ಕೋಲ್ಕೊತಾ : ಫೋಟೋದಲ್ಲಿ ಸರಿಯಾಗಿ ಕಾಣಿಸುತ್ತಿಲ್ಲವೆಂದು ಭಾರತದ ಫುಟ್ಬಾಲ್ ಸ್ಟಾರ್ ಸುನೀಲ್ ಛೆತ್ರಿಯನ್ನು ಪಶ್ಚಿಮ ಬಂಗಾಳದ ರಾಜ್ಯಪಾಲ ಹಿಂದಕ್ಕೆ ತಳ್ಳಿದ ಘಟನೆ ನಡೆದಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.
ಭಾನುವಾರ ನಡೆದ ಡುರಾಂಡ್ ಕಪ್‌ನ ಫೈನಲ್ ಪಂದ್ಯದಲ್ಲಿ ಸುನೀಲ್ ಛೆತ್ರಿ ನೇತೃತ್ವದ ಬೆಂಗಳೂರು ಎಫ್‌ಸಿ ತಂಡ ಮುಂಬಯಿ ಎಫ್‌ಸಿ ತಂಡವನ್ನು ೨-೧ ಗೋಲ್‌ಗಳಿಂದ ಸೋಲಿಸಿ ಚೊಚ್ಚಲ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಸಾಲ್ಟ್ ಲೇಕ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಅದ್ಧೂರಿ ಪ್ರದರ್ಶನ ನೀಡಿದ ಬೆಂಗಳೂರು ತಂಡ ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು. ಈ ಗೆಲುವಿನ ಪ್ರಶಸ್ತಿ ವಿತರಣೆ ಕಾರ್ಯಕ್ರಮದ ವೇಳೆ ಬೆಂಗಳೂರು ಎಫ್‌ಸಿ ತಂಡದ ನಾಯಕ ಸುನೀಲ್ ಛೆತ್ರಿಯನ್ನು ತಳ್ಳಿದ ಪ್ರಸಂಗ ನಡೆದಿದೆ.
ಬಂಗಾಳದ ರಾಜ್ಯಪಾಲ ಲಾ ಗಣೇಶನ್ ಹಾಗೂ ಕ್ರೀಡಾ ಸಚಿವ ಅರೂಪ್ ಬಿಸ್ವಾಸ್ ಟ್ರೋಫಿ ವಿತರಣೆ ಮಾಡಿದ್ದರು. ಈ ವೇಳೆ ಪತ್ರಕರ್ತರು ಫೋಟೋಗ್ರಫಿಗೆ ಮನವಿ ಮಾಡಿದ್ದಾರೆ. ಅಂತೆಯೇ ಫೋಟೋಗ್ರಾಫರ್‌ಗಳಿದ್ದ ಕಡೆಗೆ ಎಲ್ಲರೂ ತಿರುಗಿದ್ದಾರೆ. ಈ ವೇಳೆ ತಮಗೆ ಸುನೀಲ್ ಛೆತ್ರಿ ಅಡ್ಡವಾಗುತ್ತಿದ್ದಾರೆ ಎಂದು ರಾಜ್ಯಪಾಲರು ಅವರನ್ನು ಹಿಂದಕ್ಕೆ ತಳ್ಳಿದ್ದಾರೆ.
ರಾಜ್ಯಪಾಲರ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತಗೊಂಡಿವೆ. ಕಪ್ ಗೆದ್ದಿರುವುದು ನೀವಲ್ಲ, ಸುನೀಲ್ ಛೆತ್ರಿ ಅವರ ನಾಯಕತ್ವದ ತಂಡ. ಫೋಟೋಗೆ ನೀವು ಅರ್ಹರೇ ಅಲ್ಲ. ಅವರನ್ನು ತಳ್ಳಿದ್ದು ತಪ್ಪು ಎಂಬುದಾಗಿ ಫುಟ್ಬಾಲ್ ಅಭಿಮಾನಿಗಳು ಛೀಮಾರಿ ಹಾಕಿದ್ದಾರೆ.
ಸಚಿವರಿಂದಲೂ ಅದೇ ಕೃತ್ಯ
ಬಂಗಾಳದ ಕ್ರೀಡಾ ಸಚಿವ ಅರೂಪ್ ಬಿಸ್ವಾಸ್ ಕೂಡ ಆಟಗಾರರನ್ನು ತಳ್ಳಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಅವರು ಕೂಡ ಆಟಗಾರರನ್ನು ಬದಿಗೆ ತಳ್ಳಿದ್ದಾರೆ ಎಂದು ಆರೋಪಿಸಲಾಗಿದೆ. ಅಭಿಮಾನಿಗಳು ಅವರಿಗೂ ತಮ್ಮ ಖಂಡನೆ ವ್ಯಕ್ತಪಡಿಸಿದ್ದಾರೆ. ಆಟಗಾರರು ನಿಜವಾದ ಹೀರೊಗಳು. ಅವರನ್ನು ಹಿಂದಕ್ಕೆ ತಳ್ಳಿರುವುದು ಅಕ್ಷಮ್ಯ ಎಂಬುದಾಗಿ ಬರೆದುಕೊಂಡಿದ್ದಾರೆ.
ರಾಬಿನ್ ಉತ್ತಪ್ಪ ಬೇಸರ
ಸುನೀಲ್ ಛೆತ್ರಿಯನ್ನು ಹಿಂದಕ್ಕೆ ತಳ್ಳಿದ್ದಕ್ಕೆ ಭಾರತ ತಂಡದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರು ಬೇಸರ ವ್ಯಕ್ತಪಡಿಸಿದ್ದಾರೆ. “ಇಂಥವೆಲ್ಲ ನಡೀತದೆ ರಾಬಿನ್, ನೀವು ಇವೆಲ್ಲದಕ್ಕಿಂತ ಅರ್ಹ ವ್ಯಕ್ತಿ” ಎಂಬುದಾಗಿ ಬರೆದುಕೊಂಡಿದ್ದಾರೆ.