Site icon Vistara News

Shubman Gill : ಮೈದಾನದಲ್ಲಿ ಆಯ್ತು, ಈಗ ತೆರೆ ಮೇಲೂ ಸೆಂಚ್ಯೂರಿ ಹೊಡೆಯೋಕೆ ಬರ್ತಾರಾ ಶುಭಮನ್‌ ಗಿಲ್‌?

#image_title

ಮುಂಬೈ: ಈ ಬಾರಿಯ ಐಪಿಎಲ್‌ನಲ್ಲಿ ಹಲವಾರು ಯುವ ಪ್ರತಿಭೆಗಳು ಮಿಂಚಿವೆ. ರಾಜಸ್ಥಾನ್‌ ರಾಯಲ್ಸ್‌ನ ಜೈಸ್ವಾಲ್‌, ಗುಜರಾತ್‌ ಟೈಟಾನ್ಸ್‌ನ ಶುಭಮನ್‌ ಗಿಲ್‌(Shubman Gill), ಕೋಲ್ಕೊತಾ ನೈಟ್‌ ರೈಡರ್ಸ್‌ನ ರಿಂಕು ಸೇರಿದಂತೆ ಅನೇಕ ಪ್ರತಿಭೆಗಳ ಅದ್ಭುತ ಆಟವನ್ನು ನಾವು ಕಣ್ತುಂಬಿಸಿಕೊಂಡಿದ್ದೇವೆ. ಅದರಲ್ಲೂ ಶುಭಮನ್‌ ಗಿಲ್‌ ಅಂತೂ ಸೆಂಚುರಿ ಮೇಲೆ ಸೆಂಚುರಿ ಹೊಡೆದು ಎಲ್ಲರನ್ನೂ ದಿಗ್ಭ್ರಮೆಗೊಳಿಸಿದ್ದಾಗಿದೆ. ಮೈದಾನದಲ್ಲಿ ಮಿಂಚಿರುವ ಈ ಗಿಲ್‌ ಇದೀಗ ಬಾಲಿವುಡ್‌ಗೆ ಬರುತ್ತಾರಾ ಎನ್ನುವ ಚರ್ಚೆಯೂ ಜೋರಾಗಿದೆ.

ಅಂದ ಹಾಗೆ ಇದೇ ಶುಭಮನ್‌ ಗಿಲ್‌ ಅವರು ʼಸ್ಪೈಡರ್‌ ಮ್ಯಾನ್‌: ಅಕ್ರಾಸ್‌ ದಿ ಸ್ಪೈಡರ್‌ ವರ್ಸ್‌ ಸಿನಿಮಾಕ್ಕೆ ಧ್ವನಿ ನೀಡಿದ್ದಾರೆ. ಒಂದು ಪಾತ್ರಕ್ಕೆ ಹಿಂದಿ ಮತ್ತು ಪಂಜಾಬಿ ಭಾಷೆಯಲ್ಲಿ ಗಿಲ್‌ ಧ್ವನಿಯಾಗಿದ್ದಾರೆ. ಕಂಠದಾನ ಕಲಾವಿದನಾಗಿ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿರುವ ಅವರು ಪರದೆ ಮೇಲೆಯೂ ಕಾಣಿಸಿಕೊಳ್ಳುತ್ತಾರಾ ಎನ್ನುವ ಪ್ರಶ್ನೆ ಅಭಿಮಾನಿಗಳದ್ದಾಗಿದೆ.

ಇದನ್ನೂ ಓದಿ: IPL 2023: ಶುಭಮನ್​ ಗಿಲ್​ ಬ್ಯಾಟಿಂಗ್​ ಪ್ರದರ್ಶನದ ಬಗ್ಗೆ ಸಚಿನ್​ ಹೇಳಿದ ಮಾತುಗಳೇನು?
ಇದೇ ಪ್ರಶ್ನೆಯನ್ನು ʼನ್ಯೂಸ್‌ 18′ ವಾಹಿನಿಯು ಗಿಲ್‌ ಅವರಿಗೆ ಕೇಳಿದೆ. ಅದಕ್ಕೆ ಗಿಲ್‌ ಧನಾತ್ಮಕವಾಗಿಯೇ ಉತ್ತರ ನೀಡಿದ್ದಾರೆ. “ನನಗೆ ಆಸಕ್ತಿ ಇರುವ ಕೆಲಸಗಳಲ್ಲಿ ನಟನೆಯೂ ಒಂದು. ಹಾಗೆಂದ ಮಾತ್ರಕ್ಕೆ ನಾನು ಸಿನಿಮಾಗಳಲ್ಲಿ ನಟಿಸುತ್ತೀನೋ ಇಲ್ಲವೋ ಎನ್ನುವುದು ನನಗೆ ಗೊತ್ತಿಲ್ಲ. ನಾನು ನಟಿಸಲೂ ಬಹುದು, ಇಲ್ಲದೆಯೂ ಇರಬಹುದು. ಆದರೆ ನಟನೆ ಬಗ್ಗೆ ನಾನಂತೂ ನಿಜಕ್ಕೂ ಉತ್ಸುಕನಾಗಿದ್ದೇನೆ” ಎಂದು ಹೇಳಿದ್ದಾರೆ ಶುಭಮನ್‌ ಗಿಲ್‌.‌

“ನಾನು ಕೆಲವೊಮ್ಮೆ ಜೀವನದಲ್ಲಿ ಏನನ್ನಾದರೂ ಮಾಡಬೇಕು ಎಂದು ಬಯಸುತ್ತೇನೆ. ಆ ರೀತಿಯ ಹಂಬಲತೆಯಿಂದಲೇ ಸ್ಪೈಡರ್‌ಮ್ಯಾನ್‌ ಸಿನಿಮಾಕ್ಕೆ ಡಬ್ಬಿಂಗ್‌ ನೀಡುವುದಕ್ಕೆ ಸಾಧ್ಯವಾಯಿತು. ನನಗೆ ನಟನೆಯ ಬಗ್ಗೆ ಆಕರ್ಷಣೆಯಂತೂ ಇದೆ. ತೆರೆಯ ಮೇಲೆ ಬೇರೊಬ್ಬ ವ್ಯಕ್ತಿಯಾಗಿ ಕಾಣಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಆ ಕೌಶಲ್ಯ ನನ್ನದಾಗಬೇಕೆನ್ನುವ ಆಸೆಯಿದೆ. ಆದರೆ ಕ್ಯಾಮೆರಾ ಮುಂದೆ ನಿಲ್ಲತ್ತೇನೋ ಇಲ್ಲವೋ ಎಂದು ನನಗೂ ತಿಳಿದಿಲ್ಲ. ಆ ಬಗ್ಗೆ ನಾನು ಏನನ್ನೂ ಹೇಳಲಾರೆ” ಎಂದು ಗಿಲ್‌ ತಮ್ಮ ಮನದ ಮಾತನ್ನು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Raghav Chadha : ಬಾಲಿವುಡ್‌ಗೂ ಎಂಟ್ರಿ ಕೊಡ್ತಾರಾ ಆಪ್‌ ಎಂಪಿ ರಾಘವ್‌ ಛಡ್ಡಾ? ಫೋಟೊ ವೈರಲ್‌
ಹಾಗೆಯೇ ಗಿಲ್‌ ಅವರು ತಮ್ಮ ಇಷ್ಟದ ಸಿನಿಮಾ ಶೈಲಿಯ ಬಗ್ಗೆಯೂ ಮಾಹಿತಿ ಕೊಟ್ಟಿದ್ದಾರೆ. ಅವರಿಗೆ ಡ್ರಾಮಾ, ಥ್ರಿಲ್ಲರ್‌ ಸಿನಿಮಾಗಳಲ್ಲಿ ಹೆಚ್ಚಿನ ಆಸಕ್ತಿಯಂತೆ. ಅದೇ ಕಾರಣಕ್ಕೆ ಅಲ್ ಪಸಿನೊ, ರಾಬರ್ಟ್ ಡಿ ನಿರೋ, ಜಾನಿ ಡೆಪ್, ಕ್ರಿಶ್ಚಿಯನ್ ಬೇಲ್ ಮತ್ತು ಟಾಮ್ ಹಾರ್ಡಿ ಅವರ ಅಭಿಮಾನಿ ನಾನು ಎಂದು ಹೇಳಿಕೊಂಡಿದ್ದಾರೆ ಗಿಲ್‌.
ಸ್ಪೈಡರ್‌ ಮ್ಯಾನ್‌: ಅಕ್ರಾಸ್‌ ದಿ ಸ್ಪೈಡರ್‌ ವರ್ಸ್‌ ಸಿನಿಮಾ ಇದೇ ಜೂನ್‌ 1ರಂದು ಬಿಡುಗಡೆಯಾಗಲಿದೆ. ಇಂಗ್ಲಿಷ್‌, ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಗುಜರಾತಿ, ಮರಾಠಿ, ಪಂಜಾಬಿ ಮತ್ತು ತೆಲುಗು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.

Exit mobile version