ಮುಂಬಯಿ : ಸೂರ್ಯಕುಮಾರ್ ಯಾದವ್ (Suryakumar Yadav) ಅವರು ಚುಟುಕು ಕ್ರಿಕೆಟ್ನ ಮಹಾರಾಜ ಎಂಬುದಲ್ಲಿ ಎರಡು ಮಾತಿಲ್ಲ. ಅವರು ದಾಖಲೆಗಳೇ ಈ ಹೇಳಿಕೆಗೆ ಸಾಕ್ಷಿ. ಅದರಲ್ಲೂ ಟಿ20 ಮಾದರಿಯಲ್ಲಿ ಅವರೀಗ ಅಜೇಯ ಆಟಗಾರ. ಆದರೆ, ದೀರ್ಘ ಅವಧಿಯ ಕ್ರಿಕೆಟ್ಗೆ ಅವರು ಹೊಂದಿಕೆಯಾಗುವರೇ ಎಂಬುದು ಪ್ರಶ್ನೆ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿಯೂ ಅವರು ಉತ್ತಮ ದಾಖಲೆ ಹೊಂದಿರುವ ಕಾರಣ ಆಡಿಸಬಾರದು ಎಂದೇನೂ ಇಲ್ಲ. ಆದರೆ, ಪ್ರಸ್ತುತ ದೇಶಿಯ ಕ್ರಿಕೆಟ್ನಲ್ಲಿ ಹಲವು ಯುವ ಪ್ರತಿಭೆಗಳು ಮಿಂಚುತ್ತಿದ್ದಾರೆ. ಅವರೆಲ್ಲರನ್ನೂ ಬಿಟ್ಟು ಸೂರ್ಯನಿಗೆ ಅವಕಾಶ ಕೊಡಬೇಕೆ ಎಂಬುದು ಚರ್ಚೆಯ ವಿಷಯ.
ಜನವರಿ 7ರಂದು ಗುಜರಾತ್ನ ರಾಜ್ಕೋಟ್ನಲ್ಲಿ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರು 51 ಎಸೆತಗಳಿಗೆ 112 ರನ್ ಬಾರಿಸಿದ ಬಳಿಕ ಅವರಿಗೆ ಟೆಸ್ಟ್ ತಂಡದಲ್ಲಿ ಚಾನ್ಸ್ ಕೊಡುವ ವಿಷಯ ಚರ್ಚೆಗೆ ಬಂದಿದೆ. ಅದಕ್ಕೆ ಕಾರಣ ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್. ಸೂರ್ಯ ಅವರನ್ನು ಟ್ವೀಟ್ ಮೂಲಕ ಹೊಗಳಿದ ಗೌತಮ್ ಗಂಭೀರ್, ಟೆಸ್ಟ್ ತಂಡದಲ್ಲಿ ಅವಕಾಶ ನೀಡುವ ಸಮಯ ಬಂದಿದೆ ಎಂದು ಬರೆದುಕೊಂಡಿದ್ದಾರೆ. ಇದು ಕ್ರಿಕೆಟ್ ಅಭಿಮಾನಿಗಳ ನಡುವಿನ ಸೋಶಿಯಲ್ ಮೀಡಿಯಾ ಚರ್ಚೆ ಕಾರಣವಾಗಿದೆ.
ರಣಜಿ ಟ್ರೋಫಿಯಲ್ಲಿ ಮುಂಬಯಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಸರ್ಫರಾಜ್ ಖಾನ್ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಶತಕಗಳ ಮೇಲೆ ಶತಕಗಳನ್ನು ಬಾರಿಸುತ್ತಿದ್ದಾರೆ. ಹೀಗಾಗಿ ಅವರನ್ನು ಟೆಸ್ಟ್ ತಂಡಕ್ಕೆ ಸೇರಿಸಿಕೊಳ್ಳಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ. ಇದೇ ಹೇಳಿಕೆಯನ್ನು ಮುಂದಿಟ್ಟು ಗಂಭೀರ್ ಅವರ ಟ್ವೀಟ್ ಮೇಲೆ ಕ್ರಿಕೆಟ್ ಅಭಿಮಾನಿಗಳು ಚರ್ಚೆ ನಡೆಸಿದ್ದಾರೆ.
ಭಾರತ ಟೆಸ್ಟ್ ತಂಡಕ್ಕೆ ಟಿ20 ತಂಡದ ಪ್ರದರ್ಶನ ಮಾನದಂಡವಾಗಬಾರದು. ದೀರ್ಘ ಅವಧಿಯ ಕ್ರಿಕೆಟ್ಗೆ ದೇಶಿ ಕ್ರಿಕೆಟ್ ಟೂರ್ನಿಗಳ ಅನುಭವ ಹಾಗೂ ಪ್ರದರ್ಶನದ ಆಧಾರದ ಮೇಲೆ ತೆಗೆದುಕೊಳ್ಳಬೇಕು. ಹಾಗಾದರೆ ಸೂರ್ಯಕುಮಾರ್ ಅವರಿಗಿಂತ ಸರ್ಫರಾಜ್ ಖಾನ್ ಸೂಕ್ತ. ಅದೇ ರೀತಿ ಹನುಮ ವಿಹಾರಿಯನ್ನೂ ತಂಡಕ್ಕೆ ಸೇರಿಸಿಕೊಳ್ಳಬೇಕು ಎಂಬುದಾಗಿ ಅವರೆಲ್ಲರೂ ಒತ್ತಾಯಿಸಿದ್ದಾರೆ.
ಸೂರ್ಯ ಟಿ20ಗೆ ಫಿಟ್. ಅವರನ್ನು ಟೆಸ್ಟ್ ತಂಡಕ್ಕೆ ಸೇರಿಸಿ ಅವರ ಶೈಲಿ ಬದಲಾಗುವಂತೆ ಮಾಡಬೇಡಿ. ಟೆಸ್ಟ್ ತಂಡಕ್ಕೆ ಸೇರಿಕೊಂಡ ಬಳಿಕ ಮಯಾಂಕ್ ಅಗರ್ವಾಲ್ ತಮ್ಮ ನೈಜ ಆಟವನ್ನು ಕಳೆದುಕೊಂಡಿರುವುದೇ ಅದಕ್ಕೆ ಉತ್ತಮ ಉದಾಹರಣೆ. ಈಗಾಗಲೇ ತಂಡದಲ್ಲಿ ಸ್ಥಾನ ಪಡೆದಿರುವ ಹಾಗೂ ಅವಕಾಶಕ್ಕಾಗಿ ಕಾಯುತ್ತಿರುವ ಪ್ರತಿಭೆಗಳಿಗೆ ಅವಕಾಶ ಕೊಡಿ ಎಂದು ಅಭಿಮಾನಿಗಳು ವಾದ ಮಾಡಿದ್ದಾರೆ.
ಇದನ್ನೂ ಓದಿ | Suryakumar Yadav | ಡಾನ್ಗಳಿಗೆ ಕೊಡುವಂತೆ ಸೂರ್ಯಕುಮಾರ್ ಯಾದವ್ ಕೈಗೆ ಮುತ್ತಿಟ್ಟ ಯಜ್ವೇಂದ್ರ ಚಹಲ್!