ಇಸ್ಲಾಮಾಬಾದ್ : ಭಾರತ ಕ್ರಿಕೆಟ್ ತಂಡ ಮುಂದಿನ ವರ್ಷ ನಡೆಯಲಿರುವ ಏಷ್ಯಾ ಕಪ್‌ನಲ್ಲಿ ಆಡಲು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂಬ ಬಿಸಿಸಿಐ ಹೇಳಿಕೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಮುಜುಗರ ಉಂಟು ಮಾಡಿದೆ. ಏನಾದರೂ ಮಾಡಿ ಭಾರತಕ್ಕೆ ಪ್ರತ್ಯುತ್ತರ ಕೊಡಬೇಕು ಎಂಬಂತೆ ವರ್ತಿಸುತ್ತಿದೆ. ಅದಕ್ಕಾಗಿ ನಾವು ಭಾರತದಲ್ಲಿ ನಡೆಯುವ ಏಕ ದಿನ ವಿಶ್ವ ಕಪ್‌ನಲ್ಲಿ (ODI World Cup) ಪಾಲ್ಗೊಳ್ಳಲು ಬರುವುದಿಲ್ಲ ಎಂಬುದಾಗಿ ಹೇಳುತ್ತಾ ಬಂದಿದೆ. ಅದಕ್ಕೆ ಭಾರತ ಕ್ಯಾರೇ ಎನ್ನುತ್ತಿಲ್ಲ ಎಂಬುದು ಗೊತ್ತಾದ ತಕ್ಷಣ ಹೊಸ ಮಾದರಿಯ ಬೆದರಿಕೆಯನ್ನೊಡ್ಡುತ್ತಿದ್ದು, ನಾವು ಬರದಿದ್ದರೆ ನಿಮ್ಮ ವಿಶ್ವ ಕಪ್ ಅನ್ನು ಯಾರು ನೋಡುತ್ತಾರೆ ಎಂದು ಪಶ್ನಿಸಲು ಆರಂಭಿಸಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರಾಗಿರುವ ರಮೀಜ್ ರಾಜಾ ಅವರು ಉರ್ದು ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ನಾವು ಹೋಗದಿದ್ದರೆ ಭಾರತದಲ್ಲಿ ನಡೆಯುವ ಏಕ ದಿನ ವಿಶ್ವ ಕಪ್ ಜನಪ್ರಿಯತೆ ಕಳೆದುಕೊಳ್ಳುತ್ತದೆ ಎಂಬುದಾಗಿ ಹೇಳಿದ್ದಾರೆ. “ಒಂದು ವೇಳೆ ಪಾಕಿಸ್ತಾನ ಕ್ರಿಕೆಟ್ ತಂಡ ಭಾರತಕ್ಕೆ ಹೋಗದಿದ್ದರೆ ಆ ವಿಶ್ವ ಕಪ್ ಮೌಲ್ಯ ಕಳದುಕೊಳ್ಳುತ್ತದೆ ಹಾಗೂ ಯಾರೂ ನೋಡುವುದಿಲ್ಲ. ನಮ್ಮ ನಿರ್ಧಾರ ಸ್ಪಷ್ಟವಾಗಿದೆ. ಭಾರತ ತಂಡ ಪಾಕಿಸ್ತಾನಕ್ಕೆ ಬಂದರೆ ಮಾತ್ರ ನಾವು ಅಲ್ಲಿಗೆ ಹೋಗುತ್ತೇವೆ. ನಮ್ಮ ತಂಡವೂ ಚೆನ್ನಾಗಿ ಕ್ರಿಕೆಟ್ ಆಡುತ್ತದೆ. ಈ ವಿಚಾರದಲ್ಲಿ ನಮ್ಮದು ಆಕ್ರಮಣಕಾರಿ ಧೋರಣೆಯೇ ಸರಿ. ಪಾಕಿಸ್ತಾನ ಕ್ರಿಕೆಟ್‌ನ ಆರ್ಥಿಕತೆಯನ್ನೂ ವೃದ್ಧಿಸುವ ಗುರಿಯೂ ನಮಗಿದೆ. ಟಿ೨೦ ಏಷ್ಯಾ ಕಪ್‌ನಲ್ಲಿ ಭಾರತ ತಂಡವನ್ನು ನಮ್ಮ ತಂಡ ಸೋಲಿಸಿದೆ. ಒಂದು ವರ್ಷದೊಳಗೆ ಬಿಲಿಯನ್ ಡಾಲರ್ ಆರ್ಥಿಕತೆ ಹೊಂದಿರುವ ತಂಡವನ್ನು ಎರಡು ಬಾರಿ ಮಣಿಸಿದೆ,” ಎಂಬುದಾಗಿ ರಾಜಾ ಹೇಳಿದ್ದಾರೆ.
ರೋಹಿತ್ ಶರ್ಮ ನೇತೃತ್ವದ ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಬಂದಿಲ್ಲ ಎಂದಾರೆ ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ತಂಡ ಅಲ್ಲಿಗೆ ಕಾಲಿಡುವುದಿಲ್ಲ ಎಂಬುದನ್ನು ಅವರು ಪುನರುಚ್ಚರಿಸಿದ್ದಾರೆ.
ಕಳೆದ ತಿಂಗಳು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು, ಏಷ್ಯಾ ಕಪ್‌ನಲ್ಲಿ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವುದಿಲ್ಲ. ಅದಕ್ಕೂ ಮೊದಲಾಗಿ ಈ ಟೂರ್ನಿ ಪಾಕಿಸ್ತಾನದಲ್ಲೇ ನಡೆಯುವುದಿಲ್ಲ. ಬದಲಾಗಿ ತಟಸ್ಥ ಜಾಗದಲ್ಲಿ ನಡೆಯುತ್ತದೆ ಎಂದು ಹೇಳಿದ್ದರು. ಈ ಹೇಳಿಕೆ ಪರಸ್ಪರ ಟೀಕೆಗಳಿಗೆ ಕಾರಣವಾಗಿದೆ.
ಇದನ್ನೂ ಓದಿ | Jay Shah | ಐಸಿಸಿ ಕ್ರಿಕೆಟ್ ಸಮಿತಿಯಲ್ಲೂ ಜಯ್ ಶಾ ದರ್ಬಾರು; ಹಣಕಾಸು ಸಮಿತಿ ಮುಖ್ಯಸ್ಥರಾಗಿ ಆಯ್ಕೆ