ಗಯಾನಾ: ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಆತಿಥೇಯ ವೆಸ್ಟ್ ಇಂಡೀಸ್(WI vs UGA) ತಂಡ ಉಗಾಂಡ ವಿರುದ್ಧ ಭರ್ಜರಿ 134 ರನ್ಗಳ ಗೆಲುವು ದಾಖಲಿಸಿದೆ. ಉಗಾಂಡ ಕೇವಲ 39 ರನ್ಗಳಿಗೆ ಆಲೌಟ್ ಆಯಿತು. ಇದು ಟಿ20 ವಿಶ್ವಕಪ್ ಟೂರ್ನಿಯಲ್ಲಿ(T20 World Cup 2024) ದಾಖಲಾದ ಕನಿಷ್ಠ ಮೊತ್ತದ 2ನೇ ನಿದರ್ಶನ. ಇದಕ್ಕೂ ಮುನ್ನ 2014ರಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ನೆದರ್ಲೆಂಡ್ಸ್ 39 ರನ್ಗೆ ಆಲೌಟ್ ಆಗಿತ್ತು.
ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ಏಕಪಕ್ಷೀಯವಾಗಿ ಸಾಗಿದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ 5 ವಿಕೆಟ್ಗೆ 173 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಉಂಗಾಡ, ಅಕೀಲ್ ಹೊಸೈನ್ ಅವರ ಘಾತಕ ಬೌಲಿಂಗ್ ದಾಳಿಗೆ ತರಗೆಲೆಯಂತೆ ಉದುರಿ ಕೇವಲ 39 ರನ್ ಗಳಿಗೆ ಸರ್ವಪತನ ಕಂಡಿತು. ಹೊಸೈನ್ 4 ಓವರ್ ಬೌಲಿಂಗ್ ನಡೆಸಿ ಕೇವಲ 11 ರನ್ ವೆಚ್ಚದಲ್ಲಿ 5 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಉಗಾಂಡ ಪರ ಎರಡಂಕಿ ಮೊತ್ತ ದಾಟಿದ್ದು ಕೇವಲ ಒಬ್ಬ ಬ್ಯಾಟರ್ ಮಾತ್ರ. 9ನೇ ಕ್ರಮಾಂಕದಲ್ಲಿ ಆಡಲಿಳಿದ ಜುಮಾ ಮಿಯಾಗಿ ಅಜೇಯ 13 ರನ್ ಬಾರಿಸಿದರು. ಉಳಿದೆಲ್ಲರು ಒಂದಂಕಿಗೆ ಸೀಮಿತರಾದರು. ಮೂರು ಮಂದಿ ಶೂನ್ಯ ಸಂಕಟಕ್ಕೆ ಸಿಲುಕಿದರು.
ಇದನ್ನೂ ಓದಿ AUS vs ENG: ಆಸೀಸ್ ಬ್ಯಾಟಿಂಗ್ ಆರ್ಭಟಕ್ಕೆ ಮಣಿದ ಹಾಲಿ ಚಾಂಪಿಯನ್ ಇಂಗ್ಲೆಂಡ್
ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ಪರ ಆರಂಭಿಕ ಆಟಗಾರ ಬ್ರಾಂಡನ್ ಕಿಂಗ್(13) ಹೊರತುಪಡಿಸಿ ಉಳಿದೆಲ್ಲ ಬ್ಯಾಟರ್ಗಳು ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಗಮನಸೆಳೆದರು. ಜಾನ್ಸನ್ ಚಾರ್ಲ್ಸ್ 4 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 44 ರನ್ ಬಾರಿಸಿ ತಂಡದ ಪರ ಅತ್ಯಧಿಕ ರನ್ ಬಾರಿಸಿದ ಆಟಗಾರ ಎನಿಸಿಕೊಂಡರು. ಉಳಿದಂತೆ ಆಲ್ರೌಂಡರ್ ಆ್ಯಂಡ್ರೆ ರಸೆಲ್ ಅಜೇಯ 30 ರನ್ ಬಾರಿಸಿದರು. ನಾಯಕ ಪೋವೆಲ್(23), ನಿಕೋಲಸ್ ಪೂರನ್(22), ಶೆರ್ಫೇನ್ ರುದರ್ಫೋರ್ಡ್(22) ರನ್ಗಳ ಕೊಡುಗೆ ನೀಡಿದರು.
ಇದನ್ನೂ ಓದಿ
‘ಸಿ’ ಗುಂಪಿನಲ್ಲಿರುವ ವೆಸ್ಟ್ ಇಂಡೀಸ್ ತಂಡ ಸತತ 2 ಗೆಲುವು ದಾಖಲಿಸಿ ಸದ್ಯ ಅಂಕಪಟ್ಟಿಯಲ್ಲಿ 2ನೇ ಸ್ಥಾನಿಯಾಗಿದೆ. ಅಫಘಾನಿಸ್ತಾನ ಮೊದಲ ಸ್ಥಾನದಲ್ಲಿದೆ. ಉಭಯ ತಂಡಗಳು ಇನ್ನೊಂದು ಪಂದ್ಯ ಗೆದ್ದರೆ ಸೂಪರ್-8 ಹಂತಕ್ಕೇರಲಿದೆ. ಇದೇ ಗ್ರೂಪ್ನಲ್ಲಿರುವ ನ್ಯೂಜಿಲ್ಯಾಂಡ್ ಕಳೆದ ಪಂದ್ಯದಲ್ಲಿ ಆಫ್ಘಾನ್ ವಿರುದ್ಧ ಹೀನಾಯ ಸೋಲು ಕಂಡು ಕೊನೆಯ ಸ್ಥಾನದಲ್ಲಿದೆ.
ಟಿ20 ವಿಶ್ವಕಪ್ನಲ್ಲಿ ಕನಿಷ್ಠ ಮೊತ್ತದ ಪಂದ್ಯಗಳು
39 ರನ್ಗೆ ಶೀಲಂಕಾ ವಿರುದ್ಧ ನೆದರ್ಲೆಂಡ್ಸ್ ಆಲೌಟ್(2014)
39 ರನ್ಗೆ ವೆಸ್ಟ್ ಇಂಡೀಸ್ ವಿರುದ್ಧ ಉಗಾಂಡ ಆಲೌಟ್(2024)
44 ರನ್ಗೆ ಶ್ರೀಲಂಕಾ ವಿರುದ್ಧ ನೆದರ್ಲೆಂಡ್ಸ್ ಆಲೌಟ್(2021)
55 ರನ್ಗೆ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ಆಲೌಟ್(2021)