ನವ ದೆಹಲಿ: ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ಅವರು ತಮಗೆ ತಾವೇ ಒಂದು ಸವಾಲು ಹಾಕಿಕೊಂಡಿದ್ದಾರೆ. ‘ನನ್ನ ವಿರುದ್ಧ ಮಹಿಳಾ ಕುಸ್ತಿಪಟುಗಳು ಮಾಡುತ್ತಿರುವ ಲೈಂಗಿಕ ದೌರ್ಜನ್ಯದ ಆರೋಪ ಸತ್ಯವೆಂದು ಸಾಬೀತಾದರೆ ನನಗೆ ನಾನೇ ನೇಣು ಬಿಗಿದುಕೊಳ್ಳುತ್ತೇನೆ’ ಎಂದು ಶಪಥ ಮಾಡಿದ್ದಾರೆ.. ವಿಡಿಯೊವೊಂದರಲ್ಲಿ ಅವರು ಹೀಗೆ ಹೇಳಿಕೊಂಡಿದ್ದಾರೆ.
’ನನ್ನ ವಿರುದ್ಧದ ಲೈಂಗಿಕ ಶೋಷಣೆ ಪ್ರಕರಣವನ್ನು ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ನಾನು ತುಂಬ ಏನನ್ನೂ ಮಾತನಾಡುವುದಿಲ್ಲ. ಕುಸ್ತಿಪಟುಗಳು ನನ್ನ ವಿರುದ್ಧ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಅವರ ಬಳಿ ಏನಾದರೂ ವಿಡಿಯೊ, ಫೋಟೋ ಮತ್ತಿತರ ಸಾಕ್ಷಿ ಇದೆಯಾ? ಬ್ರಿಜ್ ಭೂಷಣ್ ಶರಣ್ ಸಿಂಗ್ ಒಬ್ಬ ರಾಕ್ಷಸನಾ? ರಾವಣನಾ ಎಂದು ನೀವು ಕುಸ್ತಿ ಕ್ಷೇತ್ರದಲ್ಲಿ ಇರುವ ಯಾರನ್ನಾದರೂ ಪ್ರಶ್ನಿಸಿ ನೋಡಿ, ಉತ್ತರ ಏನು ಬರುತ್ತದೆ ಎಂಬುದು ನಿಮಗೇ ಗೊತ್ತಾಗುತ್ತದೆ’ ಎಂದು ಅವರು ಹೇಳುವುದನ್ನು ವಿಡಿಯೊದಲ್ಲಿ ಕೇಳಬಹುದು. ಅಷ್ಟೇ ಅಲ್ಲ ‘ಈಗಿಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರಲ್ಲ ಒಂದಷ್ಟು ಮಂದಿ ಕುಸ್ತಿಪಟುಗಳು, ಅವರ ಹೊರತಾಗಿ ಇನ್ಯಾರನ್ನೇ ಕೇಳಿ. ನಾನ್ಯಾರು? ಏನು ಎಂದು ಹೇಳುತ್ತಾರೆ. ನಾನು ಕಳೆದ 11ವರ್ಷಗಳಿಂದ ನನ್ನ ಜೀವನವನ್ನು ಕುಸ್ತಿ ವಲಯಕ್ಕಾಗಿ ಮೀಸಲಿಟ್ಟಿದ್ದೇನೆ’ ಎಂದಿದ್ದಾರೆ.
ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ, ಬಿಜೆಪಿ ಸಂಸದನೂ ಆಗಿರುವ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲ್ಲಿಕ್ ಇತರರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಇವರಿಗೆ ಬೆಂಬಲವಾಗಿ ಬಜರಂಗ್ ಪೂನಿಯಾ ಸೇರಿ ಹಲವು ಕುಸ್ತಿಪಟುಗಳು ನಿಂತಿದ್ದಾರೆ. ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅವರು ತಮ್ಮ ಕುಸ್ತಿ ಒಕ್ಕೂಟದ ಅಧ್ಯಕ್ಷನ ಸ್ಥಾನಕ್ಕೆ ಮತ್ತು ಸಂಸದನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ದೆಹಲಿಯ ಜಂತರ್ಮಂತರ್ನಲ್ಲಿ ಧರಣಿ ನಡೆಸುತ್ತಿದ್ದಾರೆ. ಬ್ರಿಜ್ ಭೂಷಣ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳದ ವಿನಃ ಪ್ರತಿಭಟನೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: ನಾನೇನು ಶಿಲಾಜಿತ್ ತಿಂದಿದ್ದೇನಾ?- ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಬ್ರಿಜ್ ಭೂಷಣ್ ಸಿಂಗ್ ಅಧಿಕ ಪ್ರಸಂಗತನದ ಉತ್ತರ
ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ದೆಹಲಿ ಪೊಲೀಸರು ಎರಡು ಎಫ್ಐಆರ್ ದಾಖಲಿಸಿದ್ದಾರೆ. ಅದರಲ್ಲಿ ಒಂದು ಪೋಕ್ಸೋ ಕಾಯ್ದೆಯಡಿ ದಾಖಲು ಮಾಡಲಾಗಿದೆ. ಆದರೆ ಬ್ರಿಜ್ ಭೂಷಣ್ ಸಿಂಗ್ ಅವರು ಆರೋಪವನ್ನು ತಳ್ಳಿಹಾಕಿದ್ದಾರೆ. ನಾನು ನನ್ನ ವಿರುದ್ಧದ ಆರೋಪ ಸಾಬಿತಾಗುವವರೆಗೂ ಹುದ್ದೆ ಬಿಡುವುದಿಲ್ಲ ಎಂದಿದ್ದಾರೆ. ನನ್ನ ವಿರುದ್ಧ ಎಂಥದ್ದೇ ತನಿಖೆ ನಡೆದರೂ ನಾನು ಸಹಕರಿಸುತ್ತೇನೆ. ಒಮ್ಮೆ ಆರೋಪ ಸಾಬೀತಾದರೆ ನೇಣು ಬಿಗಿದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಸದ್ಯ ಈ ಕೇಸ್ನ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ನಡೆಯುತ್ತಿದೆ.