ಲಂಡನ್: ನಿನ್ನೆ(ಭಾನುವಾರ) ನಡೆದಿದ್ದ ವಿಂಬಲ್ಡನ್ ಫೈನಲ್‌ನಲ್ಲಿ(Wimbledon Final) ಅನುಭವಿ ಹಾಗೂ 24 ಗ್ರ್ಯಾನ್‌ಸ್ಲಾಂ ಸರದಾರ ನೋವಾಕ್ ಜೋಕೋವಿಕ್(Novak Djokovic) ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ, 21 ವರ್ಷದ ಕಾರ್ಲೊಸ್ ಅಲ್ಕರಾಜ್(Carlos Alcaraz) ಬರೋಬ್ಬರಿ 28 ಕೋಟಿ ಪ್ರಶಸ್ತಿ ಮೊತ್ತವನ್ನು ತಮ್ಮದಾಗಿಸಿಕೊಂಡಿದ್ದಾರೆ. ರನ್ನರ್ ಅಪ್ ಜೋಕೋವಿಕ್ಗೆ 14 ಕೋಟಿ ರೂ. ಲಭಿಸಿದೆ.
ಫೈನಲ್ ಹಣಾಹಣಿಯಲ್ಲಿ ಸಂಪೂರ್ಣ ಜೋಶ್ನಿಂದಲೇ ಆಡಿದ ಅಲ್ಕರಾಜ್ ಯಾವುದೇ ಸೆಟ್ನಲ್ಲಿಯೂ ವಿಚಲಿತರಾಗದೆ ಅನುಭವಿ ಜೊಕೋವಿಕ್ ಅವರನ್ನು 6-2, 6-2, 7-6 (7-4) ನೇರ ಸೆಟ್‌ಗಳಲ್ಲಿ ಮಣಿಸಿದರು. ಕಳೆದ ವರ್ಷ(2023) ನಡೆದಿದ್ದ ಫೈನಲ್ ಪಂದ್ಯದಲ್ಲಿಯೂ ಜೊಕೋವಿಕ್ ಮತ್ತು ಅಲ್ಕರಾಜ್ ಮುಖಾಮುಖಿಯಾಗಿದ್ದರು. ಈ ಬಾರಿಯೂ ಅಲ್ಕರಾಜ್ ಕೈ ಮೇಲಾಗಿದೆ. ಸೋಲು ಕಂಡ ಜೋಕೊ, ಟೆನಿಸ್ ಗ್ರ್ಯಾನ್ ಸ್ಲಾಂ ಇತಿಹಾಸದಲ್ಲಿ ಹದಿಮೂರು ಫೈನಲ್ ಪಂದ್ಯಗಳನ್ನು ಸೋತ ಮೊದಲ ಟೆನಿಸಿಗ ಎನ್ನುವ ಕುಖ್ಯಾತಿಗೆ ಪಾತ್ರರಾದರು.
ಜೋಕೋವಿಕ್ ಅವರನ್ನು ಗ್ರ್ಯಾಂಡ್‌ಸ್ಲಾಂ ಫೈನಲ್‌ಗಳಲ್ಲಿ ಸತತವಾಗಿ 2 ವರ್ಷ ಸೋಲಿಸಿದ ಕೇವಲ 2ನೇ ಆಟಗಾರ ಎನ್ನುವ ಕೀರ್ತಿಗೆ ಅಲ್ಕರಾಜ್ ಪಾತ್ರರಾದರು. ಇದಕ್ಕೂ ಮುನ್ನ ರಾಫೆಲ್ ನಡಾಲ್ ಅವರು ಜೋಕೊ ವಿರುದ್ಧ ಸತತ 2 ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿ ಗೆದ್ದಿದ್ದರು.
ಅಲ್ಕರಜ್ ಗ್ರ್ಯಾನ್‌ಸ್ಲಾಂ ಟೂರ್ನಿಯ ಫೈನಲ್‌ಗೇರಿದ ಎಲ್ಲ ಬಾರಿಯೂ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು. 2022ರ ಯುಎಸ್ ಓಪನ್, 2023ರ ವಿಂಬಲ್ಡನ್ ಹಾಗೂ 2024ರ ಫ್ರೆಂಚ್ ಓಪನ್‌ನಲ್ಲಿ ಗೆದ್ದಿದ್ದ ಅಲ್ಕರಜ್, 2024ರ ವಿಂಬಲ್ಡನ್ ಫೈನಲ್ ಗೆದ್ದ ಸಾಧನೆ ಮಾಡಿದ್ದಾರೆ.
ಒಲಿಂಪಿಕ್ಸ್ನಲ್ಲಿಯೂ ಚಿನ್ನ ಗೆಲ್ಲುವ ವಿಶ್ವಾಸ
ಜುಲೈ 26 ರಿಂದ ಆಗಸ್ಟ್ 11 ರವರೆಗೆ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ(Paris Olympics 2024) ಪುರುಷರ ಡಬಲ್ಸ್ ಸ್ಪರ್ಧೆಯಲ್ಲಿ 22 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ರಾಫೆಲ್ ನಡಾಲ್(Rafael Nadal) ಮತ್ತು ಹಾಲಿ ಫ್ರೆಂಚ್ ಓಪನ್ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್(Carlos Alcaraz) ಜತೆಯಾಗಿ ಕಣಕ್ಕಿಳಿಯಲಿದ್ದಾರೆ.
ಸ್ನಾಯು ಸೆಳೆತದಿಂದ ಬರೋಬ್ಬರಿ ಒಂದು ವರ್ಷ ಟೆನಿಸ್ನಿಂದ ದೂರ ಉಳಿದಿದ್ದ ನಡಾಲ್ ಇದೇ ವರ್ಷಾರಂಭದಲ್ಲಿ ನಡೆದಿದ್ದ ಬ್ರಿಸ್ಬೇನ್ ಇಂಟರ್‌ನ್ಶಾಶನಲ್ ಕಣಕ್ಕಿಳಿದಿದ್ದರು. ಆದರೆ ಮತ್ತೆ ಗಾಯಕ್ಕೆ ತುತ್ತಾಗಿ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್ ಕೂಟದಿಂದ ಹಿಂದೆ ಸರಿದಿದ್ದರು. ಗಾಯದಿಂದ ಚೇತರಿಕೊಂಡು ಈ ಬಾರಿಯ ಫ್ರೆಂಚ್ ಓಪನ್‌ನಲ್ಲಿ ಆಡಿದ್ದ ನಡಾಲ್ ಮೊದಲ ಸುತ್ತಿನಲ್ಲಿ ಸೋತು ಆಘಾತ ಎದುರಿಸಿದ್ದರು.
ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಕೆ ಕಾಣದಿದ್ದರೂ ಕೂಡ ತಮ್ಮ ದೇಶಕ್ಕಾಗಿ ಒಲಿಂಪಿಕ್ಸ್ ಆಡುವುದಾಗಿ ಹೇಳಿದ್ದರು. ಕೊಟ್ಟ ಮಾತಿನಂತೆ ಅವರು ಈ ಬಾರಿ ತವರಿನ ಅಭಿಮಾನಿಗಳ ಸಮ್ಮುಖದಲ್ಲೇ ಒಲಿಂಪಿಕ್ಸ್ ಆಡಲಿದ್ದಾರೆ. “ಎರಡು ವರ್ಷಗಳಿಂದ ನನ್ನ ದೇಹವು ಸರಿಯಾಗಿ ಸ್ಪಂದಿಸುತ್ತಿಲ್ಲ. ಆದರೆ, ಒಲಿಂಪಿಕ್ಸ್ ಆಡಲು ಸಿದ್ಧನಿದ್ದೇನೆ ಎಂದು ಭಾವಿಸಿದ್ದೇನೆ” ಎಂದು ನಡಾಲ್ ಹೇಳಿದ್ದಾರೆ.