ಪೊಚೆಫ್ಸ್ಟ್ರೂಮ್ : 19ರ ವಯೋಮಿತಿಯ ಮಹಿಳೆಯರ ಟಿ20 ವಿಶ್ವ ಕಪ್ (U19 Women’s T20 World Cup) ಭಾನುವಾರ (ಜನವರಿ 29) ನಡೆಯಲಿದ್ದು, ಉದ್ಘಾಟನಾ ಆವೃತ್ತಿಯ ಈ ಟೂರ್ನಿಯ ಚಾಂಪಿಯನ್ ಆಗುವ ನಿಟ್ಟಿನಲ್ಲಿ ಭಾರತ ತಂಡ ಯೋಜನೆ ರೂಪಿಸಿಕೊಂಡಿದೆ. ಶುಕ್ರವಾರ (ಜನವರಿ 27) ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು 8 ವಿಕೆಟ್ಗಳಿಂದ ಮಣಿಸಿದ ಭಾರತ ಫೈನಲ್ಗೇರಿದ್ದರೆ, ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ ರೋಚಕ ವಿಜಯ ಸಾಧಿಸಿ ಪ್ರಶಸ್ತಿ ಸುತ್ತಿಗೇರಿದೆ. ಈ ಎರಡೂ ತಂಡಗಳು ಉದ್ಘಾಟನಾ ಆವೃತ್ತಿಯ ವಿಶ್ವ ಕಪ್ನಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ.
ಎರಡು ವಾರಗಳಿಂದ ನಡೆದ ವನಿತೆಯರ 19ರ ವಯೋಮಿತಿಯ ತಂಡಗಳ ವಿಶ್ವ ಕಪ್ನಲ್ಲಿ ಇನ್ನು ಫೈನಲ್ ಪಂದ್ಯ ಮಾತ್ರ ಬಾಕಿ ಉಳಿದಿದೆ. ಭಾರತೀಯ ಕಾಲಮಾನ ಪ್ರಕಾರ ಸಂಜೆ 5.15 ನಿಮಿಷಕ್ಕೆ ಹಣಾಹಣಿ ಆರಂಭಗೊಳ್ಳಲಿದೆ.
ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಸಂಪೂರ್ಣವಾಗಿ ಮೇಲುಗೈ ಸಾಧಿಸಿತ್ತು. ಭಾರತ ತಂಡದ ಬೌಲರ್ಗಳು ಸತತವಾಗಿ ವಿಕೆಟ್ ಕಬಳಿಸುವ ಮೂಲಕ ಎದುರಾಳಿ ತಂಡ ಹೆಚ್ಚು ಮೊತ್ತ ಪೇರಿಸದಂತೆ ನೋಡಿಕೊಂಡರು. ಪಾರ್ಶವಿ ಚೋಪ್ರಾ 20 ರನ್ ವೆಚ್ಚದಲ್ಲಿ 3 ವಿಕೆಟ್ ಪಡೆದು ಮಿಂಚಿದ್ದರು. ಅದೇ ರೀತಿ ಬ್ಯಾಟಿಂಗ್ನಲ್ಲೂ ಮತ್ತೊಮ್ಮೆ ಮಿಂಚಿದ ಶ್ವೇತಾ ಸೆಹ್ರಾವತ್ ಅಜೇಯ 61 ಬಾರಿಸುವ ಮೂಲಕ ಭಾರತ ತಂಡಕ್ಕೆ ಇನ್ನೂ 34 ಎಸೆತಗಳು ಬಾಕಿ ಇರುವಂತೆಯೇ ಗೆಲುವು ತಂದುಕೊಟ್ಟಿದ್ದರು. ಈ ಪ್ರದರ್ಶನವನ್ನು ನೋಡಿದಾಗ ಫೈನಲ್ನಲ್ಲಿ ಭಾರತ ತಂಡಕ್ಕೆ ಎದುರಾಳಿ ಮೇಲೆ ಮೇಲುಗೈ ಸಾಧಿಸುವ ಎಲ್ಲ ಅವಕಾಶಗಳಿವೆ.
ಟೂರ್ನಿಯ ಬಲಿಷ್ಠ ತಂಡಗಳಾದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವೆ ಎರಡನೇ ಸೆಮಿಫೈನಲ್ ಪಂದ್ಯ ನಡೆದಿತ್ತು. ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ 99 ರನ್ಗಳಿಗೆ ಆಲ್ಔಟ್ ಆಗಿದ್ದರೆ ಬಳಿಕ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 96 ರನ್ಗಳಿಗೆ ಸೀಮಿತಗೊಂಡಿತ್ತು.
ಇದನ್ನೂ ಓದಿ : U19 WOMEN’S T20 WORLD CUP : ನ್ಯೂಜಿಲ್ಯಾಂಡ್ ಮಣಿಸಿ ಫೈನಲ್ಗೇರಿದ ಭಾರತದ ವನಿತೆಯರು
ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಬೌಲಿಂಗ್ ವಿಭಾಗವನ್ನು ಎದುರಿಸಲು ಭಾರತ ತಂಡದ ಬ್ಯಾಟರ್ಗಳು ಸಜ್ಜಾಗಬೇಕಿದೆ. ಉಳಿದಂತೆ ಟೂರ್ನಿಯ ಅಜೇಯ ತಂಡವಾಗಿ ಭಾರತ ಫೈನಲ್ಗೇರಿದ್ದು ಪ್ರಶಸ್ತಿ ಗೆಲ್ಲುವ ಎಲ್ಲ ಅವಕಾಶಗಳಿವೆ.