ಬರ್ಮಿಂಗ್‌ಹ್ಯಾಮ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ Ind vs eng t20 ಸರಣಿಯ ಮೊದಲ ಪಂದ್ಯದಲ್ಲಿ ೫೦ ರನ್‌ಗಳ ಭರ್ಜರಿ ಜಯ ದಾಖಲಿಸಿದ್ದ, ಭಾರತ ತಂಡ ಶನಿವಾರ (ಜುಲೈ ೯) ಎರಡನೇ ಪಂದ್ಯದಲ್ಲಿ ಆಡಲಿದ್ದು, ಸರಣಿ ಜಯದ ಗುರಿಯನ್ನು ಹೊಂದಿದೆ.
ಮೊದಲ ಪಂದ್ಯದಲ್ಲಿ ವಿಶ್ರಾಂತಿ ಪಡೆದುಕೊಂಡಿದ್ದ ಟೀಮ್ ಇಂಡಿಯಾದ ಕಾಯಂ ವಿಕೆಟ್‌ಕೀಪರ್ ರಿಷಭ್ ಪಂತ್, ಮಾಜಿ ನಾಯಕ ವಿರಾಟ್ ಕೊಹ್ಲಿ, ವೇಗಿ ಜಸ್‌ಪ್ರಿತ್ ಬುಮ್ರಾ ಹಾಗೂ ರವೀಂದ್ರ ಜಡೇಜಾ ತಂಡಕ್ಕೆ ವಾಪಸಾಗಿದ್ದಾರೆ. ಹೀಗಾಗಿ ಹಿಂದಿನ ಪಂದ್ಯದಲ್ಲಿ ಆಡಿರುವ ನಾಲ್ಕು ಆಟಗಾರರು ತಮ್ಮ ಸ್ಥಾನಗಳನ್ನು ಬಿಟ್ಟುಕೊಡಬೇಕಾಗುತ್ತದೆ. ಆ ಆಟಗಾರರು ಯಾರು ಎಂಬುದೇ ಸದ್ಯದ ಕೌತುಕ.
ಹೂಡಾ ಜಾಗಕ್ಕೆ ಕೊಹ್ಲಿ
ದೀಪಕ್ ಹೂಡ ಕಳೆದ ಕೆಲವು ಪಂದ್ಯಗಳಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ್ದಾರೆ. ಆದರೆ, ವಿರಾಟ್ ಕೊಹ್ಲಿಯ ಪುನರಾಗಮನದ ಹಿನ್ನೆಲೆಯಲ್ಲಿ ಅವರು ಹಿರಿಯ ಆಟಗಾರನಿಗೆ ಸ್ಥಾನ ಬಿಟ್ಟು ಕೊಡಬೇಕಾಗುತ್ತದೆ. ಕೊಹ್ಲಿಯೂ ಕಳೆದ ಐದಾರು ತಿಂಗಳಿಂದ ಟಿ೨೦ ಪಂದ್ಯಗಳಲ್ಲಿ ಪಾಲ್ಗೊಂಡಿಲ್ಲ. ಹೀಗಾಗಿ ಅವರಿಗೆ ಈ ಸರಣಿ ನಿರ್ಣಾಯಕ ಎನಿಸಿಕೊಳ್ಳಲಿದೆ. ಅವರು ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ಮುಂದಿನ ಟಿ೨೦ ವಿಶ್ವ ಕಪ್ ತಂಡದಲ್ಲಿ ಸ್ಥಾನ ಪಡೆಯಬಲ್ಲರು. ವಿಫಲಗೊಂಡರೆ ದೀಪಕ್ ಹೂಡ ಸ್ಥಾನ ಕಸಿದುಕೊಂಡಿರುವುದಕ್ಕೆ ಟೀಕೆಗಳನ್ನು ಎದುರಿಸುವ ಜತೆಗೆ ಟಿ೨೦ ತಂಡದ ಕಾಯಂ ಸ್ಥಾನವನ್ನು ಬಹುತೇಕ ಕಳೆದುಕೊಳ್ಳಲಿದ್ದಾರೆ.
ರವೀಂದ್ರ ಜಡೇಜಾ ತಂಡಕ್ಕೆ ವಾಪಸಾಗಿರುವ ಕಾರಣ ಸ್ಪಿನ್ನರ್ ಅಕ್ಷರ್ ಪಟೇಲ್ ಖಚಿತವಾಗಿ ತಮ್ಮ ಸ್ಥಾನ ಕಳೆದುಕೊಳ್ಳಲಿದ್ದಾರೆ. ಅಂತೆಯೇ ವೇಗಿ ಜಸ್‌ಪ್ರಿತ್ ಬುಮ್ರಾಗೆ ಹಿಂದಿನ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಅರ್ಶ್‌ದೀಪ್ ಸಿಂಗ್ ಅವಕಾಶ ಕೊಡಬೇಕಾಗುತ್ತದೆ. ಜತೆಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶತಕ ಹಾಗೂ ಅರ್ಧ ಶತಕ ಬಾರಿಸಿದ ರಿಷಭ್ ಪಂತ್‌ಗೆ ದಿನೇಶ್ ಕಾರ್ತಿಕ್ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ.
ಗೆಲುವಿನ ಅವಕಾಶ ಇದೆಯೇ?
ಟೀಮ್ ಇಂಡಿಯಾದ ಕಳೆದ ಪಂದ್ಯದ ಪ್ರದರ್ಶನ ಟಿ೨೦ ಸರಣಿಯ ಗೆಲುವಿಗೆ ಪೂರಕವಾಗಿತ್ತು. ಅದರಲ್ಲೂ ಬೌಲರ್‌ಗಳು ಎದುರಾಳಿ ತಂಡದ ಆಟಗಾರರನ್ನು ಕಟ್ಟಿ ಹಾಕಲು ಪ್ರತಿ ಸಂದರ್ಭದಲ್ಲೂ ಯತ್ನಿಸಿದ್ದರು. ಭುವನೇಶ್ವರ್ ಕುಮಾರ್ ತಮ್ಮ ಸ್ವಿಂಗ್ ಸಾಮರ್ಥ್ಯದಿಂದಲೇ ಆಂಗ್ಲರನ್ನು ಬೆದರಿಸಿದ್ದರು.
ಬ್ಯಾಟರ್‌ಗಳು ಕೂಡ ಅದ್ಭುತ ಪ್ರದರ್ಶನ ನೀಡಿದ್ದರು. ಹಾರ್ದಿಕ್ ಪಾಂಡ್ಯ ಒಬ್ಬರು ಅರ್ಧ ಶತಕ ಬಾರಿಸಿದ್ದರೂ, ಸೂರ್ಯಕುಮಾರ್ ಯಾದವ್ ಹಾಗೂ ದೀಪಕ್ ಹೂಡ ಕೂಡ ವೇಗದ ರನ್ ಗಳಿಕೆಗೆ ನೆರವಾಗಿದ್ದರು. ಅಲ್ಲದೆ ಆರಂಭದಲ್ಲಿ ರೋಹಿತ್ ಶರ್ಮ ಉತ್ತಮ ರೀತಿಯಲ್ಲಿ ಬ್ಯಾಟಿಂಗ್ ಮಾಡಿದ್ದರು. ಇದೇ ರೀತಿಯ ಪ್ರದರ್ಶನ ಮುಂದುವರಿದರೆ ಭಾರತಕ್ಕೆ ಎರಡನೇ ಪಂದ್ಯ ಗೆದ್ದು ಸರಣಿಯನ್ನು ವಶಪಡಿಸಿಕೊಳ್ಳುವುದು ಸುಲಭ.
ಬಟ್ಲರ್‌ಗೆ ಒತ್ತಡ
ಮೊದಲ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಇಂಗ್ಲೆಂಡ್ ತಂಡಕ್ಕೆ ಇದು “ಮಾಡು ಇಲ್ಲವೇ ಮಡುʼ ಪಂದ್ಯವಾಗಿದ್ದು, ಸರಣಿಯನ್ನು ಜೀವಂತವಾಗಿ ಇರಿಸಿಕೊಳ್ಳಬೇಕಾಗದರೆ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಇಯಾನ್ ಮಾರ್ಗನ್ ನಿವೃತ್ತಿ ಬಳಿಕ ಇಂಗ್ಲೆಂಡ್ ಸೀಮಿತ ಓವರ್‌ಗಳ ತಂಡದ ನಾಯಕತ್ವ ವಹಿಸಿಕೊಂಡಿರುವ ಜೋಸ್ ಬಟ್ಲರ್‌ಗೆ ಇದು ಮೊದಲ ಸರಣಿ. ಆದರೆ, ಮೊದಲ ಪಂದ್ಯದಲ್ಲೇ ಸೋಲುವ ಮೂಲಕ ಆರಂಭಿಕ ವಿಘ್ನ ಎದುರಿಸಿದ್ದಾರೆ. ಹೀಗಾಗಿ ಈ ಪಂದ್ಯವನ್ನಾದರೂ ಗೆದ್ದು ಮರ್ಯಾದೆ ಉಳಿಸಿಕೊಳ್ಳುವ ಪ್ರಯತ್ನ ನಡೆಸಲಿದೆ.
ಸಣ್ಣ ಗ್ರೌಂಡ್
ಎಜ್‌ಬಾಸ್ಟನ್ ಮೈದಾನ ಬ್ಯಾಟ್ಸ್‌ಮನ್‌ಗಳಿಗೆ ಪೂರಕವಾಗಿದೆ. ಸ್ಕ್ವೇರ್ ಬೌಂಡರಿ ೫೦ ಮೀಟರ್‌ಗಿಂತಲೂ ಕಡಿಮೆಯಿದ್ದು, ಸೈಡ್ ಬೌಂಡರಿ ಲೈನ್‌ಗಳು ೬೦ ಮೀಟರ್ ಮಾತ್ರವಿದೆ. ಹೀಗಾಗಿ ಬೌಂಡರಿ ಸಿಕ್ಸರ್‌ಗಳ ಸುರಿಮಳೆ ಸುರಿಯಲಿದೆ. ಹೀಗಾಗಿ ಬೌಲರ್‌ಗಳ ಮೇಲೆ ಹೆಚ್ಚಿನ ಒತ್ತಡ ಸೃಷ್ಟಿಯಾಗಲಿದೆ.
ಮಳೆ ಬರುವ ಸಾಧ್ಯತೆ ಇದೆಯೇ?
ಬರ್ಮಿಂಗ್‌ಹ್ಯಾಮ್‌ನಲ್ಲಿ ಆಕಾಶ ಶುಭ್ರವಾಗಿದೆ. ಹೀಗಾಗಿ ಮಳೆಯ ಸಾಧ್ಯತೆಗಳು ಇಲ್ಲ ಎಂದು ಸ್ಥಳೀಯ ಹವಾಮಾನ ಇಲಾಖೆ ಹೇಳಿದೆ. ಈ ಪಿಚ್‌ನಲ್ಲಿ ನಡೆದ ಕಳೆದ ಎಂಟು ಪಂದ್ಯಗಳಲ್ಲಿ ಮೊದಲ ಬ್ಯಾಟ್ ಮಾಡಿದ ತಂಡ ಐದು ಪಂದ್ಯಗಳನ್ನು ವಶಪಡಿಸಿಕೊಂಡಿದೆ.
ಪಂದ್ಯದ ವಿವರ
ಸ್ಥಳ: ಎಜ್‌ಬಾಸ್ಟನ್, ಬರ್ಮಿಂಗ್‌ಹ್ಯಾಮ್
ಆರಂಭ: ಸಂಜೆ ೭ ಗಂಟೆ (ಭಾರತಿಯ ಕಾಲಮಾನ)
ನೇರ ಪ್ರಸಾರ: ಸೋನಿ ಟಿವಿ ಹಾಗೂ ಸೋನಿ ಲೈವ್‌ನಲ್ಲಿ ಆನ್‌ಲೈನ್ ಸ್ಟ್ರೀಮಿಂಗ್.
ಇದನ್ನೂ ಓದಿ: t20 Series : ಹಾರ್ದಿಕ್ ಅಬ್ಬರಕ್ಕೆ ಬೆಚ್ಚಿ ಬಿದ್ದ ಆಂಗ್ಲರು ಕಡಿಮೆ ಮೊತಕ್ಕೆ ಆಲ್‌ಔಟ್, ಭಾರತಕ್ಕೆ ಭರ್ಜರಿ ಜಯ