Site icon Vistara News

Ravichandran Ashwin: 2012ರ ಇಂಗ್ಲೆಂಡ್ ಸರಣಿ ಸೋಲು ಮಹತ್ವದ ತಿರುವು: ಅಶ್ವಿನ್

r ashwin

ಧರ್ಮಶಾಲಾ: 100ನೇ ಟೆಸ್ಟ್ ಪಂದ್ಯದ ಹೊಸ್ತಿಲಲ್ಲಿರುವ ಭಾರತೀಯ ಕ್ರಿಕೆಟ್ ತಂಡದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್(Ravichandran Ashwin) ಅವರು ತಮ್ಮ ಟೆಸ್ಟ್​ ವೃತ್ತಿ ಬದುಕಿನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. 2012ರಲ್ಲಿ ಇಂಗ್ಲೆಂಡ್ ವಿರುದ್ಧ ಎದುರಾದ ಸರಣಿ ಸೋಲು ತನ್ನ ಕ್ರಿಕೆಟ್ ಜೀವನದಲ್ಲಿ ಮಹತ್ವದ ತಿರುವು ಪಡೆದುಕೊಂಡಿತು ಎಂದು ಹೇಳಿದ್ದಾರೆ.

5ನೇ ಟೆಸ್ಟ್​ಗೂ ಮುನ್ನ ಮಂಗಳವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶ್ವಿನ್​, “ನಾನು ಇಂದು ಈ ಸ್ಥಿತಿಯಲ್ಲಿರಲು ಕಾರಣ, 2012ರಲ್ಲಿ ಇಂಗ್ಲೆಂಡ್​ ವಿರುದ್ಧದ ಎದುರಾದ ಸರಣಿ ಸೋಲು. ಈ ಸೋಲಿನಿಂದ ನಾನು ಹಲವು ಪಾಠ ಕಲಿತೆ. ಜತೆಗೆ ಅನೇಕ ತಪ್ಪುಗಳನ್ನು ತಿದ್ದಿಕೊಂಡು ಸರಿಪಡಿಸಿಕೊಂಡೆ. ಇದಾದ ಬಳಿಕ ನಾನು ಹಿಂದಿರುಗಿ ನೋಡಿಲ್ಲ. ಅಂದಿನ ಸರಣಿಯಲ್ಲಿ ಗೆಲ್ಲುತ್ತಿದ್ದರೆ. ನನ್ನಲ್ಲಿ ಕ್ರಿಕೆಟ್​ ದಾಹ ಕಡಿಮೆಯಾಗುತ್ತಿತ್ತೋ ಏನೊ” ಎಂದು ಹೇಳಿದರು. ಒಟ್ಟಾರೆಯಾಗಿ ಅಶ್ವಿನ್​ ಪಾಲಿಗೆ ಅಂದಿನ ಸರಣಿ ಸೋಲೇ ಅವರ ಯಶಸ್ಸಿಗೆ ಕಾರಣವಾಗಿದೆ.

ಟೆಸ್ಟ್ ಕ್ರಿಕೆಟ್ ಜೀವನದಲ್ಲಿ ಅತ್ಯುತ್ತಮ ನಿರ್ವಹಣೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಶ್ವಿನ್​, 2018-19ರಲ್ಲಿ ಇಂಗ್ಲೆಂಡ್ ವಿರುದ್ಧದ ಪ್ರದರ್ಶನ ತಮ್ಮ ಪಾಲಿಗೆ ಸ್ಮರಣೀಯ ಎಂದು ಹೇಳಿದರು. ಬರ್ಮಿಂಗ್‌ಹ್ಯಾಮ್ ನಲ್ಲಿ ನಟೆಸಿದ್ದ ಈ ಟೆಸ್ಟ್ ಪಂದ್ಯದಲ್ಲಿ ಅಲೆಸ್ಟಾರ್ ಕುಕ್ ಹಾಗೂ ಜೋ ರೂಟ್ ಸೇರಿದಂತೆ ಒಟ್ಟು ಏಳು ವಿಕೆಟ್‌ಗಳನ್ನು ಅಶ್ವಿನ್ ಕಬಳಿಸಿದ್ದರು.

ಅಶ್ವಿನ್​ ಅವರು 5ನೇ ಟೆಸ್ಟ್​ನಲ್ಲಿ(India vs England 5th Test) ಕಣಕ್ಕಿಳಿಯುವ ಮೂಲಕ 100ನೇ ಟೆಸ್ಟ್‌ ಪಂದ್ಯವಾಡಿದ 13ನೇ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ಹೀಗಾಗಿ ಅವರಿಗೆ ಪಂದ್ಯ ಆರಂಭಕ್ಕೂ ಮುನ್ನ ವಿಶೇಷ ಗೌರವ ಸೂಚಿಸುವ ಕಾರ್ಯಕ್ರಮವೊಂದನ್ನು ಬಿಸಿಸಿಐ ಏರ್ಪಡಿಸಿದೆ. ಧರ್ಮಾಶಾಲಾ ಟೆಸ್ಟ್​ನಲ್ಲಿ ನಾಯಕ ರೋಹಿತ್‌ ಶರ್ಮ ಅವರು ಶತಕದ ಟೆಸ್ಟ್​ ಸಾಧಕ ಅಶ್ವಿ‌ನ್‌ ಅವರಿಗೆ ತಂಡವನ್ನು ಅಂಗಳಕ್ಕೆ ಮುನ್ನಡೆಸುವ ಗೌರವ ನೀಡಲಿದ್ದಾರೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.

ಇದನ್ನೂ ಓದಿ IND Vs ENG 5th Test: 100ನೇ ಟೆಸ್ಟ್​ನಲ್ಲಿ ಕಣಕ್ಕಿಳಿಯಲು ಸಜ್ಜಾದ ಬೇರ್‌ ಸ್ಟೊ, ಅಶ್ವಿನ್

ಕಳೆದ 13 ವರ್ಷಗಳಿಂದ ಭಾರತೀಯ ಟೆಸ್ಟ್‌ ತಂಡದ ಭಾಗವಾಗಿರುವ ಅಶ್ವಿ‌ನ್‌ ಸದ್ಯ 99* ಟೆಸ್ಟ್‌ಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಮೂರನೇ ಟೆಸ್ಟ್​ ಪಂದ್ಯದಲ್ಲಿ ಅವರು 500 ಟೆಸ್ಟ್​ ವಿಕೆಟ್​ಗಳನ್ನು ಪೂರ್ತಿಗೊಳಿಸಿದ ಸಾಧನೆ ಕೂಡ ಮಾಡಿದ್ದರು. ಸದ್ಯ ಅವರ ಬತ್ತಳಿಕೆಯಲ್ಲಿ 507 ವಿಕೆಟ್​ಗಳಿವೆ. ಅತ್ಯಧಿಕ 35 ಸಲ ಇನ್ನಿಂಗ್ಸ್‌ ಒಂದರಲ್ಲಿ 5 ಪ್ಲಸ್‌ ವಿಕೆಟ್‌ ಉರುಳಿಸಿದ ಭಾರತೀಯ ದಾಖಲೆ ಕೂಡ ಇವರ ಹೆಸರಿನಲ್ಲಿದೆ. 8 ಬಾರಿ 10ಕ್ಕಿಂತ ಅಧಿಕ ವಿಕೆಟ್​ ಕಿತ್ತ ದಾಖಲೆ ಕೂಡ ಇವರದ್ದಾಗಿದೆ. ಬೌಲಿಂಗ್​ ಮಾತ್ರವಲ್ಲದೆ ಬ್ಯಾಟಿಂಗ್​ನಲ್ಲಿಯೂ ಉತ್ತಮ ಪ್ರದರ್ಶನ ತೋರಿರುವ ಅಶ್ವಿನ್​ 3 ಸಾವಿರಕ್ಕೂ ಅಧಿಕ ರನ್​ ಬಾರಿಸಿದ್ದಾರೆ. ಇದರಲ್ಲಿ 5 ಶತಕಗಳು ಕೂಡ ಒಳಗೊಂಡಿದೆ. 14 ಅರ್ಧಶತಕ ಸೇರಿದೆ.

Exit mobile version