ದುಬೈ : ಭಾರತ ಹಾಗೂ ಪಾಕಿಸ್ತಾನ ತಂಡಗಳ ಆಟಗಾರರು (Ind vs Pak) ದುಬೈನಲ್ಲಿ ಪರಸ್ಪರ ಕೈ ಕುಲುಕುತ್ತಾ ಮಾತನಾಡುತ್ತಿದ್ದಾರೆ. ಹೀಗಾಗಿ ಏಷ್ಯಾ ಕಪ್ ಟೂರ್ನಿಯಲ್ಲಿ ಇತ್ತಂಡಗಳ ನಡುವಿನ ಪಂದ್ಯ ಜಿದ್ದು ಕಳೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಟೀಮ್ ಇಂಡಿಯಾದ ಉಪನಾಯಕ ಕೆ. ಎಲ್ ರಾಹುಲ್ ಆ ರೀತಿಯ ಆಗಲು ಸಾಧ್ಯವೇ ಇಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಹಳೆ ಸೋಲಿಗೆ ಸೇಡು ತೀರಿಸಿಕೊಳ್ಳುವುದು ಖಾತರಿ ಎಂದು ಹೇಳಿದ್ದಾರೆ.
ಕಳೆದ ವರ್ಷ ದುಬೈ ಸ್ಟೇಡಿಯಮ್‌ನಲ್ಲಿ ನಡೆದ ಟಿ೨೦ ವಿಶ್ವ ಕಪ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ೧೦ ವಿಕೆಟ್‌ಗಳ ಹೀನಾಯ ಸೋಲಿಗೆ ಒಳಗಾಗಿತ್ತು. ಹೀಗಾಗಿ ಭಾರತ ತಂಡ ಹಳೆ ಸೋಲಿಗೆ ಪ್ರತಿಕಾರ ತೀರಿಸಲಿದೆ ಎಂದು ಹೇಳಲಾಗುತ್ತಿದೆ. ಕೆ. ಎಲ್ ರಾಹುಲ್ ಕೂಡ ಅದು ಹೌದು ಎನ್ನುತ್ತಿದ್ದಾರೆ.
“ಪ್ರತಿಯೊಂದು ತಂಡವೂ ಗೆಲುವಿನೊಂದಿಗೆ ವಿಶ್ವ ಕಪ್ ಅಭಿಯಾನ ಆರಂಭಿಸುತ್ತದೆ. ಆದರೆ, ಕಳೆದ ವರ್ಷದ ವಿಶ್ವ ಕಪ್‌ನಲ್ಲಿ ಬಲಿಷ್ಠ ಪಾಕಿಸ್ತಾನದ ವಿರುದ್ಧ ಸೋಲು ಕಂಡೆವು. ಆದರೆ ಈ ಬಾರಿ ಆ ರೀತಿ ಆಗುವುದಿಲ್ಲ. ನಾವು ತಿರುಗೇಟು ಕೊಡುವುದು ಖಚಿತ,ʼʼ ಎಂದು ರಾಹುಲ್ ನುಡಿದಿದ್ದಾರೆ.
“ಭಾರತದ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವೆ ಹಳೆಯ ಜಿದ್ದು ಇದ್ದೇ ಇದೆ. ಆಟಗಾರರಾಗಿ ನಾವು ಪರಸ್ಪರ ಜಿದ್ದಾಜಿದ್ದಿನ ಪ್ರದರ್ಶನ ನೀಡಲು ಉತ್ಸುಕರಾಗಿದ್ದೇವೆʼʼ ಎಂದು ಹೇಳಿದ್ದಾರೆ.
ಇದನ್ನೂ ಓದಿ | Ind vs Pak | ಭಾರತ – ಪಾಕಿಸ್ತಾನ ಏಷ್ಯಾ ಕಪ್ ಹಣಾಹಣಿಗಳ ಆಸಕ್ತಿಕರ ಸಂಗತಿಗಳು ಇಲ್ಲಿವೆ