ಮುಂಬಯಿ: ಭಾರತ ಹಾಗೂ ಪ್ರವಾಸಿ ಆಸ್ಟ್ರೇಲಿಯಾ ತಂಡಗಳ ನಡುವಿನ ಟೆಸ್ಟ್ ಸರಣಿಯ (INDvsAUS) ಮೂರನೇ ಪಂದ್ಯ ನಡೆದ ಇಂದೋರ್ನ ಹೋಳ್ಕರ್ ಪಿಚ್ ಕಳಪೆಯಾಗಿತ್ತು ಎಂದು ಐಸಿಸಿ 3 ಡಿಮೆರಿಟ್ ಅಂಕಗಳನ್ನು ನೀಡಿತ್ತು. ಇದು ಅಲ್ಲಿನ ಪಿಚ್ ಕ್ಯುರೇಟರ್ ಹಾಗೂ ಕ್ರಿಕೆಟ್ ಅಸೋಸಿಯೇಷನ್ಗೆ ಕೆಟ್ಟ ಹೆಸರು ತಂದಿದೆ. ಇಂದೋರ್ ಪಿಚ್ ನ್ಯಾಯಯುತ ಆಟಕ್ಕೆ ಪೂರಕವಾಗಿರಲಿಲ್ಲ ಎಂದು ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ಕೂಡ ಘೋಷಿಸಿ ಡಿಮೆರಿಟ್ ಅಂಕ ವಿಧಿಸಿದ್ದರು. ಆದರೆ, ಐಸಿಸಿ ನಿರ್ಧಾರವನ್ನು ಭಾರತ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಪ್ರಶ್ನಿಸಿದ್ದಾರೆ. ಕಳಪೆ ರೇಟಿಂಗ್ಸ್ ಕೊಡುವ ಅಗತ್ಯವೇ ಇರಲಿಲ್ಲ ಎಂದು ಅವರು ಹೇಳಿದ್ದಾರೆ.
ಪಿಚ್ ಸಾಕಷ್ಟು ಒಣಗಿ ಹೋಗಿತ್ತು. ಬ್ಯಾಟ್ ಮತ್ತು ಬಾಲ್ನ ನಡುವೆ ಯಾವುದೇ ಸಮತೋಲನ ಹೊಂದಿರಲಿಲ್ಲ. ಸ್ಪಿನ್ನರ್ಗಳಿಗೆ ಹೆಚ್ಚು ಫೇವರಿಟ್ ಆಗಿತ್ತು. ಆದರೆ, ಹೆಚ್ಚುವರಿ ಬೌನ್ಸರ್ ಅಥವಾ ವೇಗದ ಬೌಲಿಂಗ್ಗೆ ಅವಕಾಶ ಕೊಟ್ಟಿರಲಿಲ್ಲ. ಹೀಗಾಗಿ ಸ್ಪರ್ಧಾತ್ಮಕ ಕ್ರಿಕೆಟ್ಗೆ ಸೂಕ್ತವಾಗಿರಲಿಲ್ಲ ಎಂಬು ಕ್ರಿಸ್ ಬ್ರಾಡ್ ಹೇಳಿಕೆಯನ್ನು ಐಸಿಸಿ ಬಿಡುಗಡೆ ಮಾಡಿದೆ.
ಈ ಕುರಿತು ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂಡಿಯಾ ಟುಡೆ ಜತೆ ಮಾತನಾಡಿದ ಅವರು ಒಂದು ವಿಷಯವನ್ನು ನಾನು ಇಲ್ಲಿ ಹೇಳುವುದಕ್ಕೆ ಇಷ್ಟ ಪಡುತ್ತೇನೆ. ಕಳೆದ ನವೆಂಬರ್ನಲ್ಲಿ ಆಸ್ಟ್ರೇಲಿಯಾದ ಗಬ್ಬಾದಲ್ಲಿ ಒಂದು ಟೆಸ್ಟ್ ಪಂದ್ಯ ನಡೆದಿತ್ತು.. ಎರಡೇ ದಿನದಲ್ಲಿ ಪಂದ್ಯ ಮುಕ್ತಾಯ ಕಂಡಿತ್ತು. ಅಲ್ಲಿಗೆ ಎಷ್ಟು ಡಿಮೆರಿಟ್ ಅಂಕಗಳನ್ನು ಐಸಿಸಿ ವಿಧಿಸಿತ್ತು ಎಂಬುದನ್ನು ನಾನು ತಿಳಿಯಬಯಸುತ್ತೇನೆ.
ಇದನ್ನೂ ಓದಿ : IND VS AUS: ಇಂದೋರ್ ಪಿಚ್ಗೆ ಕಳಪೆ ರೇಟಿಂಗ್ಸ್ ಕೊಟ್ಟ ಐಸಿಸಿ
ಗಬ್ಬಾ ಪಿಚ್ನಲ್ಲಿ ಚೆಂಡು ಮಿತಿ ಮೀರಿ ಪುಟಿಯುತ್ತಿತ್ತು. ವೇಗದ ಬೌಲರ್ಗಳಿಗೆ ಹೆಚ್ಚು ಅನುಕೂಲಕರವಾಗಿತ್ತು. ಬ್ಯಾಟರ್ಗಳಿಗೆ ಚೆಂಡನ್ನು ಎದುರಿಸಲೇ ಸಾಧ್ಯವಾಗುತ್ತಿರಲಿಲ್ಲ. ಹೀಗಿರುವಾಗ ಬ್ಯಾಟ್ಸ್ಮನ್ಗಳಿಗೆ ಯಾವುದೇ ರೀತಿ ಅಪಾಯಕಾರಿ ಎನಿಸದ ಇಂದೋರ್ ಪಿಚ್ಗೆ ಕಳಪೆ ಪಿಚ್ ಎಂದು ರೇಟಿಂಗ್ ನೀಡಿರುವುದು ನ್ಯಾಯವಲ್ಲ ಎಂದು ಗವಾಸ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.