ಬಾರ್ಬಡೋಸ್: ವೆಸ್ಟ್ ಇಂಡೀಸ್ (ind vs wi) ವಿರುದ್ಧದ ಎರಡನೇ ಏಕದಿನ ಪಂದ್ಯದ ಟಾಸ್ ವೇಳೆ ಹಾರ್ದಿಕ್ ಪಾಂಡ್ಯ ಕಾಣಿಸಿಕೊಂಡ ತಕ್ಷಣ ಭಾರತ ತಂಡದ ಅಭಿಮಾನಿಗಳಿಗೆ ಅಚ್ಚರಿ ಮೂಡಿತು. ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ಅವರು ಏಕಾಏಕಿ ತಂಡದ ನಾಯಕತ್ವ ವಹಿಸಿದ್ದು ಕಂಡು ಬಂತು. ಈ ವರ್ಷದ ಮಾರ್ಚ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಹಾರ್ದಿಕ್ ಭಾರತ ತಂಡವನ್ನು ಮುನ್ನಡೆಸಿದ್ದರು. ಆದರೆ ರೋಹಿತ್ ಅನುಪಸ್ಥಿತಿ ಈ ಬಾರಿ ಖಂಡಿತವಾಗಿಯೂ ಅಚ್ಚರಿ ಮೂಡಿಸಿತು. ಟಾಸ್ ಮುಗಿದ ತಕ್ಷಣ ಹಾರ್ದಿಕ್ ಪಾಂಡ್ಯ ಅವರು ಅದಕ್ಕೆ ಕಾರಣವನ್ನೂ ಕೊಟ್ಟಿದ್ದಾರೆ. ಅವರಿಬ್ಬರೂ ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಅವರಿಗೆ ವಿಶ್ರಾಂತಿ ನೀಡುವ ಉದ್ದೇಶದಿಂದ ಈ ಪಂದ್ಯದಲ್ಲಿ ಆಡಿಲ್ಲ ಎಂದ ಹೇಳಿದರು.
ಏಷ್ಯಾ ಕಪ್ ಮತ್ತು ವಿಶ್ವಕಪ್ನಂಥ ದೊಡ್ಡ ಟೂರ್ನಿಗಳಿಗೆ ಮುಂಚಿತವಾಗಿ ತಂಡದ ಆಟಗಾರರನ್ನು ಪರೀಕ್ಷಿಸುವ ಗುರಿಯನ್ನು ಟೀಮ್ ಮ್ಯಾನೇಜ್ಮೆಂಟ್ ಹೊಂದಿದೆ ಎಂಬುದು ಕೂಡು ಈ ಅನುಪಸ್ಥಿತಿಯಿಂದ ಬಹಿರಂಗಗೊಂಡಿತು. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸತತವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಅವರು ಈ ಪಂದ್ಯಕ್ಕೆ ವಿಶ್ರಾಂತಿ ಪಡೆಯಬೇಕು ಮತ್ತು ಮೂರನೇ ಏಕದಿನ ಪಂದ್ಯಕ್ಕೆ ಸಿದ್ಧಗೊಳ್ಳಬೇಕು ಎಂದು ನಾವು ಭಾವಿಸಿದ್ದೇವೆ. ಆದ್ದರಿಂದ, ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಇದೇ ವೇಳೆ ಇತರ ಆಟಗಾರರಿಗೆ ಅವಕಾಶವನ್ನು ನೀಡಲಾಗಿದೆ “ಎಂದು ಹಾರ್ದಿಕ್ ಹೇಳಿದರು.
ರೋಹಿತ್ ಶರ್ಮಾ ಮತ್ತು ಕೊಹ್ಲಿ ಇಬ್ಬರೂ ವರ್ಷದ ಆರಂಭದಿಂದಲೂ ಆಡುತ್ತಲೇ ಇದ್ದಾರೆ. ನಾಲ್ಕು ಟೆಸ್ಟ್ ಸರಣಿ ಮತ್ತು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಭಾಗವಹಿಸುವ ಜತೆಗೆ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಋತುವಿನ ನಂತರ ಇವರಿಬ್ಬರು 2023ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡಿದ್ದರು.
ಇದನ್ನೂ ಓದಿ : Ashes 2023 : ಬೇರೆಯವರ ಜೆರ್ಸಿ ಧರಿಸಿಕೊಂಡು ಆಡಲು ಇಳಿದ ಇಂಗ್ಲೆಂಡ್ ಆಟಗಾರರು; ಅದಲು ಬದಲಾಗಿದ್ದು ಯಾಕೆ?
ಜೂನ್ನಲ್ಲಿ ರೋಹಿತ್ ಶರ್ಮಾ ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಿದರು, ಕೊಹ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಪ್ರಮುಖ ಫೈನಲ್ನಲ್ಲಿ ಕಾಣಿಸಿಕೊಂಡಿದ್ದರು. ಆದಾಗ್ಯೂ, ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಮರಳುವ ಮೊದಲು ಟೀಮ್ ಇಂಡಿಯಾ ಒಂದು ತಿಂಗಳ ಕಾಲ ಆಟದಿಂದ ದೂರ ಉಳಿದಿತ್ತು. ಏಕದಿನ ಸರಣಿಗೆ ಮೊದಲು ಎರಡು ಟೆಸ್ಟ್ ಪಂದ್ಯಗಳಲ್ಲಿ ಭಾಗವಹಿಸಿತ್ತು.
ಬಾರ್ಬಡೋಸ್ನಲ್ಲಿ ನಡೆಯಲಿರುವ ಎರಡನೇ ಪಂದ್ಯಕ್ಕೆ ರೋಹಿತ್ ಮತ್ತು ಕೊಹ್ಲಿ ಬದಲಿಗೆ ವಿಕೆಟ್ ಕೀಪರ್- ಬ್ಯಾಟರ್ ಸಂಜು ಸ್ಯಾಮ್ಸನ್ ಮತ್ತು ಆಲ್ರೌಂಡರ್ ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹಾರ್ದಿಕ್ ಬಹಿರಂಗಪಡಿಸಿದರು. ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದ್ದು, ಈ ವಾರದ ಆರಂಭದಲ್ಲಿ ಇದೇ ಮೈದಾನದಲ್ಲಿ ಐದು ವಿಕೆಟ್ಗಳ ಗೆಲುವು ದಾಖಲಿಸಿತ್ತು.