ಲಂಡನ್: ಸರ್ಬಿಯಾದ ಗ್ರ್ಯಾನ್‌ಸ್ಲಾಮ್ ಸರದಾರ ನೊವಾಕ್ ಜೊಕೋವಿಕ್(Novak Djokovic) ಅವರು ವಿಂಬಲ್ಡನ್(Wimbledon 2023) ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ರಷ್ಯಾದ ಆಟಗಾರ ಆ್ಯಂಡ್ರೆ ರುಬ್ಲೇವ್(Andrey Rublev) ಅವರನ್ನು ಮಣಿಸಿ ಸೆಮಿಸ್ಗೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ ರೋಜರ್ ಫೆಡರರ್(Roger Federer) ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಫೆಡರರ್ ಬಳಿಕ ಪುರುಷರ ಸಿಂಗಲ್ಸ್ನಲ್ಲಿ 46ನೇ ಗ್ರ್ಯಾನ್‌ಸ್ಲಾಮ್ ಸೆಮಿಫೈನಲ್ ಪ್ರವೇಶ ಪಡೆದ ಆಟಗಾರ ಎನಿಸಿಕೊಂಡರು.
ಈಗಾಗಲೇ ದಾಖಲೆಯ 23 ಗ್ರ್ಯಾನ್‌ಸ್ಲಾಮ್ ಕಿರೀಟ ಗೆದ್ದಿರುವ ಜೋಕೊಗೆ 24ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲಲು ಇನ್ನೆರಡು ಹರ್ಡಲ್ಸ್ ಮಾತ್ರ ಬಾಕಿಯಿದೆ. ಒಂದೊಮ್ಮೆ ಜೋಕೊ ಅವರು ಈ ಟೂರ್ನಿಯಲ್ಲಿ ಗೆದ್ದರೆ ಅತೀ ಹೆಚ್ಚು 24 ಗ್ರ್ಯಾನ್‌ಸ್ಲಾಮ್ ಗೆದ್ದ ಸಾಧಕಿ ಮಾರ್ಗರೇಟ್ ಕೋರ್ಟ್ ಅವರ ಸಾರ್ವಕಾಲಿಕ ದಾಖಲೆಯನ್ನು ಸರಿದೂಗಿಸಲಿದ್ದಾರೆ.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆ್ಯಂಡ್ರೆ ರುಬ್ಲೆವ್ ವಿರುದ್ಧ ಜೋಕೊ 4-6, 6-1, 6-4, 6-3 ರಿಂದ ಗೆಲುವು ಸಾಧಿಸಿದರು. ಈ ಗೆಲುವಿನೊಂದಿಗೆ ಲಂಡನ್‌ನಲ್ಲಿ ಸತತ ಐದನೇ ಕಿರೀಟ ಮತ್ತು ವಿಂಬಲ್ಡನ್ನ ಎಂಟನೇ ಪ್ರಶಸ್ತಿಯನ್ನು ಗೆದ್ದು ದಾಖಲೆ ನಿರ್ಮಿಸುವ ಜೋಕೊ ಕನಸು ಜೀವಂತವಾಗಿದೆ. ನಾಲ್ಕು ಸೆಟ್ಗಳ ಈ ಹೋರಾಟದಲ್ಲಿ ಮೊದಲ ಸೆಟ್ ಸೋತ ಜೋಕೊ ಬಳಿಕದ ಮೂರು ಸೆಟ್ಗಳಲ್ಲಿ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಪಂದ್ಯದಲ್ಲಿ ಮೇಲುಗೈ ಸಾಧಿಸಿದರು. ಅನುಭವಿ ಆಟಗಾರನ ಮುಂದೆ ಆ್ಯಂಡ್ರೆ ರುಬ್ಲೆವ್ 2 ಮತ್ತು 4ನೇ ಸೆಟ್ನಲ್ಲಿ ಸಂಪೂರ್ಣ ಮಂಕಾದರು. ಮೊದಲ ಸೆಟ್ ಗೆದ್ದು ಮುನ್ನಡೆ ಕಾಯ್ದುಕೊಂಡರು ಇದನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿ ಅಂತಿಮವಾಗಿ ಸೋಲು ಕಂಡರು.
ಇದನ್ನೂ ಓದಿ French Open 2023: ಇಂದಿನಿಂದ ಫ್ರೆಂಚ್ ಓಪನ್; ನಡಾಲ್ ದಾಖಲೆ ಮುರಿಯುವ ವಿಶ್ವಾಸದಲ್ಲಿ ಜೋಕೊ
ನಂ.1 ಆಟಗಾರ್ತಿಗೆ ಸೋಲು
ವಿಶ್ವದ ಅಗ್ರ ಶ್ರೇಯಾಂಕದ ಆಟಗಾರ್ತಿ ಐಗಾ ಸ್ವಿಯಾಟೆಕ್ಗೆ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಆಘಾತಕಾರಿ ಸೋಲು ಎದುರಾಗಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉಕ್ರೇನ್‌ನ ಎಲಿನಾ ಸ್ವಿಟೊಲಿನಾ ಎದುರು 7-5, 6-7, 6-2 ಅಂತರದಿಂದ ಸೋಲು ಕಂಡರು. ಕಳೆದ ಅಕ್ಟೋಬರ್‌ನಲ್ಲಿ ಮಗಳಿಗೆ ಜನ್ಮ ನೀಡಿದ್ದ ಸ್ವಿಟೊಲಿನಾ, ಈ ವರ್ಷದ ಏಪ್ರಿಲ್‌ನಲ್ಲಷ್ಟೇ ಟೆನಿಸ್ ಕೋರ್ಟ್ಗೆ ಮರಳಿದ್ದರು. ಇದೀಗ ವಿಶ್ವದ ನಂ.1 ಆಟಗಾರ್ತಿಗೆ ಸೋಲುಣಿಸಿ ಸೆಮಿಫೈನಲ್ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ. ಅಚ್ಚರಿ ಎಂದರೆ ಸ್ವಿಟೊಲಿನಾ ಈ ಟೂರ್ನಿಗೆ ವೈಲ್ಡ್ಕಾರ್ಡ್ ಎಂಟ್ರಿ ಪಡೆದಿದ್ದರು.