Site icon Vistara News

Wimbledon 2023: ನಿವೃತ್ತಿಯಾಗಿದ್ದರೂ ವಿಂಬಲ್ಡನ್​ನಲ್ಲಿ ಕಣಕ್ಕಿಳಿಯಲಿದ್ದಾರೆ ಸಾನಿಯಾ ಮಿರ್ಜಾ

Sania Mirza in action at Wimbledon 2022

ಲಂಡನ್​: ಭಾರತ ಖ್ಯಾತ ಟೆಸಿನಸ್​ ತಾರೆ ಸಾನಿಯಾ ಮಿರ್ಜಾ(Sania Mirza) ಅವರು ಈಗಾಗಲೇ ಟೆನಿಸ್​ಗೆ ವಿದಾಯ ಹೇಳಿದ್ದಾರೆ. ಆದರೆ ಅವರು ಮತ್ತೆ ಟೆನಿಸ್​ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲಂಡನ್​ನಲ್ಲಿ ಇಂದಿನಿಂದ ಆರಂಭಗೊಳ್ಳುವ ಪ್ರತಿಷ್ಠಿತ ವಿಂಬಲ್ಡನ್ ಗ್ರ್ಯಾನ್‌ಸ್ಲಾಂ(Wimbledon 2023) ಟೂರ್ನಿಯ ಆಹ್ವಾನಿತ ಮಹಿಳಾ ಡಬಲ್ಸ್​ನಲ್ಲಿ ಆಡಲಿದ್ದಾರೆ. ಈ ಮೂಲಕ ನೆಚ್ಚಿನ ಆಟಗಾರ್ತಿಯ ಆಟವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಂತಾಗಿದೆ.

24ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟ ಜೋಕೊ

ಸರ್ಬಿಯಾದ ಗ್ರ್ಯಾನ್‌ಸ್ಲಾಮ್‌ ಸರದಾರ ನೊವಾಕ್‌ ಜೊಕೋವಿಕ್‌(Novak Djokovic) ಈ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ. ಇತ್ತೀಚೆಗಷ್ಟೇ ಅವರು ಫ್ರೆಂಚ್​ ಓಪನ್​ ಕಿರೀಟ ಗೆದ್ದು ದಾಖಲೆಯ 23 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದು ನೂತನ ಮೈಲುಗಲ್ಲು ನೆಟ್ಟಿದ್ದರು. ಇದೀಗ ತಮ್ಮ ಪ್ರಶಸ್ತಿ ಸಂಖ್ಯೆಯನ್ನು 24ಕ್ಕೆ ವಿಸ್ತರಿಸುವ ಆತ್ಮವಿಶ್ವಾಸದಲ್ಲಿದ್ದಾರೆ. ಇಲ್ಲಿ ಗೆದ್ದರೆ ಇನ್ನೊಂದು ನೂತನ ದಾಖಲೆ ಬರೆಯಲಿದ್ದಾರೆ. ಅತಿ ಹೆಚ್ಚು 24 ಗ್ರ್ಯಾನ್‌ಸ್ಲಾಮ್‌ ಗೆದ್ದ ಸಾಧಕಿ ಮಾರ್ಗರೇಟ್‌ ಕೋರ್ಟ್‌ ಅವರ ಸಾರ್ವಕಾಲಿಕ ದಾಖಲೆಯನ್ನು ಸರಿದೂಗಿಸಲಿದ್ದಾರೆ. ನೊವಾಕ್‌ ಜೊಕೋವಿಕ್‌ ಆರ್ಜೆಂಟೀನಾದ ಪೆಡ್ರೊ ಕ್ಯಾಶಿನ್‌ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ. ಜೊಕೋವಿಕ್‌ 2011ರಿಂದ ಈವರೆಗೆ 7 ವಿಂಬಲ್ಡನ್‌ ಟ್ರೋಫಿಗಳನ್ನು ಗೆದ್ದಿದ್ದಾರೆ.

ವಿಶ್ವದ ನಂ.1 ಆಟಗಾರನಾಗಿರುವ ಕಾರ್ಲೋಸ್‌ ಅಲ್ಕರಾಜ್‌(Carlos Alcaraz) ಫ್ರಾನ್ಸ್‌ನ ಜೆರೆಮಿ ಚಾರ್ಡಿ ವಿರುದ್ಧ ಆಡಲಿದ್ದಾರೆ. ವಿಶ್ವದ ನಂ.6 ಆಟಗಾರನಾಗಿರುವ ರುನೆ ಪ್ರಥಮ ಸುತ್ತಿನಲ್ಲಿ ಇಂಗ್ಲೆಂಡ್‌ನ‌ ವೈಲ್ಡ್‌ಕಾರ್ಡ್‌ ಆಟಗಾರ ಜಾರ್ಜ್‌ ಲೊಫಾಜೆನ್‌ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. 5ನೇ ಶ್ರೇಯಾಂಕದ ಗ್ರೀಕ್‌ ಟೆನಿಸಿಗ ಸಿಸಿಪಸ್‌ ಮೊದಲ ಸುತ್ತಿನ ಸವಾಲಿನಲ್ಲಿ 2020ರ ಯುಎಸ್‌ ಓಪನ್‌ ಚಾಂಪಿಯನ್‌ ಡೊಮಿನಿಕ್‌ ಥೀಮ್‌ ವಿರುದ್ಧ ಆಡಲಿದ್ದಾರೆ. ಡ್ಯಾನಿಲ್‌ ಮೆಡ್ವೆಡೇವ್‌ ಇಂಗ್ಲೆಂಡ್‌ನ‌ ಆರ್ಥರ್‌ ಫೆರ್ರಿ ವಿರುದ್ಧ, ಫ್ರೆಂಚ್‌ ಓಪನ್‌ ರನ್ನರ್‌ ಅಪ್‌ ಕ್ಯಾಸ್ಪರ್‌ ರೂಡ್‌ ಫ್ರಾನ್ಸ್‌ನ ಅರ್ಹತಾ ಆಟಗಾರ ಲಾರೆಂಟ್‌ ಲೊಕೊಲಿ ವಿರುದ್ಧ ಸೆಣಸುವರು. ನಿಕ್‌ ಕಿರ್ಗಿಯೋಸ್‌ ಬೆಲ್ಜಿಯಂನ ಡೇವಿಡ್‌ ಗೊಫಿನ್‌ ಸವಾಲು ಎದುರಿಸಲಿದ್ದಾರೆ.

ಇದನ್ನೂ ಓದಿ Sania Mirza: ಸಾನಿಯಾ ಮಿರ್ಜಾ ಭಾರತದ ಚಾಂಪಿಯನ್​; ಪ್ರಧಾನಿ ಮೋದಿ ಪ್ರಶಂಸೆ

ಮತ್ತೊಂದು ಪ್ರಶಸ್ತಿ ನಿರೀಕ್ಷೆಯಲ್ಲಿ ಸ್ವಿಯಾಟೆಕ್‌

ವಿಶ್ವದ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್‌(Iga Swiatek) ಅವರು ಮೊದಲ ವಿಂಬಲ್ಡನ್‌ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. ಫ್ರೆಂಚ್​ ಓಪನ್​ ಚಾಂಪಿಯನ್​ ಆಗಿರುವ ಅವರು ಚೀನದ ಝು ಲಿನ್‌ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ. ಕ್ವಾರ್ಟರ್‌ ಫೈನಲ್‌ನಲ್ಲಿ ಕೊಕೊ ಗಾಫ್ ಎದುರಾಗುವ ಸಾಧ್ಯತೆ ಇದೆ. ವಿಶ್ವದ ನಂ.2 ಆಟಗಾರ್ತಿ, ಹಾಲಿ ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌ ಅರಿನಾ ಸಬಲೆಂಕಾ ಹಂಗೇರಿಯ ಪನ್ನಾ ಯುಡ್ವಾರ್ಡಿ ವಿರುದ್ಧ ಸ್ಪರ್ಧೆ ಆರಂಭಿಸಲಿದ್ದಾರೆ. 5 ಬಾರಿಯ ಚಾಂಪಿಯನ್‌ ವೀನಸ್‌ ವಿಲಿಯಮ್ಸ್‌ ಕೂಡ ಸ್ಪರ್ಧೆಯಲ್ಲಿದ್ದಾರೆ. ಅವರು ಎಲಿನಾ ಸ್ವಿಟೋಲಿನಾ ವಿರುದ್ಧ ಆಡಲಿದ್ದಾರೆ.

Exit mobile version