Site icon Vistara News

T20 world Cup | ಶಾಹಿನ್‌ಗೆ ಹೆದರಿಕೊಂಡು ಇರೋದ್ಯಾಕೆ, ಮುನ್ನುಗ್ಗಿ ಬಾರಿಸಿ ಎಂದ ಗಂಭೀರ್‌

Gambhir

ನವ ದೆಹಲಿ : ಪಾಕಿಸ್ತಾನ ತಂಡದ ವೇಗದ ಬೌಲರ್ ಶಹೀನ್‌ ಶಾ ಅಫ್ರಿದಿ ಗಾಯದ ಸಮಸ್ಯೆಯಿಂದ ಮುಕ್ತಿ ಪಡೆದು ತಂಡ ಸೇರಿಕೊಂಡಿದ್ದಾರೆ. ಅಕ್ಟೋಬರ್‌ ೨೩ರಂದು ನಡೆಯಲಿರುವ ಭಾರತ ವಿರುದ್ಧದ ಟಿ೨೦ ವಿಶ್ವ ಕಪ್ (T20 world Cup) ಪಂದ್ಯದಲ್ಲಿ ಅವರು ಕಣಕ್ಕೆ ಇಳಿಯಲಿದ್ದಾರೆ. ಈ ಎಡಗೈ ವೇಗಿ ತಂಡಕ್ಕೆ ವಾಪಸಾಗಿರುವುದು ಟೀಮ್‌ ಇಂಡಿಯಾ ಪಾಲಿಗೆ ದುಸ್ವಪ್ನ ಎಂದು ಬಿಂಬಿಸಲಾಗುತ್ತಿದೆ. ಯಾಕೆಂದರೆ ಕಳೆದ ವರ್ಷ ನಡೆದ ಟಿ೨೦ ವಿಶ್ವ ಕಪ್‌ ಪಂದ್ಯದಲ್ಲಿ ಈ ಬೌಲರ್‌ ಭಾರತ ತಂಡದ ಪಾಲಿಗೆ ಮಾರಕವಾಗಿ ಪರಿಣಮಿಸಿದ್ದರು. ಆದರೆ, ಭಾರತ ತಂಡದ ಮಾಜಿ ಆರಂಭಿಕ ಬ್ಯಾಟರ್‌ ಗೌತಮ್‌ ಗಂಭೀರ್‌, ಶಹೀನ್‌ ಅವರಿಗೆ ಹೆದರಿಕೊಂಡರೆ ಇನ್ನಷ್ಟು ಹಿನ್ನಡೆಯಾಗುತ್ತದೆ. ಹೀಗಾಗಿ ಮುನ್ನುಗ್ಗಿ ಬಾರಿಸಿ ಅವರ ಜಂಘಾಬಲ ಉಡುಗಿಸಿ ಎಂದು ಟೀಮ್‌ ಇಂಡಿಯಾ ಆಟಗಾರರಿಗೆ ಸಲಹೆ ಕೊಟ್ಟಿದ್ದಾರೆ.

ಶಹೀನ್ ಅವರ ಬಗ್ಗೆಯೇ ಚಿಂತೆ ಮಾಡಿಕೊಂಡು ಇದ್ದರೆ ಯಾವುದೇ ಪ್ರಯೋಜನ ಇಲ್ಲ. ಅವರ ಎಸೆತಗಳನ್ನು ಸೂಕ್ತ ಸಮಯ ನೋಡಿಕೊಂಡು ಹಿಮ್ಮೆಟ್ಟಿಸಬೇಕು. ಆಗ ಎಂಥದ್ದೇ ಬೌಲರ್‌ ಆದರೂ ಸವಾಲು ಎನಿಸುವುದಿಲ್ಲ. ಅದಕ್ಕೆ ಬೇಕಾದ ತಂತ್ರಗಳನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಗಂಭೀರ್‌ ಅವರು ಸ್ಟಾರ್‌ ಸ್ಪೋರ್ಟ್ಸ್‌ನ ಗೇಮ್‌ ಪ್ಲ್ಯಾನ್‌ ಕಾರ್ಯಕ್ರಮದಲ್ಲಿ ನುಡಿದಿದ್ದಾರೆ.

“ಹೊಸ ಚೆಂಡಿನಲ್ಲಿ ಶಹೀನ್‌ ಶಾ ಖಂಡಿತವಾಗಿಯೂ ಅಪಾಯಕಾರಿಯಾಗಿ ಪರಿಣಮಿಸಬಲ್ಲರು. ಆದರೆ, ಭಾರತದ ಬ್ಯಾಟರ್‌ಗಳು ರನ್‌ ಬಾರಿಸಲು ಆರಂಭಿಸಿದರೆ ಖಂಡಿತವಾಗಿಯೂ ಅವರನ್ನು ಹಿಮ್ಮೆಟ್ಟಿಸಬಹುದು,” ಎಂದು ಗಂಭೀರ್‌ ನುಡಿದಿದ್ದಾರೆ.

ಭಾರತ ತಂಡದ ಬ್ಯಾಟಿಂಗ್‌ ಕ್ರಮಾಂಕ ಉತ್ತಮವಾಗಿದೆ. ಆರಂಭಿಕ ನಾಲ್ಕು ಬ್ಯಾಟರ್‌ಗಳು ಶಹೀನ್‌ಗೆ ಉತ್ತರ ಕೊಡಲು ಸಮರ್ಥರಿದ್ದಾರೆ ಎಂಬುದಾಗಿಯೂ ಅವರು ಹೇಳಿದರು.

ಇದನ್ನೂ ಓದಿ | ವ್ಯಕ್ತಿ ಪೂಜೆ ಸರಿಯಲ್ಲ, ವಿರಾಟ್‌ ಕೊಹ್ಲಿಯನ್ನು ಮತ್ತೊಮ್ಮೆ ಟಾರ್ಗೆಟ್‌ ಮಾಡಿದ ಗೌತಮ್‌ ಗಂಭೀರ್‌

Exit mobile version