ಕೇಳಿಬಂದಿದೆ. ಅವರು ಇಂಗ್ಲೆಂಡ್ ಲಯನ್ಸ್ ವಿರುದ್ಧದ ಎರಡು ಅಭ್ಯಾಸ ಪಂದ್ಯಗಳಲ್ಲಿ ಕ್ರಮವಾಗಿ 96 ಮತ್ತು 55 ರನ್ ಬಾರಿಸಿದ್ದರು. ಹಿಂದಿನ ಮೂರು ರಣಜಿ ಟ್ರೋಫಿ ಆವೃತ್ತಿಗಳಲ್ಲಿ ಸ್ಥಿರ ಪ್ರದರ್ಶನ ತೋರಿದ್ದರು.

ರಜತ್ ಪಾಟಿದಾರ್: ಇಂಗ್ಲೆಂಡ್ ಲಯನ್ಸ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಸತತ ಎರಡು ಶತಕ ಬಾರಿಸಿ ಗಮನಸೆಳೆದ ರಜತ್ ಪಾಟಿದಾರ್​ ಕೂಡ ರೇಸ್​ನಲ್ಲಿದ್ದಾರೆ.

ಇದನ್ನೂ ಓದಿ IND vs ENG: ಟೆಸ್ಟ್ ಸರಣಿಗಾಗಿ ಬಾಣಸಿಗನೊಂದಿಗೆ ಭಾರತಕ್ಕೆ ಬಂದಿಳಿದ ಇಂಗ್ಲೆಂಡ್​ ತಂಡ

ಚೇತೇಶ್ವರ ಪೂಜಾರೆ ಹೆಚ್ಚಿನ ಅವಕಾಶ


ಫಾರ್ಮ್​ ಕಳೆದುಕೊಂಡು ಟೀಮ್​ ಇಂಡಿಯಾದಿಂದ ದೂರವಾಗಿರುವ ಅನುಭವಿ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್​ ಪೂಜಾರ ಸದ್ಯ ರಣಜಿ ಟೂರ್ನಿಯಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರುತ್ತಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 20 ಸಾವಿರ ರನ್​ ಪೂರೈಸಿದ ದಾಖಲೆಯನ್ನು ಮಾಡಿರುವ ಅವರು ತವರಿನ ಟೆಸ್ಟ್​ ಸರಣಿಯಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ.

35 ವರ್ಷದ ಪೂಜಾರ ಕೊನೆಯ ಬಾರಿ ಭಾರತ ಪರ ಆಡಿದ್ದು ಜುಲೈ 2023 ರಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ. ಕಳಪೆ ಬ್ಯಾಟಿಂಗ್​ ಫಾರ್ಮ್​ನಿಂದಾಗಿ ಅವರು ತಂಡದಿಂದ ಹೊರಬಿದ್ದಿದ್ದರು. ಪೂಜಾರ ಎರಡೂ ಇನಿಂಗ್ಸ್​ನಲ್ಲಿ ಕಳಪೆ ಬ್ಯಾಟಿಂಗ್​ ಪ್ರದರ್ಶನ ತೋರಿದ್ದರು. ಅದರಲ್ಲೂ ಮೊದಲ ಇನಿಂಗ್ಸ್​ನಲ್ಲಿ ವಿಕೆಟ್​ಗೆ ಬಂದ ಚೆಂಡನ್ನು ಬ್ಯಾಟ್​ ಎತ್ತಿ ಹಿಡಿದು ಕ್ಲೀನ್​ ಬೌಲ್ಡ್​ ಆಗಿದ್ದರು. ಪೂಜಾರ ಈ ರೀತಿ ವಿಕೆಟ್​ ಒಪ್ಪಿಸಿದ್ದನ್ನು ಕಂಡು ಅನೇಕ ಮಾಜಿ ಕ್ರಿಕೆಟಿಗರು ಟೀಕೆ ವ್ಯಕ್ತಪಡಿಸಿದ್ದರು. ಸದ್ಯ ರಣಜಿಯಲ್ಲಿ ಆಡಿ ಮತ್ತೆ ಗಮನ ಸೆಳೆಯುತ್ತಿರುವ ಪೂಜಾರ ಕೊಹ್ಲಿ ಸ್ಥಾನಕ್ಕೆ ಆಯ್ಕೆಯಾಗುವ ಸಾಧ್ಯತೆ ಅಧಿಕವಾಗಿದೆ.

Exit mobile version