ಲಂಡನ್: ಮುಂದಿನ ತಿಂಗಳು ಆರಂಭಗೊಳ್ಳಲಿರುವ ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿಯಿಂದ(Wimbledon 2024) 22 ಬಾರಿ ಗ್ರ್ಯಾಂಡ್ ಸ್ಲಾಮ್ ವಿಜೇತ, ಸ್ಪೇನ್‌ನ ಟೆನಿಸ್ ದಿಗ್ಗಜ ರಫೆಲ್ ನಡಾಲ್(Rafael Nadal) ಅವರು ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಈ ವಿಚಾರವನ್ನು ಸ್ವತಃ ಅವರೇ ಟ್ವೀಟ್ ಮಾಡುವ ಮೂಲಕ ದೃಢಪಡಿಸಿದ್ದಾರೆ.
“ಆವೆ ಮಣಿನ ಮೈದಾನದಲ್ಲಿ ಹೆಚ್ಚಿನ ಅಭ್ಯಾಸ ನಡೆಸುತ್ತಿದ್ದು ಈ ಮೂಲಕ ನಾನು ಮತ್ತೆ ಫಿಟ್ನಿಸ್ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಹೀಗಾಗಿ ನಾನು ಈ ವರ್ಷ ವಿಂಬಲ್ಡನ್ ಚಾಂಪಿಯನ್ ಶಿಪ್ನಲ್ಲಿ ಆಡುವುದನ್ನು ತಪ್ಪಿಸಿಕೊಳ್ಳುತ್ತೇನೆ. ಗ್ರಾಸ್ ಕೋರ್ಟ್ ವಿಂಬಲ್ಡನ್ ಆಡುವುದೇ ಒಂದು ಖಷಿ. ಅತ್ಯಂತ ಶಿಸ್ತಿನ ಟೂರ್ನಿಯಾದ ವಿಂಬಲ್ಡನ್ನಲ್ಲಿ ಈ ಬಾರಿ ಆಡದಿರುವುದು ನಿಜಕ್ಕೂ ಬೇಸರ ತಂದಿದೆ. ನಾನು ನಿಮ್ಮೆಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತೇನೆ” ಎಂದು ಬರೆದುಕೊಂಡು ಟೂರ್ನಿಯಿಂದ ಹಿಂದೆ ಸರಿದ ವಿಚಾರವನ್ನು ಪ್ರಕಟಿಸಿದ್ದಾರೆ.
ಸ್ನಾಯು ಸೆಳೆತದಿಂದ ಬರೋಬ್ಬರಿ ಒಂದು ವರ್ಷ ಟೆನಿಸ್ನಿಂದ ದೂರ ಉಳಿದಿದ್ದ ನಡಾಲ್ ಇದೇ ವರ್ಷಾರಂಭದಲ್ಲಿ ನಡೆದಿದ್ದ ಬ್ರಿಸ್ಬೇನ್ ಇಂಟರ್‌ನ್ಶಾಶನಲ್ ಕಣಕ್ಕಿಳಿದಿದ್ದರು. ಆದರೆ ಮತ್ತೆ ಗಾಯಕ್ಕೆ ತುತ್ತಾಗಿ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್ ಕೂಟದಿಂದ ಹಿಂದೆ ಸರಿದಿದ್ದರು. ಗಾಯದಿಂದ ಚೇತರಿಕೊಂಡು ಈ ಬಾರಿಯ ಫ್ರೆಂಚ್ ಓಪನ್ನಲ್ಲಿ ಆಡಿದ್ದ ನಡಾಲ್ ಮೊದಲ ಸುತ್ತಿನಲ್ಲಿ ಸೋತು ಆಘಾತ ಎದುರಿಸಿದ್ದರು.
ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಕೆ ಕಾಣದಿದ್ದರೂ ಕೂಡ ತಮ್ಮ ದೇಶಕ್ಕಾಗಿ ಒಲಿಂಪಿಕ್ಸ್ ಆಡುವುದಾಗಿ ಹೇಳಿದ್ದರು. ಕೊಟ್ಟ ಮಾತಿನಂತೆ ಅವರು ಈ ಬಾರಿ ತವರಿನ ಅಭಿಮಾನಿಗಳ ಸಮ್ಮುಖದಲ್ಲೇ ಒಲಿಂಪಿಕ್ಸ್ ಆಡಲಿದ್ದಾರೆ. “ಎರಡು ವರ್ಷಗಳಿಂದ ನನ್ನ ದೇಹವು ಸರಿಯಾಗಿ ಸ್ಪಂದಿಸುತ್ತಿಲ್ಲ. ಆದರೆ, ಒಲಿಂಪಿಕ್ಸ್ ಆಡಲು ಸಿದ್ಧನಿದ್ದೇನೆ ಎಂದು ಭಾವಿಸಿದ್ದೇನೆ” ಎಂದು ನಡಾಲ್ ಹೇಳಿದ್ದಾರೆ.
ಇದನ್ನೂ ಓದಿ Rafael Nadal: ಲೇವರ್ ಕಪ್ ಬಳಿಕ 22 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ನಡಾಲ್ ನಿವೃತ್ತಿ!
ಒಲಿಂಪಿಕ್ಸ್ ಬಳಿಕ ನಿವೃತ್ತಿ ಸಾಧ್ಯತೆ?
‘ಮುಂದೆ ಏನಾಗಬಹುದೆಂದು ಈಗಲೇ ಹೇಳಲು ಸಾಧ್ಯವಿಲ್ಲ. ನಾನೇ ನನಗೊಂದು ಅವಕಾಶ ನೀಡಬೇಕಿದೆ. ಹಿಂದೆಯೂ ಅನೇಕ ಸಲ ಗಾಯದಿಂದ ತೇಚರಿಸಿ ಟೆನಿಸ್ ಅಂಗಳಕ್ಕೆ ಮರಳಿ ಟ್ರೋಫಿ ಗೆದ್ದಿದ್ದೇನೆ. ದೈಹಿಕವಾಗಿ ನಾನು ಗಟ್ಟಿಯಾಗಿದ್ದು ಆಡುವ ಮನಸ್ಸು ಇದ್ದಾಗ ನಾನೇಕೆ ಈಗಲೇ ನಿವೃತ್ತಿಗೆ ಕಾಲ ನಿಗದಿಪಡಿಸಲಿ” ಎಂದು ಹೇಳುವ ಮೂಲಕ ತಮ್ಮ ನಿವೃತ್ತಿ ಸದ್ಯಕ್ಕಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದರು. ಆದರೆ ಅವರನ್ನು ಗಾಯ ಬೆನ್ನು ಬಿಡುವಂತೆ ತೋರುತ್ತಿಲ್ಲ ಹೀಗಾಗಿ ಅವರು ಒಲಿಂಪಿಕ್ಸ್ ಬಳಿಕ ವಿದಾಯ ಘೋಷಿಸಿದರೂ ಅಚ್ಚರಿಯಿಲ್ಲ.
ಒಲಿಂಪಿಕ್ಸ್ನಲ್ಲಿ ರಾಫೆಲ್ ನಡಾಲ್ ಮತ್ತು ಹಾಲಿ ಫ್ರೆಂಚ್ ಓಪನ್ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್(Carlos Alcaraz) ಜತೆಯಾಗಿ ಕಣಕ್ಕಿಳಿಯಲಿದ್ದಾರೆ. ಕಾರ್ಲೋಸ್ ಅಲ್ಕರಾಜ್ ಮತ್ತು ರಾಫೆಲ್ ನಡಾಲ್ ಪುರುಷರ ಡಬಲ್ಸ್ ಸ್ಪರ್ಧೆಯಲ್ಲಿ 15 ರೋಲ್ಯಾಂಡ್ ಗ್ಯಾರೋಸ್(Roland Garros) ಪ್ರಶಸ್ತಿಗಳೊಂದಿಗೆ ಉತ್ತಮ ಪ್ರಾಬಲ್ಯ ಹೊಂದಿದ್ದಾರೆ. ಮುಂಬರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಟೆನಿಸ್ ಸ್ಪರ್ಧೆಯನ್ನು ಪ್ಯಾರಿಸ್‌ನ ಕ್ಲೇ ಕೋರ್ಟ್‌ನಲ್ಲಿ ಆಡಲಾಗುತ್ತದೆ. ಕ್ಲೇ ಕೋರ್ಟ್ ಕಿಂಗ್ ಎನಿಸಿಕೊಂಡಿರುವ ನಡಾಲ್ಗೆ ಪ್ರಶಸ್ತಿ ಗೆಲ್ಲಲು ಇದು ಉತ್ತಮ ಅವಕಾಶವಾಗಿದೆ.