Site icon Vistara News

WI vs ENG: ಇಂಗ್ಲೆಂಡ್​ ವಿರುದ್ಧ 25 ವರ್ಷಗಳ ಬಳಿಕ ಸೇಡು ತೀರಿಸಿಕೊಂಡ ವೆಸ್ಟ್​ ಇಂಡೀಸ್​

England vs West Indies, 3rd ODI

ಬಾರ್ಬಡೊಸ್: ತವರಿನಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ತಂಡ(WI vs ENG) ಪ್ರವಾಸಿ ಇಂಗ್ಲೆಂಡ್​ ವಿರುದ್ಧ 4 ವಿಕೆಟ್​ಗಳ ಗೆಲುವು ಸಾಧಿಸಿ ಸರಣಿ ಗೆದ್ದ ಸಾಧನೆ ಮಾಡಿದೆ. ಈ ಮೂಲಕ 25 ವರ್ಷಗಳ ಸುದೀರ್ಘ ಅಂತರದ ಬಳಿಕ ವಿಂಡೀಸ್​ ತನ್ನ ನೆಲದಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಸರಣಿ ಗೆದ್ದ ದಾಖಲೆ ಬರೆದಿದೆ.

ಸರಣಿಯಲ್ಲಿ ಮೊದಲ ಪಂದ್ಯ ಗೆದ್ದಿದ್ದ ವಿಂಡೀಸ್​ ದ್ವಿತೀಯ ಪಂದ್ಯದಲ್ಲಿ ಸೋಲು ಕಂಡಿತ್ತು. ಹೀಗಾಗಿ ಸರಣಿ 1-1 ಸಮಬಲಗೊಂಡಿತ್ತು. ಅಂತಿಮ ಮತ್ತು ಸರಣಿ ನಿರ್ಣಾಯಕ ಪಂದ್ಯದಲ್ಲಿ ವಿಂಡೀಸ್​ ಮತ್ತೆ ಗೆಲುವು ಸಾಧಿಸಿ ಸರಣಿಯನ್ನು ಗೆದ್ದು ಬೀಗಿದೆ.

ಶನಿವಾರ ರಾತ್ರಿ ನಡೆದ ಇತ್ತಂಡಗಳ ಈ ಪಂದ್ಯ ಮಳೆಯ ಕಾರಣದಿಂದ 40 ಓವರ್​ಗೆಗೆ ಇಳಿಸಲ್ಪಟ್ಟಿತು. ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಇಂಗ್ಲೆಂಡ್ 9 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತು. ಜವಾಬಿತ್ತ ವೆಸ್ಟ್​ ವಿಂಡೀಸ್ 31.4 ಓವರ್​ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 191 ರನ್​ ಬಾರಿಸಿ ಜಯ ಸಾಧಿಸಿತು. ಕಳೆದ ಏಕದಿನ ವಿಶ್ವಕಪ್​ನಲ್ಲಿ ನೀರಸ ಪ್ರದರ್ಶನ ನೀಡಿದ್ದ ಇಂಗ್ಲೆಂಡ್ ತಂಡ ವಿಂಡೀಸ್​ ವಿರುದ್ಧವೂ ಇದೇ ಪ್ರದರ್ಶನ ತೋರಿತು.

ಇಂಗ್ಲೆಂಡ್ ತಂಡದ ಪರ ಡಕ್ಕೆಟ್ 71 ರನ್ ಗಳಿಸಿದರೆ, ಲಿವಿಂಗ್​ಸ್ಟೋನ್ 45 ರನ್ ಮಾಡಿದರು. ನಾಯಕ ಜಾಸ್​ ಬಟ್ಲರ್ ಅವರ ವೈಫಲ್ಯತೆ ಇಲ್ಲಿಯೂ ಮುಂದುವರಿಯಿತು. ಅವರು ಗೋಲ್ಡನ್ ಡಕ್​ಗೆ ಬಲಿಯಾದರು. ವಿಂಡೀಸ್ ಪರ ಮ್ಯಾಥ್ಯೂ ಫೊರ್ಡೆ ಮತ್ತು ಅಲ್ಜಾರಿ ಜೋಸೆಫ್ ತಲಾ ಮೂರು ವಿಕೆಟ್ ಕಿತ್ತರೆ, ಶೆಫರ್ಡ್ ಎರಡು ವಿಕೆಟ್ ಪಡೆದರು.

ಚೇಸಿಂಗ್​ ವೇಳೆ ಮಳೆಯ ಕಾರಣದಿಂದ ವಿಂಡೀಸ್​ಗೆ 34 ಓವರ್ ಗಳಲ್ಲಿ 188 ರನ್ ಗುರಿ ನೀಡಲಾಯಿತು. ವಿಂಡೀಸ್ ಪರ ಅಥನಾಜೆ 45 ರನ್, ಕೀಸಿ ಕಾರ್ಟಿ 50 ರನ್ ಗಳಿಸಿದರು. ರೊಮಾರಿಯೊ ಶೆಫರ್ಡ್ ಅವರು ಅಜೇಯ 41 ರನ್ ಗಳಿಸಿದರು.

2 ವರ್ಷಗಳ ಬಳಿಕ ತಂಡ ಸೇರಿದ ರಸೆಲ್​

ಇಂಗ್ಲೆಂಡ್​ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಗೆದ್ದು ಬೀಗಿದ ವೆಸ್ಟ್​ ಇಂಡೀಸ್​ ಇನ್ನು ಟಿ20 ಸರಣಿಯನ್ನಾಡಲು ಸಜ್ಜಾಗಿದೆ. ಅಚ್ಚರಿ ಎಂದರೆ ವಿಸ್ಫೋಟಕ ಬ್ಯಾಟರ್​ ಆಂಡ್ರೆ ರಸೆಲ್ ಅವರು 2 ವರ್ಷಗಳ ಬಳಿಕ ತಂಡಕ್ಕೆ ಎಂಟ್ರಿಕೊಟ್ಟಿದ್ದಾರೆ. ಆಂಡ್ರೆ ರಸೆಲ್ ಅವರು 2021 ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್‌ ಪರ ಕೊನೆ ಪಂದ್ಯ ಆಡಿದ್ದರು. ಇದಾದ ಬಳಿಕ ಅವರು ತಂಡದಿಂದ ಹೊರಗುಳಿದ್ದರು. ಇದೀಗ ಮತ್ತೆ ತಂಡದಲ್ಲಿ ಸ್ಥಾನ ಸಿಕ್ಕಿದೆ. ಇವರ ಜತೆ ಮ್ಯಾಥ್ಯೂ ಫೋರ್ಡ್ ಕೂಡ ಅವಕಾಶ ಪಡೆದಿದ್ದಾರೆ.

Exit mobile version