Site icon Vistara News

Wimbledon 2023: ಕ್ವಾರ್ಟರ್​ ಫೈನಲ್ ಪ್ರವೇಶಿಸಿದ ರೋಹನ್ ಬೋಪಣ್ಣ ಜೋಡಿ

rohan bopanna and ebden

ಲಂಡನ್​: ಭಾರತದ ಹಿರಿಯ ಮತ್ತು ಅನುಭವಿ ಟೆನಿಸ್​ ಆಟಗಾರ ರೋಹನ್ ಬೋಪಣ್ಣ(Rohan Bopanna) ಮತ್ತು ಅವರ ಜತೆಗಾರ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌(Matthew Ebden) ಇಲ್ಲಿ ನಡೆಯುತ್ತಿರುವ ವಿಂಬಲ್ಡನ್​ ಟೂರ್ನಿಯ(Wimbledon 2023) ಪುರುಷರ ಡಬಲ್ಸ್​ ವಿಭಾಗದಲ್ಲಿ ಕ್ವಾರ್ಟರ್​ ಫೈನಲ್​ ತಲುಪಿದ್ದಾರೆ. ಕ್ವಾರ್ಟರ್‌ನಲ್ಲಿ ಇಂಡೋ-ಆಸೀಸ್​ ಜೋಡಿ ಡಚ್ ಜೋಡಿಯಾದ ಬಾರ್ಟ್ ಸ್ಟೀವನ್ಸ್ ಮತ್ತು ಟ್ಯಾಲನ್ ಗ್ರೀಕ್ಸ್‌ಪೂರ್ ಅವರ ಸವಾಲು ಎದುರಿಸಲಿದ್ದಾರೆ.

ಅತ್ಯಂತ ಜಿದ್ದಾಜಿದ್ದಿನಿಂದ ನಡೆದ ಪ್ರೀ-ಕ್ವಾರ್ಟರ್​ ಫೈನಲ್​ನಲ್ಲಿ ಬೋಪಣ್ಣ-ಎಬ್ಡೆನ್‌ ಜೋಡಿ ಅಮೆರಿಕದ ಸ್ಟಾಲ್ಡರ್‌ ಮತ್ತು ಡಚ್‌ಮ್ಯಾನ್‌ ಪೆಲ್‌ ಜೋಡಿಯನ್ನು 7-5, 4-6, 7-6 (10-5)ಸೆಟ್​ಗಳಿಂದ ಸೋಲಿಸಿ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಿದರು. ಸೋಮವಾರ ನಡೆದಿದ್ದ 2ನೇ ಸುತ್ತಿನ ಪಂದ್ಯದಲ್ಲಿ ಬ್ರಿಟನ್‌ನ ಜೇಕಬ್‌-ಜೊಹನ್ನಸ್‌ ಮಂಡೇ ವಿರುದ್ಧ ಇಂಡೋ-ಆಸ್ಟ್ರೇಲಿಯನ್​ ಜೋಡಿ 7-5, 6-3 ನೇರ ಸೆಟ್‌ಗಳಿಂದ ಗೆದ್ದು ಫ್ರೀ ಕ್ವಾರ್ಟರ್​ ಪ್ರವೇಶ ಪಡೆದಿದ್ದರು.

ಎಟಿಪಿ ಪುರುಷರ ಡಬಲ್ಸ್ ಶ್ರೇಯಾಂಕದಲ್ಲಿ ವಿಶ್ವದ 12ನೇ ಶ್ರೇಯಾಂಕದ ಬೋಪಣ್ಣ ಮತ್ತು 16ನೇ ಶ್ರೇಯಾಂಕದ ಎಬ್ಡೆನ್ ಮೊದಲ ಸೆಟ್‌ನಲ್ಲಿ ಆಕ್ರಮಣಕಾರಿ ಆಟದ ಮೂಲಕ ಗೆಲುವು ಸಾಧಿಸಿ ಮುನ್ನಡೆ ಕಾಯ್ದುಕೊಂಡರು. ಆದರೆ ದ್ವಿತೀಯ ಸೆಟ್​ನಲ್ಲಿ ಕೆಲ ತಪ್ಪುಗಳಿಂದ ಈ ಸೆಟ್​ನಲ್ಲಿ ಸೋಲು ಕಂಡರು. ಆದರೆ ಮತ್ತೆ ಪುಟಿದೆದ್ದ ಬೋಪಣ್ಣ ಜೋಡಿ ಶಿಸ್ತಿನ ಪ್ರದರ್ಶನ ತೋರುವ ಮೂಲಕ ವಿಜಯ ದುಂದುಭಿ ಮೊಳಗಿಸಿದರು. ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಿಂದಾಗಿ ಮೂರನೇ ಸೆಟ್‌ನ ಆರಂಭ ತಡವಾಯಿತು. ಬೋಪಣ್ಣ ಅವರು ವಿಂಬಲ್ಡನ್‌ 2023ರಲ್ಲಿ ಕ್ವಾರ್ಟರ್​ಫೈನಲ್​ ಪ್ರವೇಶ ಪಡೆದಿದ್ದರು.

ಇದನ್ನೂ ಓದಿ Wimbledon 2023: ಬೋಪಣ್ಣ ಭಾರತದ ಸೂಪರ್​ ಸ್ಟಾರ್​ ; ವಿಂಬಲ್ಡನ್​ನಲ್ಲಿ ಕಂಗೊಳಿಸಿದ ಕನ್ನಡದ ಕಂಪು

ಡೆವಿಸ್​ ಕಪ್​ಗೆ ವಿದಾಯ ಹೇಳಲಿದ್ದಾರೆ ಬೋಪಣ್ಣ

ಬೋಪಣ್ಣ(Rohan Bopanna) ಅವರು ಮುಂದಿನ ಸೆಪ್ಟಂಬರ್‌ನಲ್ಲಿ ಡೇವಿಸ್‌ ಕಪ್‌(Davis Cup) ಟೆನಿಸ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಮೂಲತಃ ಕೊಡಗಿನವರಾದ 43 ವರ್ಷದ ಬೋಪಣ್ಣ ಭಾರತದ ಟೆನಿಸ್​ಗೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ. 2002ರಲ್ಲಿ ಡೇವಿಸ್‌ ಕಪ್‌ಗೆ ಪದಾರ್ಪಣೆ ಮಾಡಿದ ಅವರು ಎಟಿಪಿ ಟೂರ್‌ಗಳಲ್ಲಿ ಸಕ್ರಿಯರಾಗಿದ್ದು, ಭಾರತವನ್ನು 32 ಸ್ಪರ್ಧೆಗಳಲ್ಲಿ ಪ್ರತಿನಿಧಿಸಿ 12 ಸಿಂಗಲ್ಸ್‌ ಮತ್ತು 10 ಡಬಲ್ಸ್‌ ಪಂದ್ಯಗಳಲ್ಲಿ ಗೆಲುವು ಕಂಡಿದ್ದಾರೆ. ದಿಗ್ಗಜ ಲಿಯಾಂಡರ್‌ ಪೇಸ್‌ ಅವರು 58 ಪಂದ್ಯಗಳಲ್ಲಿ ಆಡುವ ಮೂಲಕ ಅತ್ಯಧಿಕ ಪಂದ್ಯವನ್ನಾಡಿದ ದಾಖಲೆ ಹೊಂದಿದ್ದಾರೆ.

Exit mobile version