Site icon Vistara News

ಶಿಬಿರದಲ್ಲಿ ಅನುಚಿತವಾಗಿ ವರ್ತಿಸಿದರು; ಮುಖ್ಯ ಕೋಚ್‌ ವಿರುದ್ಧ ದೂರು ನೀಡಿದ ಪ್ರಮುಖ ಮಹಿಳಾ ಸೈಕ್ಲಿಸ್ಟ್‌

Cycling

ನವ ದೆಹಲಿ: ರಾಷ್ಟ್ರೀಯ ಸೈಕ್ಲಿಂಗ್‌ ಸ್ಪ್ರಿಂಟ್‌ ಟೀಮ್‌ನ ಮುಖ್ಯ ಕೋಚ್‌ ಆರ್‌.ಕೆ.ಶರ್ಮಾ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಪ್ರಮುಖ ಮಹಿಳಾ ಸಕ್ಲಿಸ್ಟ್‌ವೊಬ್ಬರು ಆರೋಪ (Woman Cyclist Complaint) ಮಾಡಿದ್ದಾರೆ. ಜೂನ್‌ 18ರಿಂದ 22ರವರೆಗೆ ದೆಹಲಿಯಲ್ಲಿ ನಡೆಯಲಿರುವ ಏಷ್ಯನ್‌ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ನ ಪೂರ್ವಭಾವಿ ಸಿದ್ಧತೆಯ ಕ್ಯಾಂಪ್‌ ಮಧ್ಯ ಯುರೋಪ್‌ ದೇಶ ಸ್ಲೊವೇನಿಯಾದಲ್ಲಿ ನಡೆಯುತ್ತಿದೆ. ಈ ಶಿಬಿರದಲ್ಲಿ ಆರ್‌.ಕೆ.ಶರ್ಮಾ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮಹಿಳಾ ಸೈಕ್ಲಿಸ್ಟ್‌ ಆರೋಪ ಮಾಡಿದ್ದು, ದೂರನ್ನು ಭಾರತೀಯ ಕ್ರೀಡಾ ಪ್ರಾಧಿಕಾರ (SAI)ಕ್ಕೆ ಇ-ಮೇಲ್‌ ಮೂಲಕ ಕಳಿಸಿದ್ದಾರೆ. ದೂರು ಪಡೆದ ತಕ್ಷಣ ಆ ಮಹಿಳೆಯನ್ನು ಭಾರತಕ್ಕೆ ವಾಪಸ್‌ ಕರೆತರಲಾಗಿದೆ.

ಸೈಕ್ಲಿಂಗ್‌ ಫೆಡರೇಶನ್‌ ಆಫ್‌ ಇಂಡಿಯಾದ (CFI) ಶಿಫಾರಸ್ಸಿಗೆ ಅನುಗುಣವಾಗಿಯೇ ಈ ಕೋಚ್‌ ನೇಮಕವಾಗಿತ್ತು. ಇದೀಗ ಮಹಿಳಾ ಸೈಕ್ಲಿಸ್ಟ್‌ ದೂರಿನ ನಂತರ ಸಮಗ್ರ ತನಿಖೆಗಾಗಿ ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಸೈಕ್ಲಿಂಗ್‌ ಫೆಡರೇಶನ್‌ ಆಫ್‌ ಇಂಡಿಯಾ ಪ್ರತ್ಯೇಕ ಸಮಿತಿಗಳನ್ನು ರಚನೆ ಮಾಡಿವೆ. ಅದರ ಬೆನ್ನಲ್ಲೇ ಹೇಳಿಕೆ ಬಿಡುಗಡೆ ಮಾಡಿರುವ ಸೈಕ್ಲಿಂಗ್‌ ಫೆಡರೇಶನ್‌ ಆಫ್‌ ಇಂಡಿಯಾ, ʼಮಹಿಳಾ ಸೈಕ್ಲಿಸ್ಟ್‌ವೊಬ್ಬರು ಮುಖ್ಯ ಕೋಚ್‌ ಆರ್‌.ಕೆ. ಶರ್ಮಾ ವಿರುದ್ಧ ದೂರು ನೀಡಿದ್ದಾರೆ. ಅವರು ಸ್ಲೊವೇನಿಯಾದಲ್ಲಿ ತರಬೇತಿ ಕ್ಯಾಂಪ್‌ನಲ್ಲಿದ್ದರು. ಸೈಕ್ಲಿಸ್ಟ್‌ ದೂರನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ತನಿಖೆ ವರದಿ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆʼ ಎಂದು ಹೇಳಿದೆ.

ಸೈಕ್ಲಿಂಗ್‌ ಫೆಡರೇಶನ್‌ ಆಫ್‌ ಇಂಡಿಯಾ ರಚಿಸಿರುವ ಸಮಿತಿಯಲ್ಲಿ ಪ್ರಧಾನ ಕಾರ್ಯದರ್ಶಿ ಮನೀಂದರ್‌ ಸಿಂಗ್‌ ಪಾಲ್‌, ಕೇರಳ ಸೈಕ್ಲಿಂಗ್‌ ಅಧ್ಯಕ್ಷ ಎಸ್‌.ಎಸ್‌.ಸುಧೀಶ್‌ ಕುಮಾರ್‌, ಮಹಾರಾಷ್ಟ್ರ ಸೈಕ್ಲಿಂಗ್‌ ತಂಡದ ಮುಖ್ಯ ಕೋಚ್‌ ಎಂ.ಎಸ್‌.ದೀಪಾಲಿ ನಿಕಾಮ್‌, ಸಿಎಫ್‌ಐ ಸಹಾಯಕ ಕಾರ್ಯದರ್ಶಿ ವಿ.ಎನ್‌.ಸಿಂಗ್‌ ಇದ್ದಾರೆ. ಇದರಲ್ಲಿ ವಿ.ಎನ್‌.ಸಿಂಗ್‌ ಈಗಾಗಲೇ ದೂರುದಾಳನ್ನು ಭೇಟಿಯಾಗಿದ್ದಾರೆ ಎಂದೂ ವರದಿಯಾಗಿದೆ.

ಇದನ್ನೂ ಓದಿ: ಹಿಜಾಬ್‌ ಬೇಕೆಂದು ಪಟ್ಟು ಹಿಡಿದ 24 ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರ್ಬಂಧ

Exit mobile version