Site icon Vistara News

ಹಾರ್ದಿಕ್‌ ಪಾಂಡ್ಯ ಯಾಕೆ Team India ನಾಯಕರಾಗಬೇಕು? ಅವರ ಸಾಮರ್ಥ್ಯಗಳೇನು?

team India

ಬೆಂಗಳೂರು: ಭಾರತ ತಂಡದ ಭವಿಷ್ಯದ ನಾಯಕರಿಗಾಗಿ ಹುಡುಕಾಟ ಜೋರಾಗಿ ನಡೆದಿದೆ. ವಿರಾಟ್‌ ಕೊಹ್ಲಿ ಹೊಣೆಗಾರಿಕೆ ತೊರೆದ ಬಳಿಕ ಮತ್ತೊಬ್ಬ ಹಿರಿಯ ಆಟಗಾರ ರೋಹಿತ್‌ ಶರ್ಮ ನಾಯಕತ್ವ ವಹಿಸಿಕೊಂಡಿದ್ದರೂ ಅವರ ಬಳಿಕ ಯಾರು ಎಂಬ ಚರ್ಚೆ ಆರಂಭಗೊಂಡಿದೆ. ಏತನ್ಮಧ್ಯೆ, ಬರೋಡಾ ಮೂಲದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ Team India ನಾಯಕರಾಗಲಿ ಎಂಬ ಅಭಿಪ್ರಾಯಗಳು ಹೆಚ್ಚುತ್ತಿವೆ.

ಮೇ ಅಂತ್ಯಕ್ಕೆ ಮುಕ್ತಾಯಗೊಂಡ ಐಪಿಎಲ್‌ ೧೫ನೇ ಆವೃತ್ತಿಯಲ್ಲಿ ಹಾರ್ದಿಕ್‌ ಪಾಂಡ್ಯ ನೇತೃತ್ವದ ನೂತನ ತಂಡ ಗುಜರಾತ್‌ ಟೈಟನ್ಸ್‌ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಟೂರ್ನಿಯುದ್ದಕ್ಕೂ ಪಾಂಡ್ಯ ಬ್ಯಾಟ್‌ ಹಾಗೂ ಬೌಲಿಂಗ್‌ ಮೂಲಕ ಮಿಂಚುವ ಜತೆಗೆ ನಾಯಕತ್ವದಲ್ಲೂ ಯಶಸ್ಸು ಕಂಡಿದ್ದರು. ಆಕ್ರಮಣಕಾರಿ ಧೋರಣೆ ಹಾಗೂ ರಣತಂತ್ರ ರೂಪಿಸುವಲ್ಲಿ ಯಶಸ್ವಿಯಾಗಿರುವ ಕಾರಣ ಅವರನ್ನೇ Team India ನಾಯಕರನ್ನಾಗಿ ಮಾಡಬೇಕು ಎಂದು ಹಿರಿಯ ಕ್ರಿಕೆಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಐರ್ಲೆಂಡ್‌ಗೆ ಪ್ರವಾಸಕ್ಕೆ ನಾಯಕ

ಐರ್ಲೆಂಡ್‌ಗೆ ಟಿ೨೦ ಸರಣಿಗಾಗಿ ಪ್ರವಾಸ ತೆರಳಲಿರುವ ಟೀಮ್‌ ಇಂಡಿಯಾಗೆ ಹಾರ್ದಿಕ್‌ ಪಾಂಡ್ಯ ಅವರನ್ನೇ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ೨೦ ಸರಣಿಗೆ ರಿಷಭ್‌ ಪಂತ್‌ ನಾಯಕತ್ವ ವಹಿಸಿಕೊಂಡಿದ್ದರೂ, ಅವರು ಟೆಸ್ಟ್‌ ಸರಣಿಯ ಏಕೈಕ ಪಂದ್ಯಕ್ಕಾಗಿ ಇಂಗ್ಲೆಂಡ್‌ಗೆ ತೆರಳಿರುವ ಹಿನ್ನೆಲೆಯಲ್ಲಿ ಹಾರ್ದಿಕ್‌ ಅವರನ್ನೇ ಅತ್ಯುತ್ತಮ ಆಯ್ಕೆ ಎಂದು ಪರಿಗಣಿಸಲಾಗಿದೆ. ಜೂನ್‌ ೨೬ ಹಾಗೂ ೨೮ರಂದು ಐರ್ಲೆಂಡ್‌ ವಿರುದ್ಧ ಎರಡು ಟಿ೨೦ ಪಂದ್ಯಗಳು ನಡೆಯಲಿವೆ.

ಪಂತ್‌ ಸಾಮರ್ಥ್ಯ ಪರಾಮರ್ಶೆ

ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ನಾಯಕತ್ವ ವಹಿಸಿದ್ದ ರಿಷಭ್‌ ಪಂತ್‌ ಅವರು ಪಡೆದ ಯಶಸ್ಸು ನೂರು ಪ್ರತಿಶತ ಇಲ್ಲ ಎಂಬುದೇ ಕ್ರಿಕೆಟ್‌ ಪಂಡಿತರ ಅಭಿಪ್ರಾಯ. ಸರಣಿಗೆ ಮೊದಲು ಟೀಮ್‌ ಇಂಡಿಯಾಗೆ ತವರಿನಲ್ಲಿ ಸತತ ೧೩ ಪಂದ್ಯಗಳನ್ನು ಗೆದ್ದು ವಿಶ್ವ ದಾಖಲೆ ಮಾಡುವ ಅವಕಾಶ ಇತ್ತು. ಆದರೆ, ಪಂತ್‌ ನೇತೃತ್ವದ ಭಾರತ ತಂಡ ಮೊದಲ ಪಂದ್ಯದಲ್ಲಿ ಸೋಲುವ ಮೂಲಕ ಚಿನ್ನದಂಥ ಅವಕಾಶ ಕಳೆದುಕೊಂಡಿತ್ತು. ಜತೆಗೆ ಕೋಲ್ಕೊತಾದಲ್ಲಿ ನಡೆದ ಎರಡನೇ ಪಂದ್ಯದಲ್ಲೂ ಸೋಲುವ ಮೂಲಕ ಹಿನ್ನಡೆ ಕಂಡಿತ್ತು. ಆದರೆ, ಕಟಕ್‌ ಹಾಗೂ ರಾಜ್‌ಕೋಟ್‌ನಲ್ಲಿ ಗೆಲ್ಲುವ ಮೂಲಕ ಮರ್ಯಾದೆ ಉಳಿಸಿಕೊಂಡಿತ್ತು. ಹೀಗಾಗಿ ಬೆಂಗಳೂರಿನಲ್ಲಿ ನಡೆದ ಕೊನೇ ಪಂದ್ಯ ಡ್ರಾ ಆಗಿದ್ದ ಹೊರತಾಗಿಯೂ ಸರಣಿಯನ್ನು ಡ್ರಾ ಮಾಡಿಕೊಳ್ಳಲು ಯಶಸ್ವಿಯಾಗಿತ್ತು Team India. ಈ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ರಿಷಭ್‌ ಪಂತ್‌ ಸಾಮರ್ಥ್ಯ ಅಳೆಯಲಾಗಿದೆ. ಹೀಗಾಗಿ ಹಾರ್ದಿಕ್‌ ಪಾಂಡ್ಯ ಅವರನ್ನೇ ಸೂಕ್ತ ಆಯ್ಕೆ ಎನ್ನಲಾಗುತ್ತಿದೆ.

ಐರ್ಲೆಂಡ್‌ ಪ್ರವಾಸ ಮುಗಿಸಲಿರುವ Team India ಅಲ್ಲಿಂದ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದೆ. ಟೆಸ್ಟ್‌ ಪಂದ್ಯ ಮುಗಿದ ಬಳಿಕ ಮೂರು ಪಂದ್ಯಗಳ ಟಿ೨೦ ಸರಣಿ ನಡೆಯಲಿದೆ. ಒಂದು ವೇಳೆ ರೋಹಿತ್‌ ಶರ್ಮ ಆ ಸರಣಿಯಲ್ಲಿ ಆಡದೇ ಹೋದರೆ, ಪಂತ್‌ ಬದಲಿಗೆ ಹಾರ್ದಿಕ್‌ಗೆ ನಾಯಕತ್ವ ವಹಿಸುವ ಸಾಧ್ಯತೆಗಳು ಹೆಚ್ಚಿವೆ.

ರಿಷಭ್‌ ಪಂತ್‌ಗೆ ನಾಯಕತ್ವ ವಹಿಸಿದರೆ ಹೆಚ್ಚುವರಿ ಹೊರೆ ಬೀಳುತ್ತದೆ ಎಂಬ ಅಬಿಪ್ರಾಯವೂ ಇದೆ. ಅವರು ತಮ್ಮ ವಿಕೆಟ್‌ಕೀಪಿಂಗ್‌ ಕೌಶಲ ವೃದ್ಧಿಯ ಕಡೆಗೆ ಗಮನ ಕೊಡುವ ಜತೆಗೆ ನಾಯಕತ್ವ ಹಾಗೂ ಬ್ಯಾಟಿಂಗ್‌ ಎರಡನ್ನೂ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಈ ವಾದ ಮಾಡುವವರ ಅಭಿಪ್ರಾಯ. ಆದರೆ, ಹಾರ್ದಿಕ ಪಾಂಡ್ಯ ಅವರು 2022ರಲ್ಲಿ ಅತ್ಯುತ್ತಮವಾಗಿ ಬೌಲಿಂಗ್‌ ಮಾಡುತ್ತಿದ್ದಾರೆ. ಪರಿಸ್ಥಿತಿಗೆ ತಕ್ಕ ಹಾಗೆ ಬ್ಯಾಟಿಂಗ್‌ ಪ್ರದರ್ಶನವನ್ನೂ ನೀಡುತ್ತಿದ್ದಾರೆ. ನಾಯಕತ್ವದ ವಿಚಾರಕ್ಕೆ ಬಂದಾಗ ಹೆಚ್ಚು ಆತ್ಮವಿಶ್ವಾಸ ಪ್ರದರ್ಶಿಸುತ್ತಿದ್ದಾರೆ. ಮೈದಾನದಲ್ಲಿ ಕೂಲ್‌ ಕ್ಯಾಪ್ಟನ್‌ ಆಗುವ ಜತೆಗೆ ಜಿದ್ದಿಗೆ ಬಿದ್ದು ಹೋರಾಡುವ ಛಾತಿಯನ್ನೂ ಪ್ರದರ್ಶಿಸುತ್ತಿದ್ದಾರೆ. ಈ ನಿಟ್ಟಿನಲ್ಲೂ ಪಾಂಡ್ಯ ಭವಿಷ್ಯದ ನಾಯಕರಾಗಬೇಕು ಎಂಬುದು ಕ್ರಿಕೆಟ್‌ ಕಾರಿಡಾರ್‌ನೊಳಗಿನ ಚರ್ಚೆ.

ಇದನ್ನೂ ಓದಿ| Ireland Tour | ಟೀಮ್‌ ಇಂಡಿಯಾಕ್ಕೆ ಹಾರ್ದಿಕ್‌ ಪಾಂಡ್ಯ ಕ್ಯಾಪ್ಟನ್‌

Exit mobile version