ಮುಂಬಯಿ : ಬಿಸಿಸಿಸಿ ಭಾನುವಾರ ತಂಡದ ಪ್ರದರ್ಶನದ (Team india) ಪರಾಮರ್ಶೆ ಸಭೆ ನಡೆಸಿದ್ದು, ಈ ಹಿಂದಿನ ಸೋಲುಗಳು ಹಾಗೂ 2023ರ ಸವಾಲುಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ವೇಳೆ ಮುಂದಿನ ವಿಶ್ವ ಕಪ್ ಗೆಲುವಿನ ಉದ್ದೇಶದೊಂದಿಗೆ 20 ಆಟಗಾರರ ಪಟ್ಟಿ ಸಿದ್ಧಪಡಿಸಲಾಗಿದೆ. ಅವರು ಮುಂದಿನ ವಿಶ್ವ ಕಪ್ ಗೆದ್ದುಕೊಡಬಲ್ಲ ವೀರ ಸೇನಾನಿಯಾಗಿರಲಿದ್ದಾರೆ. ಹಾಗಾದರೆ ಮುಂದಿನ ವಿಶ್ವ ಕಪ್ಗೆ ತಂಡವನ್ನು ಬಿಸಿಸಿಐ ಪ್ರಕಟಿಸುವುದಿಲ್ಲವೇ?. ಖಂಡಿತಾ ಪ್ರಕಟಿಸುತ್ತದೆ. ಹಾಗಾದರೆ ಈ ಆಟಗಾರರನ್ನು ಆಯ್ಕೆ ಮಾಡಿರುವುದು ಯಾಕೆ?
2022ರಲ್ಲಿ ಭಾರತ ತಂಡದ ಆಟಗಾರರು ಗಾಯದ ಸಮಸ್ಯೆಯಿಂದ ನಲುಗಿ ಹೋಗಿದ್ದರು. ಪ್ರಮುಖ ಟೂರ್ನಿಗಳಿಗೆ ಅವರ ಲಭ್ಯತೆ ಇರಲಿಲ್ಲ. ವಿಶ್ವ ಕಪ್ ಹಾಗೂ ಏಷ್ಯಾ ಕಪ್ನಲ್ಲಿ ಭಾರತದ ಸೋಲಿಗೆ ಇದು ಕಾರಣವೂ ಆಗಿತ್ತು. ಇಂಥ ಸಮಸ್ಯೆಗಳು ಪುನರಾವರ್ತನೆಯಾಗಬಾರದು ಎಂಬ ಉದ್ದೇಶದಿಂದ 20 ಆಟಗಾರರ ಪಟ್ಟಿಯನ್ನು ಬಿಸಿಸಿಐ ಸಿದ್ಧಗೊಳಿಸಿದೆ. ಐಪಿಎಲ್ ಸೇರಿದಂತೆ ಎಲ್ಲ ಮಾದರಿಯ ಕ್ರಿಕೆಟ್ ಮೂಲಕ ಅತಿಯಾದ ಒತ್ತಡಕ್ಕೆ ಒಳಗಾಗದೇ ಪ್ರಮುಖ ಟೂರ್ನಿಗಳಿಗೆ ಲಭ್ಯರಾಗುವಂತೆ ಮಾಡುವುದೇ ಬಿಸಿಸಿಐ ಯೋಜನೆಯಾಗಿದೆ.
ಬಿಸಿಸಿಐ ಸಿದ್ಧಪಡಿಸಿರುವ 20 ಆಟಗಾರರ ಪಟ್ಟಿಯು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ತಲುಪಲಿದೆ. ಅಲ್ಲಿ ಅವರನ್ನು ಮುಂದಿನ ವರ್ಷದ ಸರಣಿಗಾಗಿ ಸಿದ್ಧಪಡಿಸಲಾಗುತ್ತದೆ. ಪಟ್ಟಿಯಲ್ಲಿರುವ ಆಟಗಾರರು ಐಪಿಎಲ್ನಲ್ಲಿ ಹೆಚ್ಚು ಪಂದ್ಯಗಳನ್ನು ಆಡದಂತೆ ನೋಡಿಕೊಳ್ಳುವುದು. ಅದಕ್ಕಾಗಿ ಐಪಿಎಲ್ ಫ್ರಾಂಚೈಸಿಗಳ ಜತೆ ಮಾತುಕತೆ ನಡೆಸುವುದು ಎನ್ಸಿಎ ಹೊಣೆಗಾರಿಕೆಯಾಗಿದೆ.
ಪಟ್ಟಿಯಲ್ಲಿರುವ ಆಟಗಾರರನ್ನು ಮುಂದಿನ ವರ್ಷದ ಏಕ ದಿನ ಸರಣಿಯ ಪಂದ್ಯಗಳಲ್ಲಿ ನಿಯಮಿತವಾಗಿ ಆಡಿಸಲಾಗುತ್ತದೆ. ರೊಟೇಷನ್ ಪದ್ಧತಿ ಪ್ರಕಾರ ಸರಣಿಗೆ ಕೆಲವರಿಗೆ ಅವಕಾಶ ನೀಡುವಂತೆ ಅವರನ್ನು ವಿಶ್ವ ಕಪ್ ವೇಳೆಗೆ ಸಂಪೂರ್ಣವಾಗಿ ಸಜ್ಜಾಗಿರುವಂತೆ ನೋಡಿಕೊಳ್ಳುವುದು ಬಿಸಿಸಿಐ ಯೋಜನೆಯಾಗಿದೆ. ಕೊನೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ವಿಶ್ವ ಕಪ್ ಆಡುವ ತಂಡದಲ್ಲಿ ಅವಕಾಶ ನೀಡುವುದು ಬಿಸಿಸಿಐ ಯೋಜನೆಯಾಗಿದೆ.
ಇದನ್ನೂ ಓದಿ | INDvsPAK | ಪಾಕಿಸ್ತಾನ ವಿರುದ್ಧ ದ್ವಿಪಕ್ಷೀಯ ಸರಣಿಯಲ್ಲಿ ಆಡುವುದಿಲ್ಲ, ಬಿಸಿಸಿಐ ಸಭೆಯಲ್ಲಿ ಸ್ಪಷ್ಟನೆ